ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಜಿತ ಅಭಿವೃದ್ಧಿಗೆ ಸರ್‌ಎಂವಿ ಪ್ರಸಿದ್ಧ: ಗಜಾನನ ಶರ್ಮಾ

82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರದರ್ಶನಗಳ ಅನಾವರಣ
Published : 15 ಸೆಪ್ಟೆಂಬರ್ 2024, 16:38 IST
Last Updated : 15 ಸೆಪ್ಟೆಂಬರ್ 2024, 16:38 IST
ಫಾಲೋ ಮಾಡಿ
Comments

ಬೆಂಗಳೂರು: ‘ಅಭಿವೃದ್ಧಿ ಎನ್ನುವುದು ಅರ್ಬುದ ರೋಗವಲ್ಲ. ಯೋಜನೆಯಿಲ್ಲದೇ ಅಭಿವೃದ್ಧಿ ಮಾಡುವುದಲ್ಲ. ನಾಡಿಗೆ ದೂರದೃಷ್ಟಿಯ ಯೋಜಿತ ಅಭಿವೃದ್ಧಿ ತಂದವರು ಸರ್‌ ಎಂ.ವಿಶ್ವೇಶ್ವರಯ್ಯನವರು’ ಎಂದು ಇತಿಹಾಸಕಾರ ಗಜಾನನ ಶರ್ಮಾ ತಿಳಿಸಿದರು.

82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರದರ್ಶನಗಳ ಅನಾವರಣ, ಸರ್‌ ಎಂ.ವಿ. ಜನ್ಮ ದಿನಾಚರಣೆ, ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಭಾರತದ ಪುನರ್‌ ನಿರ್ಮಾಣ ಹೇಗೆ ಎಂಬುದನ್ನು ಅವರು 1921ರಲ್ಲಿಯೇ ಬರೆದಿದ್ದರು. 1933ರಲ್ಲಿ ಪ್ಲಾನ್ಡ್‌ ಎಕಾನಮಿ ಆಫ್‌ ಇಂಡಿಯಾ ಎಂಬ ಕೃತಿ ಬರೆದಿದ್ದರು. ಪಂಚವಾರ್ಷಿಕ ಯೋಜನೆ, ದಶವಾರ್ಷಿಕ ಯೋಜನೆಗಳನ್ನು ಅದರಲ್ಲಿ ವಿವರಿಸಿದ್ದರು. ಅದೇ ಮುಂದೆ ಯೋಜನಾ ಆಯೋಗದ(ಪ್ಲಾನಿಂಗ್‌ ಕಮಿಷನ್‌) ರಚನೆಗೆ ಕಾರಣವಾಯಿತು ಎಂದು ಹೇಳಿದರು.

ಸಮಯಪಾಲನೆ, ಶ್ರದ್ಧೆ, ಕಾರ್ಯೋತ್ಸಾಹ ಮತ್ತು ದೇಶಪ್ರೇಮಕ್ಕೆ ಹೆಸರಾಗಿದ್ದ ವಿಶ್ವೇಶ್ವರಯ್ಯ ಅವರಿಗೆ ತಾನು ಒಪ್ಪದೇ ಇರುವುದನ್ನು ನೇರವಾಗಿ ಹೇಳುವ ಪ್ರಾಮಾಣಿಕತೆ ಇತ್ತು. 1918ರಲ್ಲಿ ಮಿಲ್ಲರ್‌ ಸಮಿತಿಯ ವರದಿಯನ್ನು ಅವರು ಒಪ್ಪದೇ ಇದ್ದಾಗ ರಾಜೀನಾಮೆ ನೀಡಬೇಕಾದ ಸನ್ನಿವೇಶ ಬಂದರೂ ತನ್ನ ನಂಬಿಕೆ, ಬದ್ಧತೆಯಿಂದ ಹಿಂದೆ ಸರಿದಿರಲಿಲ್ಲ ಎಂದು ವಿವರಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ರಮೇಶಚಂದ್ರ ಲಹೋಟಿ ಮಾತನಾಡಿ, ‘ಹೊಸ ಬರಹಗಾರರ ಒಂದು ಅತ್ಯುತ್ತಮ ಕವನ ಸಂಕಲನ ಮತ್ತು ಒಂದು ಗದ್ಯ ಕೃತಿಗೆ ತಲಾ ₹ 25 ಸಾವಿರ ಮೊತ್ತದ ಪ್ರಶಸ್ತಿ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿಗೆ ವರ್ಷಕ್ಕೆ ₹50 ಸಾವಿರದಂತೆ ಐದು ವರ್ಷ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದಕ್ಕೆ ವಿಶ್ವೇಶ್ವರಯ್ಯ ಅವರ ಅಗಾಧ ಪರಿಶ್ರಮ, ದೂರದೃಷ್ಟಿ, ಸಮಾಜಮುಖಿ ಯೋಜನೆಗಳ ಬುನಾದಿಯೇ ಕಾರಣ. ಬೆಂಗಳೂರಿನ ಜನರು ಒಂದು ಲೋಟ ನೀರು ಕುಡಿಯಬೇಕಿದ್ದರೂ ವಿಶ್ವೇಶ್ವರಯ್ಯ ಅವರನ್ನು ನೆನಪು ಮಾಡಿಕೊಳ್ಳಬೇಕು’ ಎಂದು ಹೇಳಿದರು.

2024ನೇ ಸಾಲಿನ ‘ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ದತ್ತಿ ಪ್ರಶಸ್ತಿ’ಯನ್ನು ಎಂ.ಎನ್. ಸತೀಶ್ ಕುಮಾರ್ ಅವರಿಗೆ ಹಾಗೂ ‘ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿ’ಯನ್ನು ದಯಾನಂದ ಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT