ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧಿಕರು ಪ್ರಭಾವ ಬೀರದಂತೆ ಕಟ್ಟಪ್ಪಣೆ ಹೊರಡಿಸಿದ್ದ ಸರ್‌ಎಂವಿ: ಸಿದ್ದರಾಮಯ್ಯ

56ನೇ ಎಂಜಿನಿಯರ್‌ಗಳ ದಿನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Published 15 ಸೆಪ್ಟೆಂಬರ್ 2023, 16:16 IST
Last Updated 15 ಸೆಪ್ಟೆಂಬರ್ 2023, 16:16 IST
ಅಕ್ಷರ ಗಾತ್ರ

ಬೆಂಗಳೂರು: ‘ತಮ್ಮ ಮೇಲೆ ಯಾರೂ ಪ್ರಭಾವ ಬೀರಬಾರದು ಎಂದು ವಿಶ್ವೇಶ್ವರಯ್ಯ ಅವರು ಮೈಸೂರು ಆಸ್ಥಾನದಲ್ಲಿ ದಿವಾನರಾದ ಸಮಯದಲ್ಲಿ ಸಂಬಂಧಿಕರಿಗೆ ಕಟ್ಟಪ್ಪಣೆಯನ್ನು ವಿಧಿಸಿದ್ದರು. ಇದು ಇಂದಿನ ರಾಜಕಾರಣಿಗಳು ಅನುಸರಿಸಬೇಕಾದ ಮಾರ್ಗ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್ ಆಯೋಜಿಸಿದ್ದ ‘56ನೇ ಎಂಜಿನಿಯರ್‌ಗಳ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಎಂಜಿನಿಯರ್‌ಗಳ ದಿನವೂ ಹೌದು. ವಿಶ್ವ ಪ್ರಜಾಪ್ರಭುತ್ವ ದಿನವೂ ಹೌದು. ಉತ್ತಮ ಸಮಾಜದ ನಿರ್ಮಾಣವೇ ಈ ಎರಡರ ಉದ್ದೇಶವಾಗಿದೆ. ಎಂಜಿನಿಯರ್‌ಗಳು ದೇಶದ, ಸಮಾಜದ ನಿರ್ಮಾತೃಗಳು. ಸಮಾಜವನ್ನು, ದೇಶವನ್ನು ಪ್ರಗತಿಯ ದಿಕ್ಕಿನಲ್ಲಿ ಒಯ್ಯುವವರು ಎಂದು ವಿಶ್ಲೇಷಿಸಿದರು. 

ಶಿಕ್ಷಣ, ಕೈಗಾರಿಕೆ, ನೀರಾವರಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ವಿಶ್ವೇಶ್ವರಯ್ಯ ಕೆಲಸ ಮಾಡಿದ್ದರು. ಮುಂದಿನ ಸಮಾಜ ಹೇಗಿರಬೇಕು ಎನ್ನುವ ಗ್ರಹಿಕೆ ಮತ್ತು ದೂರದರ್ಶಿತ್ವವನ್ನು ಹೊಂದಿದ್ದ ಕಾರಣದಿಂದಲೇ ಅವರು ಭಾರತ ರತ್ನ ಪುರಸ್ಕೃತರಾದರು ಎಂದು ನೆನಪಿಸಿಕೊಂಡರು.

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌ ಮಾತನಾಡಿ, ‘1913ರಲ್ಲಿ ನಿರ್ಮಿಸಲಾಗಿರುವ ಸರ್‌ ಎಂ. ವಿಶ್ವೇಶ್ವರಯ್ಯ ಕಾಲೇಜಿಗೆ ಪ್ರತ್ಯೇಕ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ಹಿಂದಿನ ಸರ್ಕಾರ ನೀಡಿತ್ತು. ಆದರೆ, ಅದಕ್ಕೆ ಬೇಕಾದ ಸ್ಥಳ, ಸೌಲಭ್ಯ ನೀಡಿಲ್ಲ. ಈಗಿರುವ 50 ಎಕರೆ ಭೂಮಿ ಸಾಕಾಗುವುದಿಲ್ಲ. 100 ಎಕರೆ ಜಮೀನು ಅಗತ್ಯವಿದೆ. ದೇಶದ ಒಳಿತಿಗಾಗಿ ಕೆಲಸ ಮಾಡಿದವರ ಹೆಸರನ್ನು ಯಾವುದೇ ಸಂಸ್ಥೆಗೆ ಇಟ್ಟಾಗ ಅದು ಗೌರವ ಕಾಪಾಡಿಕೊಳ್ಳುವಂತಿರಬೇಕು. ಹಾಗಾಗಿ ವಿಶ್ವೇಶ್ವರ ವಿಶ್ವವಿದ್ಯಾಲಯಕ್ಕೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಸಾಧಕ ಎಂಜಿನಿಯರ್‌ಗಳಾದ ಎಪಿವಿಎಸ್ ಪ್ರಸಾದ್‌, ಜಯದೇವ ಇ.ಪಿ., ಗೀತಾ ಮಂಜುನಾಥ್, ಸಿ. ಸತ್ಯನಾರಾಯಣ, ಕೃಷ್ಣಕಾಂತ್ ನಾಯಕ್‌, ಆಶೀಶ್‌ ಸೋಲಂಕಿ, ಎಸ್‌.ಎನ್‌. ಶ್ರೀಧರ್‌, ಕೆ.ಎನ್‌. ಸುಬ್ರಹ್ಮಣ್ಯ, ಆರ್‌.ಎಚ್‌. ಗೌಡರ್‌, ಎಚ್‌.ಕೆ. ಗೋಪಾಲಕೃಷ್ಣ, ತೀರ್ಥಪ್ರಸಾದ್‌, ಸಿರಿ ಪ್ರಸನ್ನರಾಜ್‌, ಮಹೇಶ್‌ ಕೆ., ರುಷಾಲಿ ಪೂವಮ್ಮ, ಸಿ.ಟಿ. ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು. 

ಕರ್ನಾಟಕ ರಾಜ್ಯ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ಸ್ ಸಂಸ್ಥೆಯ ಅಧ್ಯಕ್ಷ ಎಂ. ಲಕ್ಷ್ಮಣ, ಗೌರವ ಕಾರ್ಯದರ್ಶಿ ಎಂ.ಟಿ. ರಂಗಾ ರೆಡ್ಡಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT