ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಂಚಿನಲ್ಲಿದ್ದ ಶೆಡ್‌ಗಳ ತೆರವು

Last Updated 9 ಫೆಬ್ರುವರಿ 2022, 20:44 IST
ಅಕ್ಷರ ಗಾತ್ರ

ಕೆಂಗೇರಿ: ಇಲ್ಲಿನ ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 10 ಶೆಡ್‌ಗಳನ್ನು ಪೊಲೀಸರ ನೆರವಿನೊಂದಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತೆರವುಗೊಳಿಸಿದರು.

ಮೂರು ವರ್ಷಗಳಿಂದ ಈಚೆಗೆ ಕೆಂಗೇರಿ ಬಳಿಯ ವಳಗೇರಹಳ್ಳಿ ಹೊಸಕೆರೆ ಅಂಚಿಗಿರುವ ಸರ್ಕಾರಿ ಭೂಮಿಯಲ್ಲಿ 10 ಕುಟುಂಬಸ್ಥರು ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿ ವಾಸಿಸುತ್ತಿದ್ದರು. ಬುಧವಾರ ಬೆಳಿಗ್ಗೆ 250ಕ್ಕೂ ಹೆಚ್ಚು ಪೊಲೀಸರ ರಕ್ಷಣೆಯೊಂದಿಗೆ ಕಾರ್ಯಾಚರಣೆಗಿಳಿದ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಸರ್ಕಾರಿ ಭೂಮಿ ವಶಪಡಿಸಿಕೊಂಡರು.

ಕೆರೆ ಅಂಚಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಫಲಾನುಭವಿಗಳಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಹುಮಹಡಿ ಕಟ್ಟಡ ಮನೆ ನಿರ್ಮಾಣ ಮಾಡಿ 2 ದಶಕಗಳ ಹಿಂದೆಯೇ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಈ ವಸತಿಗಳನ್ನು ಪರಭಾರೆ ಹಾಗೂ ಭೋಗ್ಯ ಮಾಡಿರುವ ಕೆಲ ಮಂದಿ, ಉದ್ಯಾನಕ್ಕಾಗಿ ಮೀಸಲಿರಿಸಲಾಗಿದ್ದ ಪಕ್ಕದಲ್ಲಿಯೇ ಇರುವ ಸರ್ಕಾರಿ ಭೂಮಿಯಲ್ಲಿ ಮತ್ತೆ ಶೆಡ್ ನಿರ್ಮಿಸಿ ಒತ್ತುವರಿ ಮಾಡಿದ್ದರು. ಕೊಳಚೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಹಲವಾರು ಬಾರಿ ಮನವಿ ಮಾಡಿದ್ದರೂ ನಿವೇಶನ ತೆರವುಗೊಳಿಸಿರಲಿಲ್ಲ. ಹೀಗಾಗಿ, ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಯಿತು ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹನುಮಂತರೆಡ್ಡಿ ಹೇಳಿದರು.

ಚರ್ಚ್‌ ತೆರವು: 40 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಚರ್ಚ್ ತೆರವುಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಲ ಸ್ಥಳೀಯ ಕ್ರೈಸ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಯಾವುದೇ ನೋಟಿಸ್ ನೀಡದೆ ಧಾರ್ಮಿಕ ಕೇಂದ್ರವನ್ನು ತೆರವುಗೊಳಿಸಲಾಗಿದೆ. ಭೂ ದಾಖಲಾತಿ ಹೊಂದಿರುವ ಧಾರ್ಮಿಕ ಕೇಂದ್ರವನ್ನು ನೆಲಸಮಗೊಳಿಸಿದರೆ ಧಾರ್ಮಿಕ ಕಲಹಕ್ಕೆ ನಾಂದಿಯಾಗುತ್ತದೆ’ ಎಂದು ಅಖಿಲ ಕರ್ನಾಟಕ ಕ್ರೈಸ್ತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಪ್ರಜ್ವಲ್ ಸ್ವಾಮಿ ಕಿಡಿಕಾರಿದರು.

‘ಸ್ಥಳೀಯರ ಮನವೊಲಿಸಿ ಸರ್ಕಾರಿ ಭೂಮಿಯನ್ನು ಸುಪರ್ದಿಗೆ ಪಡೆದುಕೊಳ್ಳಲಾಗಿದೆ. ಸರ್ಕಾರಿ ಭೂಮಿಯಲ್ಲಿ ಧಾರ್ಮಿಕ ಕೇಂದ್ರ ನಿರ್ಮಾಣ ಮಾಡುವುದು ಕಾನೂನಿಗೆ ವಿರುದ್ಧ. ಹೀಗಾಗಿ, ಅಕ್ರಮ ಶೆಡ್‌ಗಳೊಂದಿಗೆ ಚರ್ಚ್ ತೆರವುಗೊಳಿಸಲಾಗಿದೆ’ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎಸಿಪಿ ಕೋದಂಡರಾಮ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT