ಬೆಂಗಳೂರು: ರಾಜ್ಯದ ವಿವಿಧೆಡೆ ₹ 3,935 ಕೋಟಿ ಹೂಡಿಕೆಯ 73 ಪ್ರಸ್ತಾವಗಳಿಗೆ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಶುಕ್ರವಾರ ಅನುಮೋದನೆ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
‘ಅನುಮೋದನೆ ನೀಡಿರುವ ಪ್ರಸ್ತಾವಗಳಲ್ಲಿ ₹ 50 ಕೋಟಿಗೂ ಹೆಚ್ಚು ಮೊತ್ತದ ಹೂಡಿಕೆಯ 10 ಯೋಜನೆಗಳಿವೆ. ₹ 15 ಕೋಟಿಯಿಂದ ₹ 50 ಕೋಟಿವರೆಗಿನ ಹೂಡಿಕೆಯ 59 ಪ್ರಸ್ತಾವಗಳಿವೆ. 73 ಪ್ರಸ್ತಾವಗಳಿಂದ ಒಟ್ಟು 14,497 ಉದ್ಯೋಗಗಳು ಸೃಜನೆಯಾಗಲಿವೆ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ದೇವನಹಳ್ಳಿ, ಸಿರಾ ಕೈಗಾರಿಕಾ ಪ್ರದೇಶ, ಹೂವಿನಹಡಗಲಿ, ರಾಮನಗರ, ಕಡೇಚೂರು, ಚಾಮರಾಜನಗರ, ಗೌರಿಬಿದನೂರು ಮತ್ತು ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಪ್ರಮುಖ ಕಂಪನಿಗಳು ಹೂಡಿಕೆ ಮಾಡಲಿವೆ. ಕೆಲವು ಯೋಜನೆಗಳಲ್ಲಿ ₹ 450 ಕೋಟಿಗಳವರೆಗೂ ಹೂಡಿಕೆಯಾಗಲಿದೆ ಎಂದು ವಿವರಿಸಿದ್ದಾರೆ.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ್ ಸಭೆಯಲ್ಲಿದ್ದರು.