ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಮಾಸೆಕ್‌ ಅಧೀನಕ್ಕೆ ಮಣಿಪಾಲ್‌ ಹಾಸ್ಪಿಟಲ್ಸ್‌

ಹೆಚ್ಚುವರಿಯಾಗಿ ಶೇ 41 ಷೇರು ಖರೀದಿ ಒಪ್ಪಂದಕ್ಕೆ ಸಹಿ
Last Updated 11 ಏಪ್ರಿಲ್ 2023, 6:17 IST
ಅಕ್ಷರ ಗಾತ್ರ

ಬೆಂಗಳೂರು: ಮಣಿಪಾಲ್ ಆಸ್ಪತ್ರೆಗಳನ್ನು ಮುನ್ನಡೆಸುವ ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ನಲ್ಲಿ (ಎಂಎಚ್‌ಇ) ಹೆಚ್ಚುವರಿಯಾಗಿ ಶೇಕಡ 41ರಷ್ಟು ಷೇರುಗಳನ್ನು ಖರೀದಿಸಲು ನಿರ್ಣಾಯಕ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ಸಿಂಗಪುರ ಮೂಲದ ಟಮಾಸೆಕ್‌ ಕಂಪನಿ ಸೋಮವಾರ ಹೇಳಿದೆ.

ಈ ಸ್ವಾಧೀನ ಪ್ರಕ್ರಿಯೆಯ ಬಳಿಕ ಎಂಎಚ್‌ಇನಲ್ಲಿ ಟೆಮಾಸೆಕ್‌ ಷೇರುಪಾಲು ಶೇ 59ಕ್ಕೆ ಏರಿಕೆ ಆಗಲಿದೆ. ಮಣಿಪಾಲ್‌ ಸಮೂಹದ ಷೇರುಪಾಲು ಶೇ 30ಕ್ಕೆ ಇಳಿಕೆ ಆಗಲಿದೆ. ನ್ಯಾಷನಲ್‌ ಇನ್‌ವೆಸ್ಟ್‌ಮೆಂಟ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಫಂಡ್‌ (ಎನ್‌ಐಐಎಫ್‌) ತಾನು ಹೊಂದಿರುವ ಅಷ್ಟೂ ಪ್ರಮಾಣದ ಷೇರುಗಳನ್ನು ಟಮಾಸೆಕ್‌ಗೆ ಮಾರಾಟ ಮಾಡಲಿದೆ.

ಟಮಾಸೆಕ್‌ ಕಂಪನಿಯು ಟಿಪಿಜಿ ಮತ್ತು ಮಣಿಪಾಲ್ ಸಮೂಹದ ಅಧ್ಯಕ್ಷ ರಂಜನ್‌ ಪೈ ಅವರ ಕುಟುಂಬದವರಿಂದ ಷೇರುಗಳನ್ನು ಖರೀದಿಸಲಿದೆ ಎಂದು ಕಂಪನಿಗಳು ಜಂಟಿ ಹೇಳಿಕೆ ನೀಡಿವೆ. ಆದರೆ, ಖರೀದಿಗೆ ಸಂಬಂಧಿಸಿದ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಆದರೆ, ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ಮಾಡಿರುವ ವರದಿಯ ಪ್ರಕಾರ, ಟಮಾಸೆಕ್‌ ಕಂಪನಿಯು ₹ 16,300 ಕೋಟಿಗೆ ಮಣಿಪಾಲ್‌ ಹಾಸ್ಪಿಟಲ್ಸ್‌ ಷೇರುಗಳನ್ನು ಖರೀದಿಸಲಿದ್ದು, ಭಾರತದ ಆರೋಗ್ಯ ಸೇವಾ ವಲಯದಲ್ಲಿ ಅತಿದೊಡ್ಡ ಖರೀದಿ ಒಪ್ಪಂದ ಇದಾಗಲಿದೆ.

ಎಂಎಚ್‌ಇನಲ್ಲಿ ಗಮನಾರ್ಹ ಪ್ರಮಾಣದ ಷೇರುಗಳನ್ನು ಟಮಾಸೆಕ್‌ ಸ್ವಾಧೀನ ಮಾಡಿಕೊಂಡಿರುವುದು ಹಾಗೂ ಕಂಪನಿಯ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಆಗುವಂತೆ ಆಡಳಿತ ಮಂಡಳಿಗೆ ಬೆಂಬಲ ನೀಡುತ್ತಿರುವುದು ಸಂತೋಷ ನೀಡಿದೆ ಎಂದು ರಂಜನ್‌ ಪೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಣಿಪಾಲ್‌ ಹೆಲ್ತ್‌ ಕೇರ್‌, ತನ್ನ 29 ಆಸ್ಪತ್ರೆಗಳ ಜಾಲದ ಮೂಲಕ ವಾರ್ಷಿಕ 50 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಮಣಿಪಾಲ್‌ ಹಾಸ್ಪಿಟಲ್ಸ್‌ ಈಚೆಗಷ್ಟೇ ಕೊಲಂಬಿಯಾ ಏಷ್ಯಾ ಮತ್ತು ವಿಕ್ರಂ ಹಾಸ್ಪಿಟಲ್‌ ಅನ್ನು ಸ್ವಾಧೀನಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT