ಮಂಗಳವಾರ, ಆಗಸ್ಟ್ 3, 2021
26 °C

ಪರಿಣಾಮಕಾರಿ ಕೆಲಸದ ಮೂಲಕ ಸರ್ಕಾರದ ಗೌರವ ಹೆಚ್ಚಿಸಿ: ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಗ್ರಾಮೀಣ ಭಾಗದ ಎಲ್ಲರಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಅವರು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ ಸರ್ಕಾರದ ಗೌರವ ಹೆಚ್ಚಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕಬ್ಬನ್ ಉದ್ಯಾನದಲ್ಲಿ ನೂತನವಾಗಿ ನಿರ್ಮಿಸಿರುವ ಶತಮಾನೋತ್ಸವ ಭವನ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್‌ನಿಂದಾಗಿ ತೆರಿಗೆ ಸಂಗ್ರಹ ಕ್ಷೀಣಿಸಿದೆ. ಹೀಗಾಗಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುತ್ತದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಿದ ತೃಪ್ತಿ ಇದೆ. ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಈ ಹಿಂದೆ ₹40 ಲಕ್ಷ ಅನುದಾನ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ₹2.5 ಕೋಟಿ ಅನುದಾನ ಕೊಟ್ಟಿದೆ’ ಎಂದರು.

‘ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಪೂರ್ಣ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ನೌಕರರ ಮೇಲಿನ ಅನಾಮಧೇಯ ದೂರುಗಳಿಗೆ ಸರ್ಕಾರದ ತನಿಖೆಗೆ ಅಗತ್ಯವಿಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಇದರಿಂದ ನೌಕರರು ಮುಕ್ತವಾಗಿ ಕಾರ್ಯನಿರ್ವಹಿಸಲು ಸಹಾಯಕವಾಗಲಿದೆ. ಜೊತೆಗೆ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಅವರ ಸೇವಾವಧಿಯಲ್ಲಿ 180 ದಿನಗಳ ಶಿಶು ಪಾಲನಾ ರಜೆ ನೀಡುವ ಸಂಬಂಧ ಆದೇಶ ಹೊರಡಿಸಲಾಗಿದೆ. ಇದರಿಂದ ಸುಮಾರು 4 ಲಕ್ಷ ಮಹಿಳೆಯರಿಗೆ ಪ್ರಯೋಜನವಾಗಲಿದೆ’ ಎಂದು ತಿಳಿಸಿದರು. 

‘ಸರ್ಕಾರಿ ನೌಕರರ ಕುಂದು ಕೊರತೆಗಳನ್ನು ಆಲಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರ ನೇತೃತ್ವದಲ್ಲಿ ಜಂಟಿ ಸಮಾಲೋಚನ ಸಮಿತಿ ರಚಿಸಲಾಗಿದೆ. ಕೋವಿಡ್‌ ಸಂಕಷ್ಟದ ಸಮಯದಲ್ಲೂ ನೌಕರರು ಸರ್ಕಾರಕ್ಕೆ ದೇಣಿಗೆ ನೀಡಿರುವುದು ಪ್ರಶಂಸನೀಯ. ರಾಜ್ಯದ ವಿವಿಧೆಡೆಯಿಂದ ಬರುವ ಸರ್ಕಾರಿ ನೌಕರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ₹13 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲಾಗಿದೆ’ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರು ಬಾಕಿ ಇರುವ ತುಟ್ಟಿಭತ್ಯೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಬಿ.ವೈ.ರಾಘವೇಂದ್ರ, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಇದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು