ನವದೆಹಲಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಮೂರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡ ಈ ಹಾದಿಯಲ್ಲಿ ಇನ್ನೊಂದೇ ಹೆಜ್ಜೆ ಇಡಬೇಕಿದೆ.
ಮಂಗಳವಾರ ನಡೆಯುವ ಫೈನಲ್ ಹಣಾಹಣಿಯಲ್ಲಿ ಕರುಣ್ ನಾಯರ್ ಸಾರಥ್ಯದ ತಂಡ ಸೌರಾಷ್ಟ್ರ ಸವಾಲು ಎದುರಿಸಲಿದೆ. ಬಲಿಷ್ಠ ತಂಡಗಳ ನಡುವಣ ಈ ಹೋರಾಟಕ್ಕೆ ಫಿರೋಜ್ ಷಾ ಕೋಟ್ಲಾ ಅಂಗಳದಲ್ಲಿ ವೇದಿಕೆಯೂ ಸಿದ್ಧವಾಗಿದೆ.
ಕರ್ನಾಟಕ ತಂಡ ಈ ಬಾರಿಯ ಟೂರ್ನಿಯಲ್ಲಿ ಅಮೋಘ ಸಾಮರ್ಥ್ಯ ತೋರಿದೆ. ‘ಎ’ ಗುಂಪಿನಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ರಾಜ್ಯ ತಂಡ ಹೈದರಾಬಾದ್ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ನಾಲ್ಕರ ಘಟ್ಟದಲ್ಲಿ 9 ವಿಕೆಟ್‌ಗಳಿಂದ ಮಹಾರಾಷ್ಟ್ರದ ಸವಾಲು ಮೀರಿತ್ತು.
ಈ ಎರಡೂ ಗೆಲುವುಗಳು ಕರ್ನಾಟಕದ ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ. ಮಯಂಕ್ ಅಗರವಾಲ್ ಮತ್ತು ಕರುಣ್ ನಾಯರ್ ಬ್ಯಾಟಿಂಗ್‌ನಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.
ಮಹಾರಾಷ್ಟ್ರ ವಿರುದ್ಧದ ಹೋರಾಟದಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ 155ರನ್ ಕಲೆಹಾಕಿತ್ತು. ಅಮೋಘ ಲಯದಲ್ಲಿರುವ ಇವರು ಸೌರಾಷ್ಟ್ರ ಬೌಲರ್‌ಗಳ ಮೇಲೂ ಸವಾರಿ ಮಾಡಲು ಕಾಯುತ್ತಿದ್ದಾರೆ.
ಮಯಂಕ್ ಈ ಬಾರಿಯ ಟೂರ್ನಿಯಲ್ಲಿ ಮೂರು ಶತಕ ಮತ್ತು ಮೂರು ಅರ್ಧಶತಕ ಸಿಡಿಸಿದ್ದು, ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಕರುಣ್ ಕೂಡ ಎದುರಾಳಿ ಬೌಲರ್‌ಗಳ ಬೆವರಿಳಿಸಲು ಹಾತೊರೆಯುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆರ್.ಸಮರ್ಥ್ ಅವರ ಶಕ್ತಿ ರಾಜ್ಯ ತಂಡದ ಬೆನ್ನಿಗಿದೆ. ಸಮರ್ಥ್ 7 ಪಂದ್ಯಗಳಿಂದ 299ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಎರಡು ಅರ್ಧಶತಕಗಳು ಅವರ ಖಾತೆಯಲ್ಲಿವೆ.
ಪವನ್ ದೇಶಪಾಂಡೆ, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್, ಕೆ.ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಅವರೂ ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲ ಸಮರ್ಥರಾಗಿದ್ದಾರೆ.
ಬೌಲಿಂಗ್‌ನಲ್ಲೂ ಕರ್ನಾಟಕ ತಂಡ ಶಕ್ತಿಯುತವಾಗಿದೆ. ಹೊಸ ಚೆಂಡಿನೊಂದಿಗೆ ದಾಳಿ ನಡೆಸುವ ಎಂ.ಪ್ರಸಿದ್ಧ ಕೃಷ್ಣ ಮತ್ತು ಟಿ.ಪ್ರದೀಪ ಆರಂಭದಲ್ಲೇ ವಿಕೆಟ್ ಉರುಳಿಸಿ ಎದುರಾಳಿಗಳ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ರೋನಿತ್ ಮೋರೆ ಮತ್ತು ಸ್ಟುವರ್ಟ್ ಬಿನ್ನಿ ಕೂಡ ಸೌರಾಷ್ಟ್ರದ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲವರಾಗಿದ್ದಾರೆ. ಕೆ.ಗೌತಮ್ ಮತ್ತು ಶ್ರೇಯಸ್ ಗೋಪಾಲ್ ತಮ್ಮ ಬತ್ತಳಿಕೆಯಲ್ಲಿರುವ ಸ್ಪಿನ್ ಅಸ್ತ್ರಗಳನ್ನು ಪ್ರಯೋಗಿಸಿ ಸೌರಾಷ್ಟ್ರ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವ ವಿಶ್ವಾಸ ಹೊಂದಿದ್ದಾರೆ.
ವಿಶ್ವಾಸದಲ್ಲಿ ಸೌರಾಷ್ಟ್ರ: ಸೌರಾಷ್ಟ್ರ ತಂಡ ಕೂಡ ಗೆಲುವಿನ ಹುಮ್ಮಸ್ಸಿನಲ್ಲಿದೆ. ಚೇತೇಶ್ವರ ಪೂಜಾರ ಸಾರಥ್ಯದ ತಂಡ ಸೆಮಿಫೈನಲ್‌ನಲ್ಲಿ ಆಂಧ್ರ ತಂಡವನ್ನು ಸೋಲಿಸಿತ್ತು. ಸಮರ್ಥ್ ವ್ಯಾಸ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅವಿ ಬರೋಟ್, ಚಿರಾಗ್ ಜಾನಿ, ಪೂಜಾರ ಮತ್ತು ರವೀಂದ್ರ ಜಡೇಜ, ಕರ್ನಾಟಕದ ಬೌಲರ್‌ಗಳಿಗೆ ಸವಾಲಾಗಬಲ್ಲರು.
ಆಲ್‌ರೌಂಡರ್ ಜಡೇಜ ಹಿಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು.
ಅರ್ಪಿತ್ ವಾಸವಾಡ, ಪ್ರೇರಕ್ ಮಂಕಡ್ ಅವರೂ ಬ್ಯಾಟಿಂಗ್‌ನಲ್ಲಿ ಈ ತಂಡದ ಶಕ್ತಿಯಾಗಿದ್ದಾರೆ. ಧರ್ಮೇಂದ್ರ ಸಿನ್ಹಾ ಜಡೇಜ, ರವೀಂದ್ರ ಜಡೇಜ, ಕಮಲೇಶ್ ಮಕವಾನ ಅವರು ಪರಿಣಾಮಕಾರಿ ಬೌಲಿಂಗ್ ಮೂಲಕ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಲು ಕಾಯುತ್ತಿದ್ದಾರೆ.
ಆರಂಭ: ಬೆಳಿಗ್ಗೆ 9.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
*
ಮಯಾಂಕ್‌ಗೆ ಸಿಗದ ಅವಕಾಶ
2017–18ನೇ ಸಾಲಿನ ದೇಶಿ ಕ್ರಿಕೆಟ್‌ನಲ್ಲಿ ಕರ್ನಾಟಕದ ಮಯಂಕ್ ಅಗರವಾಲ್ 2000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಹೀಗಿದ್ದರೂ ಅವರನ್ನು ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯುವ ನಿದಾಹಸ್ ಟ್ರೋಫಿ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಟೂರ್ನಿಗೆ ಪ್ರಕಟಿಸಿರುವ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ.
ರಣಜಿ ಟ್ರೋಫಿ ಟೂರ್ನಿಯಲ್ಲಿ 1160 ಮತ್ತು ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಟೂರ್ನಿಯಲ್ಲಿ 258 ರನ್‌ಗಳನ್ನು ಗಳಿಸಿರುವ ಅವರು ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ 633ರನ್ ಕಲೆಹಾಕಿದ್ದಾರೆ.
ಕರ್ನಾಟಕದ ಮತ್ತೊಬ್ಬ ಆಟಗಾರ ಕರುಣ್ ನಾಯರ್ ಅವರಿಗೂ ತಂಡದಿಂದ ಹೊರಗಿಡಲಾಗಿದೆ. ಕರುಣ್ ಕೂಡ ಈ ಋತುವಿನಲ್ಲಿ ಮಿಂಚಿದ್ದಾರೆ.
ಸೌರಾಷ್ಟ್ರದ ದೀಪಕ್ ಹೂಡಾ ಈ ಬಾರಿಯ ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ 226 ಮತ್ತು ವಿಜಯ್ ಹಜಾರೆಯಲ್ಲಿ 352ರನ್ ಬಾರಿಸಿದ್ದಾರೆ. ಹೋದ ಬಾರಿಯ ಐಪಿಎಲ್‌ನಲ್ಲಿ ಅವರು 10 ಪಂದ್ಯಗಳಿಂದ 78ರನ್ ಗಳಿಸಿದ್ದರು. ಹಿಂದಿನ 10 ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್ ಉರುಳಿಸಿದ್ದಾರೆ.
ತಮಿಳುನಾಡಿನ ವಿಜಯ್ ಶಂಕರ್, ಹಿಂದಿನ 10 ಪಂದ್ಯಗಳಿಂದ 3 ವಿಕೆಟ್ ಕಬಳಿಸಿದ್ದು, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಏಳು ಪಂದ್ಯಗಳಿಂದ 171ರನ್ ಗಳಿಸಿದ್ದಾರೆ. ಹೀಗಿದ್ದರೂ ಇವರಿಗೆ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ತಂಡದಲ್ಲಿ ಸ್ಥಾನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಕರುಣ್ ಮತ್ತು ಮಯಂಕ್ ಇವರಿಗಿಂತಲೂ ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.