ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಕೈಗಾರಿಕೆಗಳು ಭಾರತದ ಆರ್ಥಿಕತೆಯ ಬೆನ್ನೆಲುಬು

Published 2 ನವೆಂಬರ್ 2023, 19:41 IST
Last Updated 2 ನವೆಂಬರ್ 2023, 19:41 IST
ಅಕ್ಷರ ಗಾತ್ರ

ಬೆಂಗಳೂರು/ಪೀಣ್ಯ ದಾಸರಹಳ್ಳಿ: ‘ಆರ್ಥಿಕತೆಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಣ್ಣ ಕೈಗಾರಿಕೆಗಳು ದೊಡ್ಡ ಪಾತ್ರ ವಹಿಸುತ್ತವೆ. ಸಣ್ಣ ಕೈಗಾರಿಕೆಗಳೇ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಮೂರು ದಿನಗಳ ಕಾಲ ನಡೆಯಲಿರುವ 6ನೇ ‘ಇಂಡಿಯಾ ಮ್ಯಾನುಫ್ಯಾರಿಂಗ್ ಶೋ–2023’ ಮೇಳವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೋಲಿಕೆ ಮಾಡಿದರೆ ಬೃಹತ್‌ ಕೈಗಾರಿಕೆಗಳಿಗಿಂತ ಸಣ್ಣ ಕೈಗಾರಿಕೆಗಳೇ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ರಫ್ತಿನಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜದಲ್ಲಿ ಸಂಪತ್ತಿನ ಹಂಚಿಕೆಯಾಗಲು ಕೂಡ ಸಣ್ಣ ಕೈಗಾರಿಕೆಗಳು ಅಗತ್ಯ. ಸಣ್ಣ ಕೈಗಾರಿಕೆಗಳನ್ನು ನಿರ್ಲಕ್ಷಿಸಿ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ’ ಎಂದು ವಿಶ್ಲೇಷಿಸಿದರು.

ಸಾವಿರಾರು ಕೋಟಿ ರೂಪಾಯಿ ವಹಿವಾಟು ಹೊಂದಿರುವ ಬೃಹತ್‌ ಕೈಗಾರಿಕೆಗಳು ಒಂದು ಕಾಲದಲ್ಲಿ ಸಣ್ಣ ಕೈಗಾರಿಕೆಗಳೇ ಆಗಿದ್ದವು. ಸಣ್ಣ ಕೈಗಾರಿಕೆಗಳು ಸುಲಭದಲ್ಲಿ ಬದಲಾವಣೆಗೆ, ಹೊಸತನಕ್ಕೆ ತೆರೆದುಕೊಳ್ಳುತ್ತವೆ. ಬೃಹತ್‌ ಕೈಗಾರಿಕೆಗಳಲ್ಲಿ ಬದಲಾವಣೆ ಸುಲಭವಲ್ಲ. ಹೊಸ ಉತ್ಪನ್ನ, ಸೇವೆ ಮತ್ತು ವ್ಯವಹಾರ ಮಾದರಿಗಳಲ್ಲಿ ಹೆಚ್ಚಿನ ಆವಿಷ್ಕಾರಗಳು ಸಣ್ಣ ಕೈಗಾರಿಕೆಗಳಲ್ಲಿಯೇ ಹೆಚ್ಚು ನಡೆಯುತ್ತವೆ ಎಂದು ತಿಳಿಸಿದರು.

ಅತಿ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ಕೇಂದ್ರ ಸರ್ಕಾರ ’ಮುದ್ರಾ’ದಂಥ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರ ಮತ್ತು ಸಮಾಜವು ಕೈಗಾರಿಕೆಗಳಿಂದ ಕೆಲವು ನಿರೀಕ್ಷೆಗಳನ್ನು ಹೊಂದಿದೆ. ಬ್ಯಾಲೆನ್ಸ್‌ ಶೀಟ್‌, ಲಾಭ–ನಷ್ಟದಷ್ಟೇ ಮುಖ್ಯವಾಗಿ ರಾಷ್ಟ್ರದ ಬಗ್ಗೆಯೂ ಚಿಂತನೆ ನಡೆಸಬೇಕು ಎಂದು ತಿಳಿಸಿದರು.

ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು ಎಂದರೆ ಬೃಹತ್ ಕೈಗಾರಿಕೆಗಳನ್ನು ನಿರ್ಲಕ್ಷಿಸುವುದು ಎಂದಲ್ಲ. ಅವು ಕೂಡ ಆರ್ಥಿಕತೆಯ ಬೆಳವಣಿಗೆಗೆ ಬಹಳ ಅಗತ್ಯ ಎಂದು ಪ್ರತಿಪಾದಿಸಿದರು.

‘ಶಸ್ತ್ರಾಸ್ತ್ರಗಳ ಆಮದಿನ ಮೇಲೆ ನಿರ್ಬಂಧಗಳನ್ನು ಹೇರಿದ ಮೊದಲ ಸರ್ಕಾರ ನಮ್ಮದು. ನಾವು ಐದು ಸಕಾರಾತ್ಮಕ ಸ್ವದೇಶೀಕರಣ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದೇವೆ, ಅದರ ಅಡಿಯಲ್ಲಿ 509 ಉಪಕರಣಗಳನ್ನು ಗುರುತಿಸಿ, ತಯಾರಿಸುವ ಕಾರ್ಯ ನಡೆಯುತ್ತಿದೆ. ಹೆಚ್ಚುವರಿಯಾಗಿ ರಕ್ಷಣಾ–ಸಾರ್ವಜನಿಕ ವಲಯದ ಉದ್ಯಮಗಳನ್ನು ಸ್ವದೇಶಿ ತತ್ವದಡಿ ನಡೆಸಲು ನಿರ್ಧರಿಸಲಾಯಿತು. ಅದರಂತೆ 4,666 ವಸ್ತುಗಳನ್ನು ದೇಶದ ಒಳಗೆ ತಯಾರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆ ಮುಖ್ಯಸ್ಥರು, ಐಎಂಎಸ್ ಛೇರ್ಮನ್ ಎಚ್.ವಿ.ಎಸ್. ಕೃಷ್ಣ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ, ಸಂಸದ ತೇಜಸ್ವಿ ಸೂರ್ಯ, ಐಎಂಎಸ್-2023 ಸಲಹಾ ಸಮಿತಿ ಅಧ್ಯಕ್ಷ ಬಾಬಾ ಕಲ್ಯಾಣಿ, ಎಲ್‌ ಆ್ಯಂಡ್‌ ಟಿ ಡಿಫೆನ್ಸ್ ಮುಖ್ಯಸ್ಥ ಅರುಣ್ ಟಿ. ರಾಮಚಂದಾನಿ, ಅಖಿಲ ಭಾರತ ಲಘು ಉದ್ಯೋಗ ಭಾರತಿ ಅಧ್ಯಕ್ಷ ಘನಶ್ಯಾಂ ಓಜ, ಉಪಾಧ್ಯಕ್ಷ ಶ್ರೀಕಂಠದತ್ತ, ಕಾರ್ಯದರ್ಶಿ ನಾರಾಯಣ ಪ್ರಸನ್ನ,ರಾಜ್ಯ ಉಪಾಧ್ಯಕ್ಷ ಅಶ್ವಥ್ ನಾರಾಯಣ, ಜಂಟಿ ಕಾರ್ಯದರ್ಶಿ ರವಿಕುಮಾರ್ ಇದ್ದರು.

ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮೂರು‌ದಿನಗಳ ಕಾಲ ಆಯೋಜನೆಗೊಂಡಿರುವ ಆರನೇ ‘ಇಂಡಿಯಾ ಮ್ಯಾನುಪ್ಯಾಕ್ಚರಿಂಗ್ ಶೋ’ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ವಿವಿಧ ಪ್ರದರ್ಶನಗಳನ್ನು ವೀಕ್ಷಿಸಿದರು. ಐಎಂಎಸ್ ಛೇರ್ಮನ್‌ ಎಚ್‌ವಿಎಸ್‌ ಕೃಷ್ಣ ಇದ್ದರು.
ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮೂರು‌ದಿನಗಳ ಕಾಲ ಆಯೋಜನೆಗೊಂಡಿರುವ ಆರನೇ ‘ಇಂಡಿಯಾ ಮ್ಯಾನುಪ್ಯಾಕ್ಚರಿಂಗ್ ಶೋ’ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ವಿವಿಧ ಪ್ರದರ್ಶನಗಳನ್ನು ವೀಕ್ಷಿಸಿದರು. ಐಎಂಎಸ್ ಛೇರ್ಮನ್‌ ಎಚ್‌ವಿಎಸ್‌ ಕೃಷ್ಣ ಇದ್ದರು.
ಕೈಗಾರಿಕೆ ಮತ್ತು ಕೇಂದ್ರ ಸರ್ಕಾರದ ನಡುವೆ ‘ಲಘು ಉದ್ಯೋಗ ಭಾರತಿ’ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ. ಕೈಗಾರಿಕೋದ್ಯಮಿಗಳು ಒಂದು ಹೆಜ್ಜೆ ಮುಂದಿಟ್ಟರೆ ಸರ್ಕಾರ 10 ಹೆಜ್ಜೆ ಇಟ್ಟು ಸಹಕಾರ ನೀಡಲಿದೆ.
–ರಾಜನಾಥ್‌ ಸಿಂಗ್‌ ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT