ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ತಪ್ಪಿಸುತ್ತಿರುವ ಬಿಜೆಪಿ ನಾಯಕರು: ಸಿದ್ದರಾಮಯ್ಯ

Last Updated 7 ಸೆಪ್ಟೆಂಬರ್ 2021, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವತ್ತೂ ಮುಂಬಾಗಿಲ ಮೂಲಕ ಅಧಿಕಾರ ಹಿಡಿದಿಲ್ಲ. ಇಂಥ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಗೌರಿ- ಗಣೇಶ ಹಬ್ಬದ ಅಂಗವಾಗಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ದಿನಸಿ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಬಿಜೆಪಿಯವರು ಜನರಿಗೆ ಸುಳ್ಳು ಹೇಳಿ ಹೇಗೆ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು’ ಎಂದರು.

‘ಯಾವ ಸರ್ಕಾರ ಬಂದರೂ ಸಾಲ ಮಾಡುತ್ತವೆ. ನಾನೂ ಮಾಡಿದ್ದೆ. ನನ್ನ ಐದು ವರ್ಷಗಳ ಆಡಳಿತದಲ್ಲಿ ₹ 1.25 ಲಕ್ಷ ಕೋಟಿ ಸಾಲ ಮಾಡಿದ್ದೆ. ಆದರೆ, ಯಡಿಯೂರಪ್ಪ ಸರ್ಕಾರ ಕೇವಲ ಎರಡು ವರ್ಷಗಳಲ್ಲಿ ₹ 1.45 ಲಕ್ಷ ಕೋಟಿ ಸಾಲ ಮಾಡಿದ್ದರು. ಇಂಥ ಬಿಜೆಪಿಯವರಿಗೆ ಸರ್ಕಾರ ನಡೆಸಲು ಯಾವ ನೈತಿಕತೆ ಉಳಿದಿದೆ. ಈ ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂದಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು‘ ಎಂದರು.

ಚುನಾವಣೆ ನಡೆಸಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ನಂತರ ಸಂಭ್ರಮದಲ್ಲಿರುವ ಬಿಜೆಪಿ, ಇದು ಮುಂದಿನ ಚುನಾವಣೆ ದಿಕ್ಸೂಚಿ ಎಂದು ವಿಶ್ಲೇಷಿಸುತ್ತಿದೆ. ಅವರಿಗೆ ಗೆಲ್ಲುವ ವಿಶ್ವಾಸ ಇರುವುದು ನಿಜವೇ ಆದರೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲಿ’ ಎಂದು ಅವರು ಸವಾಲು ಹಾಕಿದರು.

‘ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ನಾವು ಬಿಜೆಪಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದೆವು. ಈ ಬಾರಿಯೂ ನಾವು ಅವರಿಗಿಂತ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರಿಗೆ ಗೆಲ್ಲುವ ಧೈರ್ಯ, ಆತ್ಮವಿಶ್ವಾಸ ಇದ್ದರೆ ಬಿಬಿಎಂಪಿ ಚುನಾವಣೆ ನಡೆಸಲಿ. ಕುಂಟುನೆಪ ಹೇಳುತ್ತಾ ಚುನಾವಣೆ ಮುಂದೂಡುತ್ತಿರುವುದು ಯಾಕೆ? ಚುನಾವಣೆ ಮಾಡಿ, ನಾವು ಸಿದ್ಧವಾಗಿದ್ದೇವೆ. ಜನರ ಕೈಗೆ ಅಧಿಕಾರ ಸಿಗಬೇಕು ಎಂಬುದೇ ಕಾಂಗ್ರೆಸ್ ಸಿದ್ಧಾಂತ’ ಎಂದರು.

ರವಿ, ಕತ್ತಿ ವಿರುದ್ಧ ಕಿಡಿ

‘ಅವನು ಯಾರೋ ಸಿ.‌ಟಿ. ರವಿ ಅಂತ ಇದ್ದಾನೆ. ಅವನಿಗೆ ಮಾನ, ಮರ್ಯಾದೆ ಇಲ್ಲ. ಇಂದಿರಾ ಗಾಂಧಿ ಗರೀಬಿ ಹಠಾವೋ ಆಂದೋಲನ ಮಾಡಿದ್ದರು ಎನ್ನುವುದು ಗೊತ್ತಿಲ್ಲ. ಒಬ್ಬರಿಗೆ ನಾಲ್ಕು ಕೆಜಿ ಅಕ್ಕಿ ಸಾಕು ಎಂದು ಆಹಾರ ಸಚಿವ ಕತ್ತಿ ಹೇಳ್ತಾನೆ. ಅವನಿಗೇನೊ ಸಕ್ಕರೆ ಕಾಯಿಲೆ ಇರಬಹುದು. ಬೇರೆಯವರಿಗೆ ನಾಲ್ಕು ಕೆಜಿ ಸಾಲುತ್ತಾ’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT