ಶುಕ್ರವಾರ, ಅಕ್ಟೋಬರ್ 7, 2022
28 °C
ಐಐಎಸ್ಸಿ ಘಟಿಕೋತ್ಸವ l 344 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮಾನವನ ಒಳಿತಿಗೆ ವಿಜ್ಞಾನ ಬಳಸಿ: ಸುಬ್ರತೋ ಬಾಗ್ಚಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಾನವನ ಒಳಿತಿಗಾಗಿ ಮಾತ್ರ ವಿಜ್ಞಾನವು ಅಸ್ತ್ರವಾಗಿ ಬಳಕೆಯಾಗಬೇಕು. ವಿದ್ಯಾರ್ಥಿಗಳು ತಾವು ಪಡೆದಿರುವ ಜ್ಞಾನವನ್ನು ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಒಡಿಶಾ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮೈಂಡ್ ಟ್ರೀ ಸಹ ಸಂಸ್ಥಾಪಕ ಸುಬ್ರತೋ ಬಾಗ್ಚಿ ಸಲಹೆ ನೀಡಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಬುಧವಾರ ನಡೆದ ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಪರೋಪಕಾರ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.
ಆದರೆ, ಪರೋಪಕಾರಿ ಕಾರ್ಯ ಕೈಗೊಳ್ಳುವ ಮುನ್ನ ತೆರಿಗೆಯನ್ನು ಸಹ ಸರ್ಕಾರಕ್ಕೆ ಸಕಾಲಕ್ಕೆ ಪಾವತಿಸಬೇಕು’ ಎಂದು ಸಲಹೆ ನೀಡಿದರು.

ತಮ್ಮ ಬಾಲ್ಯ ಮತ್ತು ವೃತ್ತಿಯ ಸಂದರ್ಭದಲ್ಲಿನ ಪರೋಪಕಾರಿ ಗುಣಗಳನ್ನು ನೆನಪಿಸಿಕೊಂಡ ಅವರು, ‘ನಾನು ಬಾಲ್ಯದಿಂದಲೂ ದಾನ ಮಾಡುವ ಗುಣ ಬೆಳೆಸಿಕೊಂಡಿದ್ದೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ತಾಯಿಯ ಮನೋಭಾವವೇ ಈ ಕಾರ್ಯಕ್ಕೆ ಕಾರಣವಾಗಿತ್ತು. ಸ್ಟ್ಯಾನ್‌ಫೋರ್ಡ್, ಯಾಲೆ, ಹಾರ್ವರ್ಡ್‌ ಮತ್ತು
ಪ್ರಿನ್ಸ್‌ಟನ್‌ನಂತಹ ಸಂಸ್ಥೆಗಳ ಬೆಳವಣಿಗೆ ದಾನಿಗಳ ಉದಾರ ದೇಣಿಗೆಯಿಂದ ಸಾಧ್ಯವಾಗಿದೆ. ಹೃದಯ ವೈಶಾಲ್ಯದಿಂದ ದೇಣಿಗೆ ನೀಡುವ ಸಣ್ಣ ಕಾರ್ಯಗಳು ಮಹತ್ವದ ಬದಲಾವಣೆಯನ್ನು ತರುತ್ತವೆ’ ಎಂದು ವಿವರಿಸಿದರು.

ಐಐಎಸ್ಸಿ ಪರಿಷತ್‌ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಿ, ‘ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ಜ್ಞಾನಾಧಾರಿತ ಸಮಾಜದ ನಿರ್ಮಾಣವಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಮಹತ್ವದ ಪ್ರಗತಿಯಿಂದ ಈ ಕಾರ್ಯಸಾಧ್ಯ’ ಎಂದು ಪ್ರತಿಪಾದಿಸಿದರು.

‘ಕೋವಿಡ್ ವಿದ್ಯಾರ್ಥಿಗಳ ಮುಂದೆ ಸವಾಲುಗಳನ್ನು ಒಡ್ಡಿತ್ತು. ಆದರೆ, ಕಠಿಣ ಸವಾಲುಗಳ ನಡುವೆ ಡಿಜಿಟಲೀಕರಣಕ್ಕೆ ತೆರೆದುಕೊಳ್ಳುವ ಮೂಲಕ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಹಿಮ್ಮೆಟ್ಟಿಸಿದ್ದೀರಿ. ಇದು ಹೊಸ ಆತ್ಮ ವಿಶ್ವಾಸವನ್ನು ಮೂಡಿಸಿದೆ’ ಎಂದು ಹೇಳಿದರು.

ಘಟಿಕೋತ್ಸವದಲ್ಲಿ ಪಿಎಚ್‌.ಡಿ. ಸೇರಿ ಒಟ್ಟು 344 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 64 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ಕೃಷ್ಟತೆಗಾಗಿ ಪದಕಗಳನ್ನು ನೀಡಲಾಯಿತು. 246 ಪಿಎಚ್‌.ಡಿ. ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 98 ಪದವಿ ವಿದ್ಯಾರ್ಥಿಗಳು ಪದವಿ ಪಡೆದರು.

ಐಐಎಸ್ಸಿ ನಿರ್ದೇಶಕ ಪ್ರೊ. ಗೋವಿಂದನ್‌ ರಂಗರಾಜನ್‌ ಇದ್ದರು.

ಪಾಚಿಯಿಂದ ಇಂಧನ!

‘ಪಾಚಿಯಿಂದ ಇಂಧನ ತಯಾರಿಸುವ ವಿಷಯದ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಿದ್ದಕ್ಕೆ ಪಿಎಚ್‌.ಡಿ. ದೊರೆತಿದೆ’ ಎಂದು ಸಂಸ್ಥೆಯ ವಿದ್ಯಾರ್ಥಿ ದೀಪ್ತಿ ಹೆಬ್ಬಾಲೆ ಪ್ರತಿಕ್ರಿಯಿಸಿದರು.

‘ಉಪ್ಪು ನೀರಿನಲ್ಲಿ ಬೆಳೆಯುವ ಎರಡು ಪ್ರಕಾರದ ಪಾಚಿಗಳಿಂದ ಇಂಧನ ತಯಾರಿಸಬಹುದು. ಕಬ್ಬು, ಆಹಾರ ಧಾನ್ಯಗಳ ತ್ಯಾಜ್ಯಗಳಂತೆ ಪಾಚಿಗಳಿಂದ ಎಥೆನಾಲ್ ತಯಾರಿಸಿ ಅದನ್ನು ಪೆಟ್ರೋಲಿಯಂ ಜೊತೆಗೆ ಮಿಶ್ರಣ ಮಾಡಿ ಬಳಸಬಹುದು. ಪಾಚಿ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ. ಕರ್ನಾಟಕದಲ್ಲಿ 200 ಕಿ.ಮೀ. ಉದ್ದದ ಕರಾವಳಿ ಇರುವುದರಿಂದ ಪಾಚಿ ಕೃಷಿಗೆ ಹೆಚ್ಚಿನ ಅವಕಾಶವಿದೆ’ ಎಂದು ವಿವರಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು