ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪ್ರಯೋಗಗಳಿಗೆ ವಿದ್ಯಾರ್ಥಿಗಳು ಬೆರಗು

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸಿ.ವಿ.ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಮುಕ್ತ ದಿನ
Last Updated 28 ಫೆಬ್ರುವರಿ 2020, 20:19 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿ.ವಿ.ರಾಮನ್ ಬಗ್ಗೆ ಪುಸ್ತಕದಲ್ಲಿ ಓದಿದ್ದೆವು. ಇಲ್ಲಿ ಅವರ ಸಂಶೋಧನಾ ವಸ್ತುಗಳನ್ನು ಸಂರಕ್ಷಿಸಲಾಗಿದೆ. ಇದನ್ನು ವೀಕ್ಷಿಸಿದ ಬಳಿಕ ವಿಜ್ಞಾನದ ಮೇಲೆ ಆಸಕ್ತಿ ಹೆಚ್ಚಾಗಿದೆ. ವೈಜ್ಞಾನಿಕ ಆವಿಷ್ಕಾರಗಳನ್ನು ನೇರವಾಗಿ ಕಂಡು ಮೂಕವಿಸ್ಮಿತರಾದೆವು...’

ನಗರದ ಸಿ.ವಿ.ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಓಪನ್ ಡೇ’ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಂಚಿಕೊಂಡ ಅನಿಸಿಕೆಗಳಿವು.

ಭೌತವಿಜ್ಞಾನಿ ಸಿ.ವಿ.ರಾಮನ್ ಅವರು ‘ರಾಮನ್ ಪರಿಣಾಮ’ವನ್ನು ಕಂಡುಹಿಡಿದ ಸ್ಮರಣಾರ್ಥ ಪ್ರತಿವರ್ಷ ಫೆ.28ರಂದು ‘ರಾಷ್ಟ್ರೀಯ ವಿಜ್ಞಾನ ದಿನ’ ಆಚರಿಸಲಾಗುತ್ತಿದೆ. ಈ ಹಿನ್ನೆಲೆ
ಯಲ್ಲಿ ಸಂಸ್ಥೆಯಲ್ಲಿರುವ ರಾಮನ್‌ ಸಂಶೋಧನಾ ವಸ್ತು ಸಂಗ್ರಹಾಲಯಕ್ಕೆ ಶಾಲಾ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿತ್ತು. ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ವೈಜ್ಞಾನಿಕ ವಸ್ತು ಪ್ರದರ್ಶನದಲ್ಲಿ ನಗರದ 10ಕ್ಕೂ ಹೆಚ್ಚು ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಖಗೋಳ ವಿಜ್ಞಾನ, ಬೆಳಕು ಮತ್ತು ವಸ್ತು ಭೌತಶಾಸ್ತ್ರಗಳ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಗೊಂದಲಗಳಿಗೆ ಉತ್ತರ ಪಡೆದರು.

ಸಿ.ವಿ.ರಾಮನ್ ಕಿರುಚಿತ್ರ: ವಿದ್ಯಾರ್ಥಿಗಳಿಗೆ ಸಿ.ವಿ.ರಾಮನ್‌ ಅವರ ಬಾಲ್ಯ, ಶಿಕ್ಷಣ ಹಾಗೂ ಅವರ ಸಾಧನೆಗಳನ್ನು ತಿಳಿಸುವ ಸಲುವಾಗಿ ‘ಕ್ವಾಂಟಮ್ ಇಂಡಿಯನ್‌’ ಶೀರ್ಷಿಕೆಯಲ್ಲಿ ಕಿರುಚಿತ್ರ ತಯಾರಿಸಲಾಗಿದ್ದು, ಸಂಸ್ಥೆಯ ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು. ರಾಮನ್‌ ಅವರ ಜೀವನಚಿತ್ರಣ ಅನಾವರಣಗೊಳಿಸುವ ಕಿರು ಗ್ರಂಥಾಲಯವನ್ನು ಆವರಣದಲ್ಲಿ ತೆರೆಯಲಾಗಿತ್ತು.

ಅಪರೂಪದ ಖನಿಜಗಳು: ರಾಮನ್‌ ಅವರ ಸಂಶೋಧನಾ ಅವಧಿಯಲ್ಲಿ ವಿವಿಧೆಡೆ ಪತ್ತೆಯಾದ ಅಪರೂಪದ ಖನಿಜಗಳನ್ನು ಸಂಸ್ಥೆಯ ‘ಖನಿಜಶಾಸ್ತ್ರ ವಸ್ತು ಸಂಗ್ರಹಾಲಯ’ದಲ್ಲಿ ಸಂರಕ್ಷಿಸಿ, ಪ್ರದರ್ಶನಕ್ಕೆ ಇಡಲಾಗಿದೆ. ನೇರಳಾತೀತ ಕಿರಣಗಳಿಗೆ (ಅಲ್ಟ್ರಾವೈಲೆಟ್ ರೇಸ್‌) ಹೊಳೆಯುವ ಬಣ್ಣದ ಕಲ್ಲುಗಳನ್ನು ವಸ್ತು ಸಂಗ್ರಹಾಲಯದ ಪ್ರತ್ಯೇಕ ಕೋಣೆಯಲ್ಲಿ ಪ್ರದರ್ಶಿಸಲಾಗಿದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿರೋಶಿಮಾ ಮೇಲೆ ನಡೆದ ಅಣುಬಾಂಬ್ ದಾಳಿ ವೇಳೆ ಪತ್ತೆಯಾದ ಖನಿಜಗಳು, ರಷ್ಯಾ, ಕಠ್ಮಂಡು ಹಾಗೂ ವಿಶ್ವದ ವಿವಿಧೆಡೆ ಸಿಗುವ ಅಪರೂಪದ ಖನಿಜಗಳ ಸಂಗ್ರಹವನ್ನು ಒಂದೇ ಸೂರಿನಡಿ ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.

‘ವಿಜ್ಞಾನದಲ್ಲಿ ಮಕ್ಕಳಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಪುಸ್ತಕಗಳಿಂದ ಅವರಿಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಅದರ ಪ್ರಯೋಗಗಳನ್ನು ಪ್ರತ್ಯಕ್ಷವಾಗಿ ಕಂಡಾಗ ವಿದ್ಯಾರ್ಥಿಗಳ ಜ್ಞಾನ ಹೆಚ್ಚುತ್ತದೆ. ಈ ಬಾರಿ ‘ವಿಜ್ಞಾನದಲ್ಲಿ ಮಹಿಳೆ’ ಕುರಿತು ವಸ್ತು ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ರವಿ ಸುಬ್ರಹ್ಮಣ್ಯ ತಿಳಿಸಿದರು.

ವೈಜ್ಞಾನಿಕ ಪ್ರಯೋಗಗಳನ್ನು ನೋಡಿದ ಮೇಲೆ ವಿಜ್ಞಾನ ವಿಷಯದಲ್ಲೇ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ಆಸೆ ಮೂಡಿದೆ.
ವಿ.ಮಾನ್ಯ, ಕರ್ನಾಟಕ ಪಬ್ಲಿಕ್ ಶಾಲೆ

ಶಿಕ್ಷಕರು ಪಾಠ ಮಾಡುವಾಗ ಹೇಳಿದ ವೈಜ್ಞಾನಿಕ ವಿಷಯಗಳನ್ನು ಇಲ್ಲಿ ನೇರವಾಗಿ ಅರಿತುಕೊಂಡೆ. ವಿಜ್ಞಾನದಲ್ಲಿ ಪಾಠಕ್ಕಿಂತ ಪ್ರಯೋಗಗಳೇ ಮುಖ್ಯ ಎನಿಸಿತು.
ಸ್ಫೂರ್ತಿ, 9ನೇ ತರಗತಿ

ಮೊದಲ ಬಾರಿ ಇಂತಹ ವಸ್ತುಪ್ರದರ್ಶನ ವೀಕ್ಷಿಸಿದೆ. ಸಿ.ವಿ.ರಾಮನ್‌ ಅವರ ಬಗ್ಗೆ ಶಾಲೆಗಿಂತ ಹೆಚ್ಚಿನ ಮಾಹಿತಿ ತಿಳಿಯಲು ಈ ಕಾರ್ಯಕ್ರಮ ನೆರವಾಯಿತು.
ಮೌನಾ, ಸ್ಟೆಲ್ಲಾ ಮೇರಿಸ್‌ ಶಾಲೆ

ಸಿ.ವಿ.ರಾಮನ್‌ ಅವರ ವಸ್ತು ಸಂಗ್ರಹಾಲಯದಲ್ಲಿರುವ ಖನಿಜಗಳ ಸಂಗ್ರಹ ಇಷ್ಟವಾಯಿತು. ಈ ಮೊದಲು ಅವುಗಳನ್ನು ಎಲ್ಲಿಯೂ ನೋಡಿರಲಿಲ್ಲ.
ವೈಷ್ಣವಿ, ಎಂ.ಇ.ಎಸ್.ಕಿಶೋರ್‌ ಕೇಂದ್ರ, ಮಲ್ಲೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT