ಶುಕ್ರವಾರ, ಡಿಸೆಂಬರ್ 6, 2019
20 °C
ಹೊಸಕೆರೆಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್‌ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

ವಿಜ್ಞಾನ ಹಬ್ಬದಲ್ಲಿ ಕಲಿಕೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಲ್ಲಿ ಆಟೋಟವಿತ್ತು. ಆದರೆ, ಅದು ಸ್ಪರ್ಧೆ ಆಗಿರಲಿಲ್ಲ. ಮಕ್ಕಳಲ್ಲಿ ಕಲಿಯಬೇಕು ಎಂಬ ತುಡಿತವಿತ್ತು. ಆದರೆ, ಒತ್ತಡವಿರಲಿಲ್ಲ. ಸೋತರೆ ಹೇಗೆ ಎಂಬ ಚಿಂತೆ ಇರಲಿಲ್ಲ. ಅದು ಶಾಲೆಯಾಗಿದ್ದರೂ, ಮನೆಯ ವಾತಾವರಣವಿತ್ತು. ಹಬ್ಬದ ಈ ವಾತಾವರಣದಲ್ಲಿ ಮಕ್ಕಳು ಆಡಿದರು, ನಲಿದರು, ಕಲಿತರು. 

ಹೊಸಕೆರೆಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಕ್ಲಸ್ಟರ್‌ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮದಲ್ಲಿ ಕಂಡ ನೋಟವಿದು. ಹಬ್ಬದ ವಾತಾವರಣದಲ್ಲಿ ಮಕ್ಕಳು ಕಲಿಯಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕಾರ್ಯಕ್ರಮವನ್ನು ಎಲ್ಲ ಕ್ಲಸ್ಟರ್‌ಗಳಲ್ಲಿ ಆಯೋಜಿಸಿದೆ. 

ಮಾಡು–ಆಡು, ಕಾಗದ–ಕತ್ತರಿ, ಚುಕ್ಕಿ–ಚಂದ್ರಮ, ಊರು ಸುತ್ತೋಣ ಎಂಬ ವಿಷಯದಡಿ ಮಕ್ಕಳಿಗೆ ಚಟುವಟಿಕೆ ನೀಡಲಾಗಿತ್ತು.

ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು, ತರಗತಿಯ ಕೋಣೆಯ ಒಳಗೆ ಈ ಚಟುವಟಿಕೆಯನ್ನು ಮಕ್ಕಳಿಂದ ಮಾಡಿಸಿದರು. 

ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳು ಮಾತ್ರವಲ್ಲ, ಎಲ್ಲ ವಿಷಯಗಳಿಗೆ ಸಂಬಂಧಿಸಿದ ಚಟುವಟಿಕೆಯನ್ನು ಮಕ್ಕಳಿಗೆ ನೀಡಲಾಗಿತ್ತು. ಆಯಾ ವೃತ್ತಿಯಲ್ಲಿ ಹೆಸರು ಮಾಡಿದ ಕಲೆಗಾರರು, ಕುಶಲಕರ್ಮಿಗಳಿಂದ ಉಪನ್ಯಾಸ, ಪ್ರದರ್ಶನ ನೀಡುವ ಮೂಲಕ ಮಕ್ಕಳ ಕುತೂಹಲ ತಣಿಸಿದರು.

ಇಂಥದ್ದೇ ಕಲಿಯಬೇಕು ಎಂಬ ಒತ್ತಡವನ್ನು ಮಕ್ಕಳ ಮೇಲೆ ಹಾಕಿರಲಿಲ್ಲ. ಸ್ವತಂತ್ರವಾಗಿ ಕಲಿಯಲು ಅವಕಾಶ ನೀಡಲಾಗಿತ್ತು. ದೇಸಿ ಆಟ, ನಿಧಿ ಹುಡುಕಾಟ ಮುಂತಾದ ಚಟುವಟಿಕೆ ನೀಡುವ ಮೂಲಕ ಮಕ್ಕಳಿಗೆ ಮನರಂಜನೆ ನೀಡಲಾಯಿತು. ಶಾಲೆಯ ಆವರಣವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶಾಲೆಯ ಮುಂದೆ ಹಾಕಿದ್ದ ರಂಗೋಲಿ, ಮಧ್ಯಾಹ್ನ ಸಿಹಿ ಊಟ ಎಲ್ಲವೂ ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಉಂಟು ಮಾಡಿದ್ದವು. 

ಪಾಲಿಕೆ ಸದಸ್ಯರಾದ ರಾಜೇಶ್ವರಿ ಚೋಳರಾಜ್, ‘ಮಕ್ಕಳಲ್ಲಿನ ಸುಪ್ತಪ್ರತಿಭೆಯ ಅನಾವರಣಕ್ಕೆ ಮಕ್ಕಳ ಹಬ್ಬದಂತಹ ಕಾರ್ಯಕ್ರಮಗಳು ವೇದಿಕೆ ಒದಗಿಸುತ್ತವೆ’ ಎಂದರು. 

ಶಾಲೆಯ ಮಕ್ಕಳು ಪ್ರದರ್ಶಿಸಿದ ಮಲ್ಲಕಂಬ ಹಾಗೂ ಪರಿಸರ ಕುರಿತು ಕಿರುನಾಟಕ ಗಮನ ಸೆಳೆಯಿತು. ಶಾಲೆಯ ಮುಖ್ಯಶಿಕ್ಷಕಿ, ಶಿಕ್ಷಕರು ಹಾಗೂ ಇಲಾಖೆಯ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

‘ವಿಜ್ಞಾನ: ಪ್ರಶ್ನಿಸಿದಷ್ಟೂ ಅರಿವಿನ ವಿಸ್ತಾರ’

ಡಿಆರ್‌ಡಿಒ ವಿಜ್ಞಾನಿ ರವೀಂದ್ರ ವರ್ಮಾ, ‘ವಿಜ್ಞಾನ ಎನ್ನುವುದು ಯಾವಾಗಲೂ ಪ್ರಶ್ನೆ. ಅದೊಂದು ಕುತೂಹಲ’ ಎಂದು ಹೇಳಿದರು.

‘ವಿಜ್ಞಾನ ವಿಷಯದಲ್ಲಿ ನೀವು ಎಷ್ಟು ಪ್ರಶ್ನಿಸುತ್ತಾ ಹೋಗುತ್ತೀರೋ, ಅದು ಅಷ್ಟು ತೆರೆದುಕೊಳ್ಳುತ್ತಾ ಹೋಗುತ್ತದೆ. ಏಕೆ, ಹೇಗೆ, ಏನು ಎಂದು ಪ್ರಶ್ನಿಸುವ ಮೂಲಕ ನಿಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬಹುದು’ ಎಂದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು