ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ 114ನೇ ಜನ್ಮದಿನಾಚರಣೆ: ಅನ್ನ, ಅಕ್ಷರ ಸಂತನ ಸ್ಮರಣೆ

Last Updated 1 ಏಪ್ರಿಲ್ 2021, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿವಕುಮಾರ ಸ್ವಾಮೀಜಿ ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿದವರು. ತ್ರಿವಿಧ ದಾಸೋಹದ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ವಿಶ್ವದ ಶ್ರೇಷ್ಠ ಸಂತ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಶಿವಕುಮಾರ ಸ್ವಾಮೀಜಿ ಅವರ 114ನೇ ಜನ್ಮದಿನದ ಅಂಗವಾಗಿ ವಿ.ಸೋಮಣ್ಣ ಪ್ರತಿಷ್ಠಾನವು ಮೂಡಲಪಾಳ್ಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಸ್ವಾಮೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

‘ಪ್ರತಿ ವರ್ಷವೂ ಪ್ರತಿಷ್ಠಾನದ ವತಿಯಿಂದ ಬಾಲಗಂಗಾಧರನಾಥ ಸ್ವಾಮಿ, ಶಿವಕುಮಾರ ಸ್ವಾಮೀಜಿ ಮತ್ತು ಮಾಜಿ ಮುಖ್ಯಮಂತ್ರಿ ದಿ.ಜೆ.ಹೆಚ್.ಪಟೇಲ್ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಶಿವಕುಮಾರ ಸ್ವಾಮೀಜಿ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ನನಗೆ ಎರಡು ಕಣ್ಣುಗಳಿದ್ದಂತೆ. ಶಿವಕುಮಾರ ಸ್ವಾಮೀಜಿಯವರು ಹೇಳಿಕೊಟ್ಟ ದಾರಿಯಲ್ಲಿ ನಡೆದಿದ್ದೇನೆ’ ಎಂದರು.

ಕನಕಪುರದ ಶ್ರೀದೇಗುಲ ಮಠದ ಚನ್ನಬಸವ ಸ್ವಾಮಿ, ‘ಶಿವಕುಮಾರ ಸ್ವಾಮೀಜಿಯವರ ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ಬಡವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರು. ನಿಸ್ವಾರ್ಥ ಸೇವೆಯಿಂದ ಜನರ ಮನಸ್ಸು ಗೆದ್ದಿದ್ದರು’ ಎಂದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್‌.ಶಂಕರ್‌, ‘ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹೇಗಿರಬೇಕು ಎಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟವರು ಶಿವಕುಮಾರ ಸ್ವಾಮೀಜಿ. ಅವರು ರೈತರ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತಿದ್ದರು. ಪರಿಸರ, ಶಿಕ್ಷಣ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸದಾ ಚಿಂತನೆ ಮಾಡುತ್ತಿದ್ದರು’ ಎಂದು ಹೇಳಿದರು.

ಕನ್ನಡ ಸಾಹಿತ್ಯ, ಸಂಗೀತ ಮತ್ತು ಜಾನಪದ ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT