ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆ, ಹೋಟೆಲ್‌ ಸೇರಿ ಆರು ಉದ್ದಿಮೆಗಳಿಗೆ ಬೀಗ

ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಉಲ್ಲಂಘನೆಗೆ ದಂಡ * ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ತಂಡದಿಂದ ದಿಢೀರ್‌ ದಾಳಿ
Last Updated 6 ಏಪ್ರಿಲ್ 2021, 22:30 IST
ಅಕ್ಷರ ಗಾತ್ರ

ಬೆಂಗಳೂರು: ಅಂಗಡಿ, ಮಳಿಗೆಗಳು ಹಾಗೂ ಹೋಟೆಲ್‌ಗಳಲ್ಲಿ ಕೋವಿಡ್‌ ನಿಯಂತ್ರಣದ ಮಾರ್ಗಸೂಚಿಗಳ ಪಾಲನೆ ಮಾಡದಿರುವುದು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ. ನಿಯಮ ಉಲ್ಲಂಘಿಸಿರುವ ಹೋಟೆಲ್‌, ಮಳಿಗೆಗಳು ಸೇರಿದಂತೆ ಆರಕ್ಕೂ ಅಧಿಕ ಉದ್ದಿಮೆಗಳನ್ನು ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ಮುಚ್ಚಿಸಿದ್ದಾರೆ. ಹತ್ತಕ್ಕೂ ಅಧಿಕ ಸಂಸ್ಥೆಗಳಿಗೆ ದಂಡ ವಿಧಿಸಿದ್ದಾರೆ.

ಮಹದೇವಪುರ ವಲಯದಲ್ಲಿ ಫೀನಿಕ್ಸ್‌ ಮಾಲ್‌ನಲ್ಲಿ ಬಿಗ್‌ಬಜಾರ್‌, ಬಫೆಲೊ ವೈಲ್ಡ್‌ ವಿಂಗ್ಸ್‌ ರೆಸ್ಟೋರೆಂಟ್‌ಗಳನ್ನು ಕೋವಿಡ್‌ ನಿಯಮ ಉಲ್ಲಂಘನೆ ಕಾರಣಕ್ಕೆ ಮುಚ್ಚಿಸಲಾಗಿದೆ.

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಮುದ್ದಿನಪಾಳ್ಯದ ಡಿ–ಗ್ರೂಪ್‌ ಬಡಾವಣೆಯ ರಿಲಯನ್ಸ್ ಫ್ರೆಶ್ ಮಾರ್ಟ್ ಹಾಗೂ ಉಡುಪಿ ಕೈರುಚಿ ಹೋಟೆಲ್‌ಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿಸಿದ್ದಾರೆ.

ರಾಜರಾಜೇಶ್ವರಿನಗರ ವಲಯದ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ನೇತೃತ್ವದ ಅಧಿಕಾರಿಗಳ ತಂಡವು ಕೋವಿಡ್‌ ನಿಯಮಗಳ ಪಾಲನೆ ಪರಿಶೀಲನೆ ನಡೆಸುತ್ತಿತ್ತು. ಈ ವೇಳೆ ರಿಲಯನ್ಸ್‌ ಫ್ರೆಶ್‌ ಮಾರ್ಟ್‌ ಹಾಗೂ ‘ಉಡುಪಿ ಕೈರುಚಿ’ ಹೋಟೆಲ್‌ಗಳು ಕೋವಿಡ್ ಸೋಂಕು ಹರಡದಂತೆ ತಡೆಯಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಕಂಡು ಬಂದಿತ್ತು.

‘ರಿಲಯನ್ಸ್‌ ಫ್ರೆಶ್‌ ಮಾರ್ಟ್‌ನಲ್ಲಿ ಹಾಗೂ ಉಡುಪಿ ಕೈರುಚಿ ಹೋಟೆಲ್‌ನಲ್ಲಿ ಯಾರೂ ಮಾಸ್ಕ್ ಧರಿಸಿರಲಿಲ್ಲ. ಸೋಂಕು ನಿವಾರಕ ದ್ರಾವಣದಿಂದ ಕೈತೊಳೆಯುವ ವ್ಯವಸ್ಥೆಯನ್ನೂ ಇಲ್ಲಿ ಕಲ್ಪಿಸಿರಲಿಲ್ಲ. ಗ್ರಾಹಕರ ದೇಹದ ಉಷ್ಣಾಂಶ ತಪಾಸಣೆಗೂ ವ್ಯವಸ್ಥೆ ಮಾಡಿರಲಿಲ್ಲ. ಹಾಗಾಗಿ ಇವುಗಳನ್ನು ಮುಚ್ಚಲಾಗಿದೆ’ ಎಂದು ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿ ಮಳಿಗೆಗಳಿಗೆ ದಿಢೀರ್‌ ದಾಳಿ ನಡೆಸಿದ ಪಶ್ಚಿಮ ವಲಯದ ಆರೋಗ್ಯ ವಿಭಾಗದ ಅಧಿಕಾರಿಗಳು, ಅಂತರ ಕಾಪಾಡಲು ವ್ಯವಸ್ಥೆ ಹೊಂದಿರದ ಹೋಟೆಲ್‌ ಕಾಫಿ ಹಾಗೂ ಬಾಡೂಟ ಮಿಲಿಟರಿ ಹೋಟೆಲ್‌ಗಳನ್ನು ಮುಚ್ಚಿಸಿದ್ದಾರೆ. ಸಿಬ್ಬಂದಿ ಮಾಸ್ಕ್‌ ಧರಿಸದ ಕಾರಣಕ್ಕೆ ಮಲ್ಲೇಶ್ವರದ ಸಂಗೀತಾ ಮೊಬೈಲ್ಸ್‌ ₹ 2250, ಹುನಕಲ್‌ ಹೈಟ್ಸ್‌ ಕಾಫಿ ಕೆಫೆಗೆ ₹ 250 ದಂಡ ವಿಧಿಸಿದ್ದಾರೆ. ಶಾಂತಿಸಾಗರ್‌ ಹೋಟೆಲ್‌ಗೆ ನೋಟಿಸ್‌ ನೀಡಿದ್ದಾರೆ.

ದಾಸರಹಳ್ಳಿ ವಲಯದಲ್ಲಿ ಮಾಸ್ಕ್‌ ಧರಿಸದ ಕಾರಣಕ್ಕೆ ಹೋಟೆಲ್‌ಗಳು, ಮಳಿಗೆಗಳು, ಜೂಸ್‌ ಸೆಂಟರ್‌ಗಳು ಸೇರಿ ಒಟ್ಟು 13 ಉದ್ದಿಮೆಗಳ ಸಿಬ್ಬಂದಿಗೆ ಒಟ್ಟು ₹ 4,450 ದಂಡ ವಿಧಿಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ‘ನಗರದಲ್ಲಿ ಅನೇಕ ಕಡೆ ಮಾಲ್‌ಗಳು, ಮಳಿಗೆಗಳು ಹಾಗೂ ಹೋಟೆಲ್‌ಗಳಲ್ಲಿ ಕೋವಿಡ್‌ ನಿಯಂತ್ರಣದ ಮಾರ್ಗಸೂಚಿಗಳನ್ನು ಪಾಲಿಸದಿರುವುದು ನನ್ನ ಗಮನಕ್ಕೆ ಬಂದಿದೆ. ಅವರು ತಮಗೂ ಅಪಾಯ ತಂದುಕೊಳ್ಳುವುದರ ಜೊತೆಗೆ ಸಾರ್ವಜನಿಕರನ್ನೂ ಅಪಾಯಕ್ಕೆ ದೂಡುತ್ತಿದ್ದಾರೆ. ಯಾರೋ ಬೆರಳೆಣಿಕೆ ಮಂದಿ ಮಾಡುವ ತಪ್ಪಿನಿಂದ ಇತರರಿಗೂ ಸಮಸ್ಯೆ ಆಗುತ್ತದೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಲ್ಲೆಲ್ಲ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ ಎಂಬುದನ್ನು ಪತ್ತೆ ಹಚ್ಚಿ, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

*
ಕೋವಿಡ್‌ ನಿಯಂತ್ರಣದ ಮಾರ್ಗಸೂಚಿಗಳನ್ನು ಪಾಲಿಸದ ಅಂಗಡಿ, ಮಳಿಗೆಗಳನ್ನು, ಹೋಟೆಲ್‌ಗಳನ್ನು ಮುಚ್ಚಿಸುವುದು ಅನಿವಾರ್ಯ. ಸೋಂಕು ನಿಯಂತ್ರಣಕ್ಕೆ ಎಲ್ಲರೂ ಸ್ವಯಂಪ್ರೇರಿತವಾಗಿ ಸಹಕರಿಸಬೇಕು.
-ಗೌರವ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT