ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರುತಿ ಆರೋಪ ನಿಜವೆಂದ ಮೇಕಪ್‌ಮನ್

ಮೀ–ಟೂ ಪ್ರಕರಣ * ಇಬ್ಬರು ಸಾಕ್ಷಿದಾರರ ಹೇಳಿಕೆ ದಾಖಲು
Last Updated 30 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್‌ ಮಾಡಿರುವ ಆರೋಪ ನಿಜ ಎಂದು ಅವರ ಮೇಕಪ್‌ಮನ್‌ ಕಿರಣ್‌, ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

‘ಅರ್ಜುನ್‌ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಶ್ರುತಿ ದಾಖಲಿಸಿರುವ ದೂರಿನ ವಿಚಾರಣೆ ನಡೆಸುತ್ತಿರುವ ಕಬ್ಬನ್‌ಪಾರ್ಕ್ ಪೊಲೀಸರು ‘ವಿಸ್ಮಯ’ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹಾಗೂ ಶ್ರುತಿ ಅವರ ಮೇಕಪ್‌ಮನ್ ಕಿರಣ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡರು.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಠಾಣೆಗೆ ಬಂದ ಇಬ್ಬರನ್ನೂ ಇನ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ ಹಾಗೂ ಪಿಎಸ್‌ಐ ರೇಣುಕಾ ಸಂಜೆ 5.30ರವರೆಗೂ ವಿಚಾರಣೆ ನಡೆಸಿದರು.

‘ಚಿತ್ರೀಕರಣದ ಸಂದರ್ಭದಲ್ಲಿ ಶ್ರುತಿ ಮಂಕಾಗಿದ್ದರು. ಆ ಬಗ್ಗೆ ವಿಚಾರಿಸಿದ್ದಕ್ಕೆ ಅರ್ಜುನ್ ಸರ್ಜಾ ವರ್ತನೆಯಿಂದ ಬೇಸರವಾಗುತ್ತಿದೆ ಎಂದಷ್ಟೇ ಹೇಳಿದರು. ನನಗೆ ಸಂಬಂಧಪಡದ ವಿಷಯವಾದ ಕಾರಣ, ಆ ಬಗ್ಗೆ ನಾನು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಶ್ರುತಿಗೆ ಸಮಾಧಾನ ಹೇಳಿದ್ದೆ ಅಷ್ಟೇ’ ಎಂದು ಮೋನಿಕಾ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇನ್ನು ಕಿರಣ್, ‘ಚಿತ್ರೀಕರಣ ನಡೆದ ಸ್ಥಳದಲ್ಲಿ ನಾನಿರಲಿಲ್ಲ. ಶೂಟಿಂಗ್ ಮುಗಿಸಿ ಸೆಟ್‌ನಿಂದ ಆಚೆ ಬಂದ ನಂತರ ಶ್ರುತಿ ಮೇಡಂ ನನ್ನ ಬಳಿ ಅಳುತ್ತ ಮಾತನಾಡಿದ್ದರು. ಸರ್ಜಾ ಅವರಿಂದ ತೊಂದರೆ ಆಗುತ್ತಿರುವುದಾಗಿ ಹೇಳಿಕೊಂಡಿದ್ದರು. ನಾವು ಶೂಟಿಂಗ್‌ಗಾಗಿ ದೇವನಹಳ್ಳಿ ಕಡೆಗೆ ಹೋಗುತ್ತಿದ್ದಾಗ ಸರ್ಜಾ ಸರ್ ಸಿಗ್ನಲ್‌ನಲ್ಲಿ ಶ್ರುತಿ ಹರಿಹರನ್ ಅವರನ್ನು ಮಾತನಾಡಿಸಿದ್ದೂ ನಿಜ. ಆದರೆ, ಆಗ ಅವರಿಬ್ಬರ ನಡುವೆ ಏನು ಸಂಭಾಷಣೆ ನಡೆದಿತ್ತು ನನಗೆ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

‘ಚಿತ್ರರಂಗದಲ್ಲಿ ತಮ್ಮ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಬ್ಬರೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ಕೊಟ್ಟಿದ್ದಾರೆ. ಶ್ರುತಿ ಅವರ ಸಹಾಯಕ ಬೋರೇಗೌಡ ಹಾಗೂ ಗೆಳತಿ ಯಶಸ್ವಿನಿ ವಿಚಾರಣೆಗೆ ಬರಲು ಕಾಲಾವಕಾಶ ಕೋರಿದ್ದಾರೆ’ ಎಂದು ಪೊಲೀಸರು ಹೇಳಿದರು.

ಹೈಕೋರ್ಟ್‌ ಮೆಟ್ಟಿಲೇರಿದ ಅರ್ಜುನ್ ಸರ್ಜಾ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ನಟಿ ಶ್ರುತಿ ಹರಿಹರನ್ ಹಾಗೂ ನಟ ಅರ್ಜುನ್ ಸರ್ಜಾ ನಡುವಿನ ‘ಮೀ–ಟೂ' ಕಾದಾಟ ಈಗ ಹೈಕೋರ್ಟ್ ಅಂಗಳಕ್ಕೆ ಕಾಲಿರಿಸಿದೆ.

‘ಕಬ್ಬನ್‌ ಪಾರ್ಕ್ ಪೊಲೀಸರು ನನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಿ’ ಎಂದು ಕೋರಿ ಅರ್ಜುನ್ ಸರ್ಜಾ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣಾಧಿಕಾರಿ ಹಾಗೂ ದೂರುದಾರರಾದ ಶ್ರುತಿ ಹರಿಹರನ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅರ್ಜುನ್‌ ಸರ್ಜಾ ಪರ ವಕೀಲ ಎಂ.ಎಸ್.ಶ್ಯಾಮಸುಂದರ್ ವಕಾಲತು ವಹಿಸಿದ್ದಾರೆ.

ಅರ್ಜಿದಾರರ ಮನವಿ ಏನು? : ‘ಶ್ರುತಿ ಹರಿಹರನ್ ನನ್ನ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಮತ್ತು ದುರುದ್ದೇಶದಿಂದ ಕೂಡಿವೆ. ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಇಲ್ಲ. ಆದ್ದರಿಂದ ಎಫ್‌ಐಆರ್ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ತಡೆ ನೀಡಬೇಕು’ ಎಂದು ಅರ್ಜುನ್‌ ಸರ್ಜಾ ಕೋರಿದ್ದಾರೆ.

* ಇವರಿಬ್ಬರ ವಿಚಾರಣೆ ವೇಳೆ ಇನ್ನೂ ಕೆಲ ಸಾಕ್ಷಿದಾರರ ಹೆಸರುಗಳು ಹೊರಬಿದ್ದಿವೆ. ‘ವಿಸ್ಮಯ’ ಚಿತ್ರದ ನಿರ್ದೇಶಕ ಸೇರಿ ಇನ್ನೂ 10 ಮಂದಿಯ ಹೇಳಿಕೆ ಪಡೆಯಬೇಕಿದೆ
-ಡಿ.ದೇವರಾಜ್, ಡಿಸಿಪಿ ಕೇಂದ್ರವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT