ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕುಸಿತ: ಕಾರಣ ನಿಗೂಢ- ನೀರಿನ ಸೋರಿಕೆ ಜಾಡುಹಿಡಿದು ಕಾರಣ ಹುಡುಕಾಟ

ನೀರಿನ ಸೋರಿಕೆ ಜಾಡುಹಿಡಿದು ಕಾರಣ ಹುಡುಕಾಟ
Last Updated 13 ಜನವರಿ 2023, 20:07 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ರೈಲು ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿರುವ ಬ್ರಿಗೇಡ್ ರಸ್ತೆಯಲ್ಲಿ ರಸ್ತೆ ಕುಸಿತಕ್ಕೆ ಕಾರಣ ಏನು ಎಂಬುದು ನಿಗೂಢವಾಗಿದ್ದು, ಬಿಎಂಆರ್‌ಸಿಎಲ್ ಮತ್ತು ಜಲಮಂಡಳಿ ಅಧಿಕಾರಿಗಳು ಕಾರಣ ಪತ್ತೆಗೆ ಹುಡುಕಾಟ ಮುಂದುವರಿಸಿದ್ದಾರೆ.

‌ಮೆಟ್ರೊ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಕುಸಿದ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಅದನ್ನು ಹೊರಹಾಕಿ, ಕಾಂಕ್ರಿಟ್ ಮಿಶ್ರಣ ಸುರಿದು ಮುಚ್ಚಲಾಗಿದೆ. ಮೆಟ್ರೊ ಸುರಂಗ ಮಾರ್ಗ 10.5 ಮೀಟರ್ ಆಳದಲ್ಲಿ ಕಲ್ಲು ಬಂಡೆಗಳ ನಡುವೆ ಸಾಗುತ್ತಿದ್ದು, ಸುತ್ತಲೂ ಬಂಡೆ ಇದೆ. ಮೇಲಿನ ಮಣ್ಣು ಕುಸಿಯಲು ಯಾವುದೇ ಸಾಧ್ಯತೆ ಇಲ್ಲ ಎಂಬುದು ಬಿಎಂಆರ್‌ಸಿಎಲ್ ಅಧಿಕಾರಿಗಳ ಅಭಿಪ್ರಾಯ.

ಐದು ದಿನಗಳ ಹಿಂದೆಯೇ ಆ ಸ್ಥಳದಿಂದ ಸುರಂಗ ಕೊರೆಯುವ ಯಂತ್ರ(ಟಿಬಿಎಂ) ಹಾದುಹೋಗಿದೆ. ಮಣ್ಣು ಸಡಿಲಗೊಂಡು ಕುಸಿದಿದ್ದರೆ ಸುರಂಗದೊಳಗೆ ಮಣ್ಣು ಸುರಿಯಬೇಕಿತ್ತು. ಆದರೆ, ಸುರಂಗದೊಳಗೆ ಎಲ್ಲೂ ಮಣ್ಣು ಕಾಣಿಸುತ್ತಿಲ್ಲ. ನೀರು ತುಂಬಿಕೊಂಡಿರುವುದರಿಂದ ಯಾವುದೋ ಪೈಪ್‌ಲೈನ್ ಸೋರಿಕೆ ಆಗಿರಬಹುದು ಎಂಬುದು ಅವರ ಅಂದಾಜು.

ಜಲಮಂಡಳಿ ಅಧಿಕಾರಿಗಳು ಎರಡು ದಿನಗಳಿಂದ ಪರಿಶೀಲನೆ ನಡೆಸುತ್ತಿದ್ದು, ನೀರಿನ ಪೈಪ್‌ಲೈನ್ ಸೋರಿಕೆ ಆಗಿದೆಯೇ ಎಂಬುದನ್ನು ಹುಡುಕುತ್ತಿದ್ದಾರೆ. ಆದರೆ, ಅದು ಕೂಡ ಖಾತ್ರಿಯಾಗುತ್ತಿಲ್ಲ.

‘ನೀರು ಹೊರಹಾಕಿ ಕಾಂಕ್ರಿಟ್‌ ಮಿಶ್ರಣ ಸುರಿದ ನಂತರ ಮತ್ತೆ ಸೋರಿಕೆಯಾಗುತ್ತಿಲ್ಲ. ಪೈಪ್‌ಲೈನ್‌ ಒಡೆದಿದ್ದರೆ ನೀರು ಸೋರಿಕೆ ಮುಂದುವರಿಯಬೇಕಿತ್ತು. ಅಲ್ಲಿರುವ ಪೈಪ್‌ಲೈನ್‌ನಲ್ಲಿ ನೀರು ಸರಾಗವಾಗಿ ಹರಿಯುತ್ತಿದೆಯೇ ಎಂಬುದನ್ನೂ ಪರಿಶೀಲಿಸಲಾಗಿದ್ದು, ಎಲ್ಲವೂ ಸರಿಯಾಗಿದೆ. ಜಲಮಂಡಳಿ ಪೈಪ್‌ಲೈನ್‌ನಿಂದ ತೊಂದರೆಯಾಗಿಲ್ಲ. ಸುರಂಗ ಕೊರೆಯುವ ಯಂತ್ರ ಸಾಗುವಾಗ ಅಲ್ಲಲ್ಲಿ ಗುಳಿ ಬೀಳುವ ಸಾಧ್ಯತೆ ಇರುತ್ತದೆ. ರಸ್ತೆ ಕುಸಿಯಲು ಇದೇ ಕಾರಣ ಇರಬಹುದು’ ಎಂದು ಜಲ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ಜಲಮಂಡಳಿ ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ನಿಗೂಢ ಭೇದಿಸಲು ತಲೆಕೆಡಿಕೊಂಡಿದ್ದು, ಈ ಸ್ಥಳದ ಮೇಲೆ ವಿಶೇಷ ನಿಗಾ ಇರಿಸಿದ್ದಾರೆ.

ಮಾರ್ಗಸೂಚಿ ಬದಲಾವಣೆ ಸಾಧ್ಯತೆ
ಬೆಂಗಳೂರು: ಮೆಟ್ರೊ ರೈಲು ಮಾರ್ಗದ ಪಿಲ್ಲರ್ ನಿರ್ಮಾಣ ಕಾಮಗಾರಿಗೆ ಮಾರ್ಗಸೂಚಿ ಬದಲಾವಣೆ ಬಗ್ಗೆ ಹೈಕೋರ್ಟ್‌ ನಿರ್ದೇಶನ ನೋಡಿಕೊಂಡು ಮುಂದುವರಿಯಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ವಿಮಾನ ನಿಲ್ದಾಣ ಮಾರ್ಗದಲ್ಲಿ 12 ಮೀಟರ್ ಎತ್ತರದ ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಅದಕ್ಕಿಂತ ಹೆಚ್ಚಿನ ಎತ್ತರದ ಪಿಲ್ಲರ್‌ಗಳ ನಿರ್ಮಾಣ ವಿಷಯದಲ್ಲಿ ಮಾರ್ಗಸೂಚಿ ಬದಲಿಸಬೇಕು ಎಂಬ ಆಲೋಚನೆಯನ್ನು ಬಿಎಂಆರ್‌ಸಿಎಲ್ ನಡೆಸಿತ್ತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿರುವುದರಿಂದ ಪೀಠದ ನಿರ್ದೇಶನಕ್ಕೆ ಕಾಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

‘12 ಮೀಟರ್‌ಗೂ ಕಡಿಮೆ ಎತ್ತರದ ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿಗೆ ಯಾವುದೇ ಅಡಚಣೆ ಇಲ್ಲ. ಸದ್ಯದ ಮಾರ್ಗಸೂಚಿಯನ್ನೇ
ಅನುಸರಿಸಲಾಗುತ್ತಿದೆ. ಅದಕ್ಕೂ ಎತ್ತರ ಇರುವು ಕಡೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ನ್ಯಾಯಾಲಯ ಮತ್ತು ತಜ್ಞರ ತಂಡದಿಂದ ಯಾವ ಅಭಿಪ್ರಾಯ ಬರಲಿದೆ ಎಂಬುದನ್ನು ನೋಡಿಕೊಂಡು ಮುಂದುವರಿಯಲಾಗುವುದು’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.

ಇದರ ಹೊರತಾಗಿ ವಿಮಾನ ನಿಲ್ದಾಣ ಮಾರ್ಗದ ಮೆಟ್ರೊ ರೈಲು ಕಾಮಗಾರಿ ಮುಂದುವರಿಯುತ್ತಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸಂಚಾರ ಸುಗಮ
ರಸ್ತೆ ಕುಸಿದ ಕೂಡಲೇ ನೀರು ಹೊರಹಾಕಿ, ಕಾಂಕ್ರೀಟ್‌ ಭರ್ತಿ ಮಾಡಲಾಗಿದ್ದು, ಶುಕ್ರವಾರ ಮಧ್ಯಾಹ್ನದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.

‘ಭರ್ತಿ ಮಾಡಿದ ಬಳಿಕವೂ ಮತ್ತೆ ಕುಸಿಯುವ ಸಾಧ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಿ ಯಾವುದೇ ತೊಂದರೆ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಮಾಡಲಾಗಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT