ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಭವನದಲ್ಲಿ ‘ಅಮೃತ ಉತ್ಸವ’

‘ಪುಟಾಣಿ ರೈಲಿನ’ ಮೋಜು ಅನುಭವಿಸಿದ ವಿದ್ಯಾರ್ಥಿನಿಯರು
Last Updated 8 ಮಾರ್ಚ್ 2023, 20:42 IST
ಅಕ್ಷರ ಗಾತ್ರ

ಬೆಂಗಳೂರು: ಸ್ಮಾರ್ಟ್‌ ಸಿಟಿ ಮಿಷನ್‌ ಆಯೋಜಿಸಿರುವ ‘ಅಮೃತ ಉತ್ಸವ’ದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಬಿಬಿಎಂಪಿ ಶಾಲೆಯ ವಿದ್ಯಾರ್ಥಿನಿಯರು ಬಾಲಭವನದಲ್ಲಿ ಮರುವಿನ್ಯಾಸಗೊಂಡಿರುವ ‘ಪುಟಾಣಿ ರೈಲಿನ’ ಮೋಜು ಅನುಭವಿಸಿದರು.

ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ‘ಪುಟಾಣಿ ರೈಲು’, ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮತ್ತೆ ಸಿದ್ಧಗೊಂಡಿದೆ. ಇದಿನ್ನೂ ಉದ್ಘಾಟನೆಯಾಗಿಲ್ಲ. ಪ್ರಥಮ ಬಾರಿಗೆ ಮಕ್ಕಳಿಗೆ ಇದರಲ್ಲಿ ಸಂಚರಿಸುವ ಅವಕಾಶವನ್ನು ಬುಧವಾರ ನೀಡಲಾಯಿತು.

‘ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ, ಸ್ಮಾರ್ಟ್‌ ಸಿಟಿ ಮಿಷನ್‌ ಜೂ.30ರವರೆಗೆ ‘ಅಮೃತ ಉತ್ಸವ’ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಹಿಳೆಯರು ಮತ್ತು ಮಕ್ಕಳ ಸಬಲೀಕರಣ ಈ ಉತ್ಸವದ ಉದ್ದೇಶ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಸಿಟಿಯ ಯೋಜನೆಗಳನ್ನು ಬಿಬಿಎಂಪಿಯ ವಿಜಯನಗರ, ಶ್ರೀರಾಮಪುರ, ಮತ್ತಿಕೆರೆ ಬಾಲಕಿಯರ ಶಾಲೆಯ 250 ವಿದ್ಯಾರ್ಥಿಗಳಿಗೆ ‘ಸ್ಮಾರ್ಟ್‌ ಟೂರ್‌’ನಲ್ಲಿ ಪರಿಚಯಿಸಲಾಯಿತು’ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ತಿಳಿಸಿದರು.

ಬಿಬಿಎಂಪಿ ಯಲ್ಲಿರುವ ಇಂಟಿಗ್ರೇಟೆಡ್‌ ಕಮ್ಯಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ (ಐಸಿಸಿಸಿ), ಜವಾಹರಲಾಲ್‌ ನೆಹರೂ ತಾರಾಲಯ, ಕಬ್ಬನ್‌ಪಾರ್ಕ್‌ನಲ್ಲಿರುವ ಆಟದ ಸೌಲಭ್ಯ, ಬಾಲಭವನದಲ್ಲಿ ಪುಟಾಣಿ ರೈಲಿನ ಸವಾರಿ ಮಾಡಿಸಲಾಯಿತು. ಹೊಸದಾಗಿ ನಿರ್ಮಿಸಲಾಗಿರುವ ಬೋಟಿಂಗ್‌ ಸೌಲಭ್ಯವನ್ನೂ ವಿದ್ಯಾರ್ಥಿಗಳು ಸವಿದರು ಎಂದರು.

ಈ ತಿಂಗಳೇ ಪುಟಾಣಿ ರೈಲು ಉದ್ಘಾಟನೆ?
‘ಕಬ್ಬನ್‌ ಪಾರ್ಕ್‌ ಹಾಗೂ ಬಾಲಭವನದಲ್ಲಿ ಬಹುತೇಕ ಎಲ್ಲ ಕಾಮಗಾರಿಗಳು ಮುಗಿದಿವೆ. ಈ ತಿಂಗಳ ಅಂತ್ಯಕ್ಕೆ ಪುಟಾಣಿ ರೈಲು, ಬೋಟಿಂಗ್‌ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರವೇ ಚಾಲನೆ ನೀಡಲಿದ್ದಾರೆ’ ಎಂದು ಸುಶೀಲಮ್ಮ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT