ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಅನುಭವಿಸಿದ ನೋವುಗಳು ಇಂದಿಗೂ ಕಾಡುತ್ತಿವೆ: ಸೇತುರಾಮ್‌

‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ನಟ ಎಸ್‌.ಎನ್‌.ಸೇತುರಾಮ್‌
Last Updated 18 ಡಿಸೆಂಬರ್ 2021, 21:11 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮದು ಕೂಡು ಕುಟುಂಬ. ಮನೆಯ ಕೊನೆಯ ಸೊಸೆಯಾಗಿದ್ದ ಅಮ್ಮ ಸಾಕಷ್ಟು ಯಾತನೆ ಅನುಭವಿಸುತ್ತಿದ್ದಳು. ಆಕೆ ಪಡುತ್ತಿದ್ದ ಕಷ್ಟ, ಅನುಭವಿಸುತ್ತಿದ್ದ ನೋವುಗಳು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅವು ನನ್ನನ್ನು ಸದಾ ಕಾಡುತ್ತಿರುತ್ತವೆ’...

ರಂಗಕರ್ಮಿ, ಕಿರುತೆರೆ ನಟ ಎಸ್‌.ಎನ್‌.ಸೇತುರಾಮ್‌ ಅವರ ನುಡಿಗಳಿವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿದ್ದ ಅವರು ಶನಿವಾರ ಹಲವು ನೆನಪುಗಳನ್ನು ಬಿಚ್ಚಿಟ್ಟರು.

‘ಅಮ್ಮ ಮದುವೆಯಾದಾಗ ಆಕೆಗೆ 16 ವರ್ಷ ವಯಸ್ಸು. ಮನೆಯ ಕೊನೆಯ ಸೊಸೆಯಾಗಿದ್ದ ಆಕೆಯೊಂದಿಗೆ ನನ್ನ ನಾಲ್ವರು ದೊಡ್ಡಮ್ಮಂದಿರೂ ಅತ್ತೆಯರಂತೆಯೇ ನಡೆದುಕೊಳ್ಳುತ್ತಿದ್ದರು. ನಾನು ಜನಿಸಿದಾಗ ಆಕೆಗೆ 18 ವರ್ಷವೂ ಆಗಿರಲಿಲ್ಲ ಎನಿಸುತ್ತದೆ. ಮನೆಯ ಅಷ್ಟೂ ಮಂದಿಗೂ ಅಡುಗೆ ಮಾಡುವ ಹೊಣೆ ಹೊತ್ತಿದ್ದ ಆಕೆ, ಎಲ್ಲರ ಊಟ ಮುಗಿದ ಬಳಿಕವೇಊಟಕ್ಕೆ ಕೂರುತ್ತಿದ್ದಳು. ಪಾತ್ರೆ ತೊಳೆಯುವ ಕೆಲಸವೂ ಆಕೆಯದ್ದೆ. ಮರುದಿನ ಮುಂಜಾನೆ ಆಕೆಯೇ ಎಲ್ಲರಿಗಿಂತಲೂ ಮುಂಚೆ ಎದ್ದು ಒಲೆ ಹಚ್ಚಬೇಕಿತ್ತು. ಆಕೆಯ ಮೊಗದಲ್ಲಿ ಮೂಡಿರುತ್ತಿದ್ದ ನಿರ್ಲಿಪ್ತ ಭಾವ ನನ್ನ ಮನಸ್ಸಿನಲ್ಲಿ ಢಾಳಾಗಿ ಕೂತುಬಿಟ್ಟಿದೆ’ ಎಂದು ಭಾವುಕರಾದರು.

‘ತಿಂಗಳಿಗೊಮ್ಮೆ ಋತು ಚಕ್ರವಾದಾಗ ಆಕೆ, ಮೂರು ದಿನ ಹಿತ್ತಲಿನಲ್ಲೇ ವಾಸಿಸಬೇಕಿತ್ತು. ಪಾತ್ರೆಯಲ್ಲಿ ತಳ ಹಿಡಿದಿರುವ ಅನ್ನವನ್ನು ಆಕೆ ಸೇವಿಸುತ್ತಿದ್ದುದ್ದನ್ನು ಮರೆಯುವುದಕ್ಕೆ ಆಗುವುದೇ ಇಲ್ಲ’ ಎಂದರು.

‘ನನ್ನಮ್ಮ ಅನುಭವಿಸಿದ ನೋವುಗಳನ್ನು ಜಗದ ಯಾವ ಹೆಣ್ಣು ಮಕ್ಕಳೂ ಅನುಭವಿಸುವುದು ಬೇಡ. ಹೆಣ್ಣು ಮಕ್ಕಳ ವಿವಾಹದ ವಯಸ್ಸನ್ನು 21ಕ್ಕೆ ಹೆಚ್ಚಿಸಿರುವುದು ವೈಯಕ್ತಿಕವಾಗಿ ನನಗೆ ತುಂಬಾ ಖುಷಿ ನೀಡಿದೆ’ ಎಂದು ಹೇಳಿದರು.

‘ಹಣವಿಲ್ಲದೆ ಬದುಕುವುದು ಅಸಾಧ್ಯ. ಆದರೆ ಹಣವೇ ಎಲ್ಲವೂ ಅಲ್ಲ.ರಂಗಭೂಮಿಗೆ ಹೋದರೆ ಹಾಳಾಗುತ್ತಾರೆ ಎಂದು ಬಹಳಷ್ಟು ಮಂದಿ ಹೇಳುತ್ತಾರೆ. ಆದು ಸುಳ್ಳು. ರಂಗಭೂಮಿಯನ್ನು ಗಂಭೀರವಾಗಿ ಪರಿಗಣಿಸಿದವರೇ ಪರಿಪೂರ್ಣ ಮನುಷ್ಯರಾಗುತ್ತಾರೆ. ಇನ್ನೆರಡು ಕಥಾ ಸಂಕಲನ ಹೊರತರಬೇಕು. 75ನೇ ವಯಸ್ಸಿನವರೆಗೂ ನಾಟಕಗಳಲ್ಲಿ ಅಭಿನಯಿಸಬೇಕೆಂಬ ಆಸೆ ಇದೆ. ಏನಾಗಲಿದೆಯೋ ನೋಡೋಣ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT