ಮಂಗಳವಾರ, ನವೆಂಬರ್ 19, 2019
23 °C
ಆಟೊರಾಜ@65

VIDEO | ನಿಷೇಧಾಜ್ಞೆ ನಡುವೆ ಶಂಕರ್‌ನಾಗ್‌ ಜನ್ಮದಿನದ ಸಂಭ್ರಮ

Published:
Updated:
ಶಂಕರ್‌ನಾಗ್‌ ಹುಟ್ಟುಹಬ್ಬ

ಬೆಂಗಳೂರು: ನಾಗರಕಟ್ಟೆ ಶಂಕರ, ಸಿನಿಮಾ ಜಗತ್ತಿನ ಕರಾಟೆ ಕಿಂಗ್‌ ಅಭಿಮಾನಿಗಳ ಪಾಲಿನ ಶಂಕರಣ್ಣ, ಇಂದಿಗೂ ಆಟೊರಾಜನಾಗಿ ಜೀವಂತ. ಇಂದು ನಟ, ನಿರ್ದೇಶಕ ಶಂಕರ್‌ನಾಗ್‌ ಅವರ 65ನೇ ಜನ್ಮದಿನ. 

ಪ್ರತಿ ವರ್ಷದಂತೆ ನಗರದ ವಿದ್ಯಾಪೀಠದ ಸಮೀಪ ಶಂಕರ್‌ನಾಗ್‌ ವೃತ್ತದಲ್ಲಿ 'ಆಟೊರಾಜ'ನ ಹುಟ್ಟುವನ್ನು ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಜ್ಜಾದರು. ಫೋಟೊ, ಪುತ್ಥಳಿಗೆ ಪೂಜೆ ಸಲ್ಲಿಸಿ, ಕನ್ನಡ ಧ್ವಜಾರೋಹಣವನ್ನೂ ನೆರವೇರಿಸಲಾಯಿತು. ಕೇಕ್‌ ಸಹ ಕತ್ತರಿಸಿ ಹಂಚುವ ಮೂಲಕ ತಮ್ಮ ಸ್ಫೂರ್ತಿ ಸೆಲೆಯ ಹುಟ್ಟಿದ ದಿನವನ್ನು ವಿಸ್ತರಿಸುವ ಪ್ರಯತ್ನ ಮಾಡಿದರು. 

ನೂರಾರು ಆಟೊಗಳನ್ನು ಸಿಂಗರಿಸಿಕೊಂಡು ನಗರದ ವಿವಿಧ ಕಡೆ ಮೆರವಣಿಗೆ ನಡೆಸುತ್ತ ಬಂದ ಅಭಿಮಾನಿಗಳು, ಶಂಕರ್‌ನಾಗ್‌ ವೃತ್ತದಲ್ಲಿ ಒಂದು ಸುತ್ತ ಹೊಡೆದು ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಆಟೊರಾಜನ ಪುತ್ಥಳಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ಧಂತೆ ಪೊಲೀಸರ ಪ್ರವೇಶವಾಯಿತು. ಅಯೋಧ್ಯೆ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆ ನಿಷೇಧಾಜ್ಞೆ ಜಾರಿಯಿದ್ದ ಕಾರಣ ಜನರು ಗುಂಪು ಸೇರಿ ನಡೆಸುವ ಯಾವುದೇ ಆಚರಣೆಗಳಿಗೆ ಹೆಚ್ಚಿನ ಅವಕಾಶವಿರಲಿಲ್ಲ. 

ಶಂಕರ್‌ನಾಗ್‌ ಅಭಿಮಾನಿಗಳಿಗೂ ಹೆಚ್ಚು ಸಮಯ ಸಿಗಲಿಲ್ಲ. ಪೊಲೀಸರು ಗುಂಪುಗೂಡದೆ ಹೊರಡುವಂತೆ ಸೂಚಿಸುತ್ತಿದ್ದರು. ಸಾಲಾಗಿ ನಿಂತಿದ್ದ ಆಟೊಗಳು ಸಹ ಬೇರೆ ದಾರಿ ಇಲ್ಲದೆ ಆಟೊರಾಜನ ನೆನಪುಗಳನ್ನು ತುಂಬಿಕೊಂಡು ಮುನ್ನಡೆದರು. ಸೇರಿದ್ದ ಅಭಿಮಾನಿಗಳಿಗೆ  ತರಾತುರಿಯಲ್ಲೇ ಸಿಹಿ ಮತ್ತು ತಿಂಡಿಯನ್ನು ಹಂಚುವ ಕೆಲಸವನ್ನು ಕಾರ್ಯಕ್ರಮದ ಆಯೋಜಕ ವೆಂಕಟೇಶ್‌ ಮೂರ್ತಿ ಮತ್ತು ಸಂಗಡಿಗರು ಮಾಡಿದರು. 

ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ, ನಡೆಸಬೇಕೆಂದಿದ್ದ ಅನ್ನದಾಸೋಹ, ಮತ್ತಷ್ಟು ಅಭಿಮಾನಿಗಳ ಆಟೊ ಮೆರವಣಿಗೆ ಎಲ್ಲಕ್ಕೂ ಅವಕಾಶ ಇಲ್ಲವಾಯಿತು. ಶಂಕರ್‌ನಾಗ್‌ ದೂರವಾಗಿ 29 ವರ್ಷಗಳೇ ಕಳೆದಿದ್ದರೂ ನಾಡಿನ ಲಕ್ಷಾಂತರ ಆಟೊಗಳ ಮೇಲೆ, ಕನ್ನಡಿಗರ ಮನಸುಗಳಲ್ಲಿ ಶಂಕರ್‌ ಅಚ್ಚಾಗಿ ಉಳಿದಿದ್ದಾರೆ. ನಟನೆಯ ಹೊರತಾಗಿ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆಯೂ ಶಂಕರ್ ಹಲವು ಕನಸುಗಳನ್ನು ಕಂಡಿದ್ದರು.

ಉತ್ತರ ಕನ್ನಡದ ಹೊನ್ನಾವರ ತಾಲ್ಲೂಕಿನ ಮಲ್ಲಾಪುರದಲ್ಲಿ 1954ರ ನವೆಂಬರ್ 9ರಂದು ಜನಿಸಿದ ಶಂಕರ್‌ನಾಗ್ ಅವರ ಮೊದಲ ಹೆಸರು ಶಂಕರ ನಾಗರಕಟ್ಟೆ. ಬಣ್ಣದ ನಂಟು ಬೆಳೆಸಿಕೊಂಡ ಅವರು ಅವಕಾಶ ಅರಸಿಕೊಂಡು ಹೊರಟಿದ್ದು ಮುಂಬೈನತ್ತ. ಗಿರೀಶ್‌ ಕಾರ್ನಾಡರ ‘ಒಂದಾನೊಂದು ಕಾಲ’ದಲ್ಲಿ ಚಿತ್ರದ ಮೂಲಕ ಕನ್ನಡ ಚಿತ್ರಜಗತ್ತು ಪ್ರವೇಶಿಸಿದ ಅವರು ಮುಂದೆ ‘ಗೀತಾ’, ‘ಭರ್ಜರಿ ಭೇಟೆ’, ‘ಮೂಗನ ಸೇಡು’, ‘ನ್ಯಾಯ ಎಲ್ಲಿದೆ’, ‘ಆಕ್ಸಿಡೆಂಟ್‌’, ‘ಮಿಂಚಿನ ಓಟ’, ‘ಒಂದು ಮುತ್ತಿನ ಕತೆ’ ಚಿತ್ರಗಳು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಮೋಡಿ ಮಾಡಿದರು.  ಅವರ ಅಭಿನಯದ ‘ಆಟೊರಾಜ’ ಆಟೊ ಚಾಲಕರ ಸ್ಫೂರ್ತಿದಾಯಕ ಸಿನಿಮಾ.

ಪ್ರತಿಕ್ರಿಯಿಸಿ (+)