ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಉದ್ಯಾನಕ್ಕೆ ಸ್ಮಾರ್ಟ್‌ ರೂಪ

ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳು ಮೇ ಅಂತ್ಯಕ್ಕೆ ಬಹುತೇಕ ಪೂರ್ಣ
Last Updated 27 ಡಿಸೆಂಬರ್ 2021, 19:44 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ ಉದ್ಯಾನಕ್ಕೆ (ಜಯಚಾಮರಾಜೇಂದ್ರ ಒಡೆಯರ್ ಉದ್ಯಾನ) ‘ಸ್ಮಾರ್ಟ್‌’ ಸ್ಪರ್ಶ ನೀಡಲಾಗುತ್ತಿದೆ. ಇದಕ್ಕಾಗಿ ‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ಉದ್ಯಾನದಲ್ಲಿ ಎರಡು ಹಂತಗಳಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, 2022ರ ಮೇ ಒಳಗೆ ‘ಸ್ಮಾರ್ಟ್‌ ಉದ್ಯಾನ’ವಾಗಿ ಬದಲಾಗಲಿದೆ.

ಉದ್ಯಾನದ ಅಂದವನ್ನು ಮತ್ತಷ್ಟು ಹೆಚ್ಚಿಸುವ ಮೂಲ ಉದ್ದೇಶದೊಂದಿಗೆ ಎರಡು ವರ್ಷಗಳ ಹಿಂದೆ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಆದರೆ, ಲಾಕ್‌ಡೌನ್‌ ಕಾಮಗಾರಿಗಳ ವೇಗ ತಗ್ಗಿಸಿತ್ತು. ಇದರಿಂದ ಗಡುವಿನೊಳಗೆ ಕಾಮಗಾರಿಗಳು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಹಲವು ಕಾಮಗಾರಿಗಳು ಮುಗಿದಿವೆ. ಉಳಿದ ಕಾಮಗಾರಿಗಳ ವೇಗ ಹೆಚ್ಚಿಸಲಾಗಿದೆ.

ಮರಗಳ ಮ್ಯಾಪಿಂಗ್‌: ಉದ್ಯಾನದಲ್ಲಿರುವ ಪ್ರತಿ ಮರದ ಸಂಪೂರ್ಣ ವಿವರಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ‘ಟ್ರೀ ಮ್ಯಾಪಿಂಗ್’ ಯೋಜನೆಯಡಿ ಮರಗಳ ಹೆಸರು, ಅವುಗಳ ಮೂಲ ಮತ್ತು ವೈಶಿಷ್ಟ್ಯ ಸಾರುವ ಫಲಕಗಳನ್ನು ಅಳವಡಿಸಲಾಗಿದೆ.

ಉದ್ಯಾನದಲ್ಲಿ ಬಹಳ ವರ್ಷಗಳಷ್ಟು ಹಳೆಯದಾದ ಸಾವಿರಾರು ಮರಗಳಿದ್ದು, ಪ್ರತಿ ಮರವೂ ಭಿನ್ನವಾದ ಗುಣ ಲಕ್ಷಣಗಳನ್ನು ಒಳಗೊಂಡಿದೆ. ಹಲವು ಅಪರೂಪದ ಹಾಗೂ ಪಾರಂಪರಿಕ ಮರಗಳೂ ಉದ್ಯಾನದಲ್ಲಿದ್ದು, ಅವುಗಳ ಸಂಪೂರ್ಣ ವಿವರವುಳ್ಳ ಫಲಕ ಅಳವಡಿಸುವ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಈಗ ಉದ್ಯಾನಕ್ಕೆ ಬರುವವರುಪ್ರತಿ ಮರದ ಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರಜ್ಞರು ಪ್ರತಿ ಮರದ ಹೆಸರು, ವಯಸ್ಸು, ಅದರ ಗುಣ, ಮೂಲ, ಉಪಯೋಗ ಹಾಗೂ ವಿಶೇಷತೆಗಳನ್ನು ಸೂಚಿಸಿದ್ದರು.ಮರದ ಬೆಳವಣಿಗೆಗೆ ಅಡ್ಡಿಯಾಗದಂತೆ‘ಸ್ಪ್ರಿಂಗ್’ ಮಾದರಿಯ ವಸ್ತುಗಳನ್ನು ಬಳಸಿಫಲಕಗಳನ್ನು ಅಳವಡಿಸಲಾಗಿದೆ. ಸಸ್ಯಗಳ ಬಗ್ಗೆ ಆಸಕ್ತಿ ಉಳ್ಳವರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಿಪಿಎಸ್ ಮೂಲಕವೂ ಆ ಮರದ ಮಾಹಿತಿಯನ್ನು ಡಿಜಿಟಲ್ ರೂಪದಲ್ಲೂ ನೋಡಬಹುದು.

ಕಮಲದ ಕೊಳ: ಇಲ್ಲಿರುವ ಕಮಲದ ಕೊಳವುಉದ್ಯಾನದ ಪ್ರಮುಖ ಆಕರ್ಷಣೆ.250ಕ್ಕೂ ಬಗೆಯ ಪಕ್ಷಿಗಳ ಆವಾಸ ಸ್ಥಾನವೂ ಇದಾಗಿತ್ತು. ಆದರೆ, 11 ವರ್ಷಗಳಿಂದಹೂಳು ತುಂಬಿಕೊಂಡು ಹದಗೆಟ್ಟ ಸ್ಥಿತಿಯಲ್ಲಿತ್ತು. ಕೊಳದ ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಸ್ಮಾರ್ಟ್‌ಸಿಟಿ ಯೋಜನೆಯಮೊದಲ ಹಂತದಲ್ಲೇ ಆದ್ಯತೆ ನೀಡಲಾಗಿತ್ತು.

‘ಎರಡು ಸಲ ಕೊಳ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರೂ ಮಳೆ ನೀರು ತುಂಬಿಕೊಂಡು, ಕಾಮಗಾರಿಗೆ ತೊಡಕಾಗಿತ್ತು.ಸದ್ಯ ಕೊಳದಲ್ಲಿ ಸಂಗ್ರಹವಾಗಿದ್ದ ಹೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೊಳಕ್ಕೆ ಬಿದಿರು ಸಸಿಗಳ ನಡುವೆ ಮಳೆ ನೀರನ್ನು ನೇರವಾಗಿ ಹರಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಕೊಳಕ್ಕೆ ಸಂಪರ್ಕಿಸುವ ಸಣ್ಣ ಕಾಲುವೆಯೊಂದನ್ನೂ ನಿರ್ಮಿಸಲಾಗುತ್ತಿದೆ. ಇದರಲ್ಲಿ ಹಂತ ಹಂತವಾಗಿ ನೀರು ಹರಿಯಲಿದೆ. ಇದನ್ನು ಮತ್ತಷ್ಟು ಅಂದಗೊಳಿಸಲು ಕಾಲುವೆಗೆ ಅಡ್ಡವಾಗಿ ಒಂದು ಕಿರುಸೇತುವೆ ನಿರ್ಮಾಣಗೊಳ್ಳಲಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಎಚ್.ಟಿ.ಬಾಲಕೃಷ್ಣ ವಿವರಿಸಿದರು.

‘ಸುಮಾರು ₹1.5 ಕೋಟಿ ವೆಚ್ಚದಲ್ಲಿ ಕಮಲದ ಕೊಳದ ಅಭಿವೃದ್ಧಿಯನ್ನು ಕಾಂಕ್ರೀಟ್‌ ಮುಕ್ತವಾಗಿ ನಡೆಸಲು ಉದ್ದೇಶಿಸಲಾಗಿದೆ. ಸಾಧ್ಯವಾದಷ್ಟು ನೈಸರ್ಗಿಕ ರೂಪ‍ದಲ್ಲೇ ಕೊಳದ ನವೀಕರಣ ಮಾಡಲಾಗುವುದು. ಕಾಲುವೆಯ ಬದಿಗಳು ಹಾಗೂ ಕೊಳದ ಖಾಲಿ ಜಾಗಗಳಲ್ಲಿ ಅಲಂಕಾರಿಕ ಕಲ್ಲುಗಳನ್ನು ಜೋಡಿಸಲಾಗುವುದು’ ಎಂದರು.

‘ಕೊಳದ ಸುತ್ತಲೂ ಜನರ ಓಡಾಟಕ್ಕೆ ಪಾದಚಾರಿ ಮಾರ್ಗ ಹಾಗೂ ರಕ್ಷಣಾ ಬೇಲಿ ಸಿದ್ಧವಾಗಲಿದೆ. ಕೊಳದಲ್ಲಿ ವಿವಿಧ ತಳಿಯ ಕಮಲದ ಸಸಿಗಳನ್ನು ಬೆಳೆಸಲಾಗುವುದು. ಕೊಳದ ಮಧ್ಯಭಾಗದಲ್ಲಿ ಎತ್ತರಕ್ಕೆ ನೀರು ಚಿಮ್ಮುವ ಕಾರಂಜಿ, ಆಮ್ಲಜನಕ ಪೂರಣ ಸಾಧನ ಹಾಗೂ ನೀರು ಶುದ್ಧೀಕರಣ ಯಂತ್ರವೂ ಇರಲಿದೆ’ ಎಂದು ಮಾಹಿತಿ ನೀಡಿದರು.

ಪಾದಚಾರಿ ಮಾರ್ಗ ಹಾಗೂ ಜಾಗಿಂಗ್‌ ಟ್ರ್ಯಾಕ್:ಮೊದಲ ಹಂತದಲ್ಲಿ ₹8 ಕೋಟಿ ವೆಚ್ಚದಲ್ಲಿಕೈಗೆತ್ತಿಕೊಂಡಿದ್ದ 8 ಕಿ.ಮೀ ಉದ್ದದಪಾದಚಾರಿ ಮಾರ್ಗಗಳ ನವೀಕರಣ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಬಾಲಭವನ ಮಾರ್ಗ ಹಾಗೂ ಪ್ರೆಸ್‌ಕ್ಲಬ್‌ ಮುಂಭಾಗದ ರಸ್ತೆಗಳಲ್ಲೂ ಹೊಸ ಪಾದಚಾರಿ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದ್ದು, ಮುಂದಿನ ವಾರಕ್ಕೆ ಈ ಮಾರ್ಗಗಳು ಸಿದ್ಧಗೊಳ್ಳಲಿವೆ.

‘ಉದ್ಯಾನದಲ್ಲಿ ಈ ಹಿಂದೆ ನಿರ್ಮಿಸಲಾಗಿದ್ದ ಪಾದಚಾರಿ ಮಾರ್ಗಗಳು ಹಾಳಾಗಿದ್ದವು. ಅದನ್ನು ತೆರವುಗೊಳಿಸಿ, ವಿವಿಧ ವಿನ್ಯಾಸಗಳಲ್ಲಿ ಮಾರ್ಗಗಳ ನವೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು.ಸದ್ಯ ಹಡ್ಸನ್ ವೃತ್ತದಿಂದ ಸೆಂಚುರಿ ಕ್ಲಬ್‌ವರೆಗಿನ ಪಾದಚಾರಿ ಮಾರ್ಗ ಸಿದ್ಧವಾಗಿದೆ. ಉಳಿದ ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳೂ ಶೇ 80ರಷ್ಟು ಪೂರ್ಣಗೊಂಡಿವೆ’ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್ ಮಾಹಿತಿ ನೀಡಿದರು.

‘ಲಾಕ್‌ಡೌನ್‌ನಿಂದ ಕಾಮಗಾರಿಗಳು ನಿಧಾನವಾಗಿ ನಡೆದವು. ಉದ್ಯಾನದಲ್ಲಿ ಈಗ ಹಗಲಿನಲ್ಲಿ ಮಾತ್ರ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ರಜೆಯ ದಿನಗಳಲ್ಲಿ ಉದ್ಯಾನಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಆ ದಿನ ಕಾಮಗಾರಿ ನಡೆಸಲು ಅವಕಾಶವಿಲ್ಲ. ಮೇ ತಿಂಗಳೊಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ’ ಎಂದರು.

ಬಾಲಭವನ ಆವರಣಕ್ಕೆ ಅಂಗವಿಕಲರ ಉದ್ಯಾನ: ‘ಸ್ಮಾರ್ಟ್‌ಸಿಟಿ ಯೋಜನೆಯಡಿ ಕಬ್ಬನ್‌ ಉದ್ಯಾನದಲ್ಲಿ ಅಂಗವಿಕಲರಿಗಾಗಿ ಕಿರು ಉದ್ಯಾನ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅದಕ್ಕೆ ನಡಿಗೆದಾರರು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪಕ್ಕದಲ್ಲೇ ಇರುವ ಬಾಲಭವನ ಆವರಣದೊಳಗೆ ಉದ್ಯಾನ ನಿರ್ಮಿಸಲು ಚಿಂತನೆ ನಡೆಸಲಾಗಿದೆ’ ಎಂದೂ ಚಂದ್ರಶೇಖರ್ ಹೇಳಿದರು.

‘ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಿ’

‘ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕಬ್ಬನ್ ಪಾರ್ಕ್‌ ನಡಿಗೆದಾರರ ಸಂಘವು ಈ ವಿಚಾರದಲ್ಲಿ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದೆ. ಆದರೂ ಪ್ರತಿದಿನ ಸಾವಿರಾರು ವಾಹನಗಳು ಉದ್ಯಾನದೊಳಗಿನ ರಸ್ತೆಗಳಲ್ಲಿ ಸಂಚರಿಸಿ, ಮಾಲಿನ್ಯ ಉಂಟು ಮಾಡುತ್ತಿವೆ’ ಎಂದು ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ದೂರಿದರು.

‘ಕಬ್ಬನ್‌ ಉದ್ಯಾನದಲ್ಲಿ ಸೆಂಚುರಿ ಕ್ಲಬ್‌, ಟೆನ್ನಿಸ್‌ ಕ್ಲಬ್‌ ಹಾಗೂ ಸಚಿವಾಲಯ ಕ್ಲಬ್‌ಗಳಿಗೆ ಅವಕಾಶ ನೀಡಬಾರದು. ಇವು ಉದ್ಯಾನಕ್ಕೆ ಮಾರಕ. ರಜೆ ದಿನಗಳಲ್ಲಿ ಮಾತ್ರ ವಾಹನ ನಿರ್ಬಂಧಿಸಿದರೆ ಸಾಲದು. ಲಾಲ್‌ಬಾಗ್‌ ಮಾದರಿಯಲ್ಲಿ ಕಬ್ಬನ್‌ ಉದ್ಯಾನದಲ್ಲೂ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.


ತಿಂಗಳಿಗೆ 2 ಟನ್ ಗೊಬ್ಬರ

‘ಕಬ್ಬನ್‌ ಉದ್ಯಾನದಲ್ಲಿ ಪ್ರತಿ ವಾರ 3 ಟನ್‌ಗಳಷ್ಟು ಉದುರಿದ ಎಲೆಗಳು ಸಂಗ್ರಹವಾಗುತ್ತವೆ. ಈ ಎಲೆಗಳಿಂದ ಗೊಬ್ಬರ ತಯಾರಿಸುವ ಘಟಕ ಉದ್ಯಾನದಲ್ಲೇ ಇದೆ. ಮೂರು ತಿಂಗಳಿಗೆ 6 ಟನ್‌ಗಳಷ್ಟು ಗೊಬ್ಬರ ಈ ಎಲೆಗಳಿಂದ ಸಿಗುತ್ತಿದೆ. ಅದನ್ನು ಉದ್ಯಾನದಲ್ಲಿರುವ ಗಿಡ–ಮರಗಳಿಗೆ ಮರುಬಳಕೆ ಮಾಡಲಾಗುತ್ತಿದೆ. ಹೆಚ್ಚುವರಿ ಎಲೆಗಳನ್ನು ಹುಳಿಮಾವು ಬಳಿ ಇರುವ ಜೈವಿಕ ಕೇಂದ್ರಕ್ಕೆ ಕಳಿಸಿಕೊಡಲಾಗುತ್ತಿದೆ’ ಎಂದು ಎಚ್.ಟಿ.ಬಾಲಕೃಷ್ಣ ತಿಳಿಸಿದರು.

***

‘ಅಸಭ್ಯ ವರ್ತನೆ ತಡೆಯಿರಿ’

ಉದ್ಯಾನಕ್ಕೆ ಬರುವ ಕೆಲ ವಯಸ್ಕರ ವರ್ತನೆ ಮಿತಿ ಮೀರಿದೆ. ಕೆಲವರು ಮನಬಂದಂತೆ ಅಸಭ್ಯವಾಗಿ ವರ್ತಿಸುತ್ತಾರೆ. ಕೆಲ ಯುವಕ–ಯುವತಿಯರು ಸಾರ್ವಜನಿಕವಾಗಿ ಚುಂಬಿಸಿಕೊಳ್ಳುತ್ತಾರೆ. ಇದರಿಂದ ಉದ್ಯಾನಕ್ಕೆ ಬರುವವರಿಗೆ ಕಿರಿಕಿರಿಯಾಗುತ್ತಿದೆ. ಇವುಗಳನ್ನು ತಡೆಯಲು ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿ ಇರುವುದಿಲ್ಲ. ಇರುವ ಸಿಬ್ಬಂದಿ ಸುಮ್ಮನೆ ಓಡಾಡುತ್ತಿರುತ್ತಾರೆ. ಉದ್ಯಾನದಲ್ಲಿ ಇಂತಹ ಅಸಭ್ಯ ವರ್ತನೆಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು.

ನರಸಿಂಹ ರಾಜ್, ಖಾಸಗಿ ಕಂಪನಿ ಉದ್ಯೋಗಿ

***

‘ಪಾರ್ಕಿಂಗ್‌ ಮಿತಿ ಮೀರಿದೆ’

ಉದ್ಯಾನದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ ಮಿತಿ ಮೀರಿದೆ. ಹೈಕೋರ್ಟ್‌ ಕಡೆಯಿಂದ ಉದ್ಯಾನ ಪ್ರವೇಶಿಸುವ ಮಾರ್ಗದಲ್ಲಿ ಎರಡೂ ಬದಿ ಕಾರುಗಳನ್ನು ನಿಲ್ಲಿಸಿರುತ್ತಾರೆ. ಇದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ದಟ್ಟಣೆ ಉಂಟಾಗುತ್ತದೆ. ಈ ರಸ್ತೆಯಲ್ಲಿ ಸಂಚಾರ ಪೊಲೀಸರ ಟೋಯಿಂಗ್ ವಾಹನ ಸಂಚರಿಸುತ್ತಲೇ ಇರುತ್ತದೆ. ಆದರೆ, ಅಲ್ಲಿ ವಾಹನ ನಿಲ್ಲಿಸುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಉದ್ಯಾನದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ನೀಡಲೇಬಾರದು.

ಮಂಜುನಾಥ್, ಬೆಂಗಳೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT