ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಹಿರಿಯರೆಲ್ಲ ಕಲೆತರು, ಒಮ್ಮೆ ನೋವ ಮರೆತರು...

Last Updated 1 ಅಕ್ಟೋಬರ್ 2018, 20:22 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ನಾಗರಿಕರು ಕೆಲಕಾಲ ಸಂಕಟ ಮರೆತು ನಿರಾಳರಾಗಲು ರವೀಂದ್ರ ಕಲಾಕ್ಷೇತ್ರ ಸೋಮವಾರ ವೇದಿಕೆ ಕಲ್ಪಿಸಿತು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಈ ನೋಟ ಕಂಡುಬಂದಿತು.

ಸಭಾಂಗಣದ ಹೊರಗೆ ಗೊಂಬೆಗಳ ನೃತ್ಯ ವಾದ್ಯನಾದ ಹಿರಿಯರನ್ನು ಸ್ವಾಗತಿಸಿತು. ಸಭಾಂಗಣದ ಒಳಗೆ ಪ್ರಭಾ ಮತ್ತು ಸಂಗಡಿಗರು ಸುಗಮ ಸಂಗೀತದಿಂದ ಹಿರಿಯರ ಮನೋಲ್ಲಾಸಗೊಳಿಸಿದರು. ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ...ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ ಎಂದೆನ್ನ ಕೇಳಲೇಕೆ...’ ಹಾಡುಗಳಿಗೆ ಹಿರಿಯರು ತಲೆದೂಗಿದರು. ‘ಹೌದು ಈ ಹಾಡುಗಳ ಭಾವವನ್ನು ಹಿರಿಯ ನಾಗರಿಕರಷ್ಟು ಚೆನ್ನಾಗಿ ಬೇರೆಯವರು ಅರ್ಥ ಮಾಡಿಕೊಳ್ಳಲಾರರು’ ಎಂದು ನಿರೂಪಕರು ಹೇಳಿದಾಗ ಸಭೆಯಲ್ಲಿ ಸಂಕೋಚದ ನಗು ಕಂಡುಬಂದಿತು.

ಅನಲ ಪ್ರಸಾದ್‌ ಅವರು ವೇದಿಕೆಯೇರಿ ‘ಚನ್ನಪ್ಪ ಚನ್ನೇಗೌಡ...’ ಹಾಡು ಹಾಡಿದಾಗ ಪೂರ್ವಸಿದ್ಧತೆ ಇಲ್ಲದಿದ್ದರೂ ಸಂಗೀತಗಾರರು ರಾಗಕ್ಕೆ ತಕ್ಕಂತೆ ವಾದ್ಯ ನುಡಿಸಿದರು.

ಕಾರ್ಯಕ್ರಮದಲ್ಲಿ ಮಂಡ್ಯದ ಕಲಾವಿದ ಚನ್ನೇಗೌಡ (ಗಡ್ಡಪ್ಪ) ಅವರನ್ನು ಸನ್ಮಾನಿಸಲಾಯಿತು.

ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸಾಧನೆ ಮಾಡಿದ 1 ಸಂಸ್ಥೆ ಹಾಗೂ 8 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯೇನಪೋಯ ಮೆಡಿಕಲ್‌ ಕಾಲೇಜು ಮಂಗಳೂರು, ಡಾ.ಬಿ.ವಿ.ಮಾರ್ಖಾಂಡೆ ಶಿರ್ವ, ಉಡುಪಿ (ಶಿಕ್ಷಣ), ಡಿ.ಎನ್‌. ಸಂಪತ್‌ ಬೆಂಗಳೂರು (ಕ್ರೀಡೆ), ಸದಾಶಿವ ಸಿದ್ದಪ್ಪ ಬೆಳಗಲಿ, ಬಾಗಲಕೋಟೆ (ಕಾನೂನು), ಡಾ.ಪಿ.ಎಸ್‌.ಶಂಕರ್‌ ಕಲಬುರ್ಗಿ(ಸಾಹಿತ್ಯ), ಚಿಂದೋಡಿ ಬಂಗಾರೇಶ್‌, ಬೆಂಗಳೂರು (ಕಲೆ), ಡಾ.ವಿಜಯಲಕ್ಷ್ಮೀ ದೆಶಮಾನೆ ಬೆಂಗಳೂರು, ಮಹಾದೇವಿ ಹುಲ್ಲೂರು ಬಸವನಬಾಗೇವಾಡಿ ವಿಜಯಪುರ, ಜಗದಾಂಬಾ ಬೆಂಗಳೂರು (ಸಮಾಜಸೇವೆ)

ಮುಖ್ಯಮಂತ್ರಿ ಭರವಸೆ: ಹಿರಿಯ ನಾಗರಿಕರಿಗೆ ಮಾಸಿಕ ₹ 5 ಸಾವಿರ ಸಿಗುವಂತಾಗಬೇಕು. ಆದರೆ, ಒಂದೇ ಬಾರಿ ಅಷ್ಟು ಮೊತ್ತವನ್ನು ಪಾವತಿಸಲು ನನಗೂ ಸಾಕಷ್ಟು ಸವಾಲುಗಳಿವೆ. ಹೇಳಿ ಕೇಳಿ ಸಮ್ಮಿಶ್ರ ಸರ್ಕಾರ ಬೇರೆ ಇದೆ. ನವೆಂಬರ್‌ 1ರಿಂದ ಹಿರಿಯ ನಾಗರಿಕರ ಖಾತೆಗೆ ₹ 1 ಸಾವಿರ ಮಾಸಾಶನ ಜಮಾ ಮಾಡಲಾಗುವುದು. ಪ್ರತಿ ವರ್ಷ ₹ 1 ಸಾವಿರ ಮೊತ್ತವನ್ನು ಹೆಚ್ಚಿಸಲಾಗುವುದು.

‘ಸಂಕಟದಲ್ಲಿರುವ ಹಿರಿಯ ನಾಗರಿಕರಿಗೆ 30 ಜಿಲ್ಲೆಗಳಲ್ಲಿ ಉತ್ತಮ ಸೌಲಭ್ಯಗಳಿರುವ ವೃದ್ಧಾಶ್ರಮ ಕಟ್ಟಲಾಗುವುದು. ಸರ್ಕಾರ ಮಾನವೀಯ ದೃಷ್ಟಿಯಿಂದಲೂ ಸಾಕಷ್ಟು ಕೆಲಸ ಮಾಡುತ್ತದೆ’ ಎಂದು ಹೇಳಿದರು.

ಸರ್ಕಾರ ಸುಭದ್ರವಾಗಿದೆ ಎಂದ ಅವರು, ಎಂದಿನಂತೆ ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT