ಮಂಗಳವಾರ, ಜನವರಿ 31, 2023
26 °C
ತಿಂಗಳ ಹಿಂದಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಡಿಜಿಪಿ * ‘ಆಕಸ್ಮಿಕ ಘಟನೆ’ ಎಂದ ಶರ್ಮಾ

ಸ್ವಂತ ರಿವಾಲ್ವರ್‌ನಿಂದ ಡಿಜಿಪಿ ಶರ್ಮಾಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ಮನೆಯಲ್ಲಿರುವಾಗಲೇ ಗುಂಡೇಟು ತಗುಲಿ ಗಾಯಗೊಂಡಿರುವ ಪೊಲೀಸ್ ಗೃಹ ಮಂಡಳಿಯ ಡಿಜಿಪಿ ಆರ್.ಪಿ. ಶರ್ಮಾ ಅವರಿಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದಲ್ಲಿ ಗುರುವಾರ ಚೇತರಿಕೆ ಕಂಡುಬಂದಿದೆ.

ಬುಧವಾರ ಸಂಜೆ ನಡೆದಿರುವ ಘಟನೆ ಸಂಬಂಧ ಆರ್‌.ಪಿ.ಶರ್ಮಾ ಅವರೇ ಕೊತ್ತನೂರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅದರ ಆಧಾರದಲ್ಲಿ ಘಟನೆಯನ್ನು ದಾಖಲು ಮಾಡಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

‘ತಿಂಗಳ ಹಿಂದಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶರ್ಮಾ, ಕರ್ತವ್ಯಕ್ಕೆ ರಜೆ ಹಾಕಿದ್ದರು. ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಶಸ್ತ್ರಚಿಕಿತ್ಸೆ ಆಗಿದ್ದರಿಂದ ಹೆಚ್ಚು ಮಾತು ಆಡುತ್ತಿರಲಿಲ್ಲ. ಮನೆಯವರ ಜೊತೆಯೂ ಹೆಚ್ಚು ಬೆರೆಯುತ್ತಿರಲಿಲ್ಲ. ಒಂಟಿಯಾಗಿ ಕೊಠಡಿಯಲ್ಲಿ ಇರುತ್ತಿದ್ದರು’ ಎಂದು ಅವರ ಆಪ್ತರೊಬ್ಬರು ಹೇಳಿದರು.

‘ವಿಷಯ ಗೊತ್ತಾಗಿ ಆಸ್ಪತ್ರೆಗೆ ಹೋಗಿ ಶರ್ಮಾ ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದೆವು. ಅವರ ಪ್ರಾಣಕ್ಕೆ ತೊಂದರೆ ಇಲ್ಲವೆಂದು ವೈದ್ಯರು ಹೇಳಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ’ ಎಂದೂ ತಿಳಿಸಿದರು.

ಘಟನೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ‘ಇದೊಂದು ಆಕಸ್ಮಿಕ ಘಟನೆ ಎಂಬುದಾಗಿ ಶರ್ಮಾ ಅವರೇ ಹೇಳಿಕೆ ನೀಡಿದ್ದಾರೆ. ಅದನ್ನು ದಾಖಲಿಸಿಕೊಂಡಿರುವ ಕೊತ್ತನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದರು.

‘ಇದೊಂದು ಆಕಸ್ಮಿಕ ಘಟನೆಯೆಂದೂ ಶರ್ಮಾ ಅವರೇ ಹೇಳಿದ್ದರಿಂದ ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿಲ್ಲ. ತನಿಖೆಯಲ್ಲಿ ಏನಾದರೂ ಅಂಶಗಳು ಕಂಡುಬಂದರೆ ಮಾತ್ರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ತಿಳಿಸಿದರು.

ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ‘ಶರ್ಮಾ ಅವರು ತಮ್ಮ ಆತ್ಮರಕ್ಷಣೆಗಾಗಿ ಸ್ವಂತ ರಿವಾಲ್ವಾರ್ ಇಟ್ಟುಕೊಂಡಿದ್ದಾರೆ. ಅದನ್ನು ಸ್ವಚ್ಛಗೊಳಿಸುವ ವೇಳೆಯಲ್ಲೇ ಆಕಸ್ಮಿಕವಾಗಿ ಗುಂಡು ಹಾರಿರುವುದಾಗಿ ಅವರೇ ಹೇಳುತ್ತಿದ್ದಾರೆ. ಅದರ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಶಸ್ತ್ರಚಿಕಿತ್ಸೆಯಿಂದಾಗಿ ಅವರು ಹೆಚ್ಚು ಮಾತನಾಡುತ್ತಿಲ್ಲ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು