ಭಾನುವಾರ, ಜನವರಿ 17, 2021
17 °C
ಗ್ರಾಸ್ ಮೀಟರಿಂಗ್ ವ್ಯವಸ್ಥೆಯಿಂದ ಸೌರಚಾವಣಿ ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ನಷ್ಟ

‘ನೆಟ್ ಮೀಟರಿಂಗ್’ ವ್ಯವಸ್ಥೆ ಮುಂದುವರಿಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 10 ಕಿಲೊವಾಟ್‌ ವಿದ್ಯುತ್‌ಗಿಂತ ಹೆಚ್ಚು ಉತ್ಪಾದಿಸುವ ಸೌರಚಾವಣಿ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ನೆಟ್‌ ಮೀಟರಿಂಗ್ ಸೌಲಭ್ಯ ಹಿಂತೆಗೆದುಕೊಂಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಕರ ಸಂಘವು ವಿರೋಧಿಸಿದೆ.

ಈ ಕುರಿತು ಡಿ.31ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

‘ಸರ್ಕಾರದ ಈ ಕ್ರಮದಿಂದ ಸೌರವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಮೊದಲು ನಾವು ಉತ್ಪಾದಿಸಿದ ವಿದ್ಯುತ್‌ ಅನ್ನು ನಾವು ಬಳಸಿದರೆ ಅದರ ಮೇಲೆ ಯಾವುದೇ ಹೊರೆ ಇರಲಿಲ್ಲ. ಈ ನೆಟ್‌ ಮೀಟರಿಂಗ್ ವ್ಯವಸ್ಥೆ ಬದಲು, ಗ್ರಾಸ್‌ ಮೀಟರಿಂಗ್ ವ್ಯವಸ್ಥೆಯನ್ನು ಸರ್ಕಾರ ತಂದಿದೆ. ಅಂದರೆ, ನಾವು ಉತ್ಪಾದಿಸಿದ ಎಲ್ಲ ವಿದ್ಯುತ್‌ ಅನ್ನು ಸರ್ಕಾರಕ್ಕೆ ಯುನಿಟ್‌ಗೆ ₹3ರಂತೆ ಮಾರಾಟ ಮಾಡಬೇಕು. ಅದೇ ವಿದ್ಯುತ್‌ ಅನ್ನು ನಾವು ಖರೀದಿಸಿದರೆ ಯುನಿಟ್‌ಗೆ ಅಂದಾಜು ₹7 ನೀಡಬೇಕು. ಈ ವ್ಯವಸ್ಥೆ ಬಂದರೆ, ಸೌರವಿದ್ಯುತ್ ಉತ್ಪಾದನೆಯನ್ನು ಉದ್ಯಮವಾಗಿ ತೆಗೆದುಕೊಳ್ಳಲು ಯಾರೂ ಮುಂದೆ ಬರುವುದಿಲ್ಲ’ ಎಂದು ಸಂಘದ ಅಧ್ಯಕ್ಷ ರಮೇಶ್‌ ಶಿವಣ್ಣ ಹೇಳಿದರು.

‘ನಾವೇ ಉತ್ಪಾದಿಸಿದ ವಿದ್ಯುತ್‌ ಅನ್ನು ನಮ್ಮ ಬಳಕೆಗೆ ಬಿಡಬೇಕು. ಸರ್ಕಾರ ಅಥವಾ ಬೆಸ್ಕಾಂಗೆ ಮಾರಾಟ ಮಾಡುವ ಹೆಚ್ಚುವರಿ ವಿದ್ಯುತ್‌ಗೆ ಮಾತ್ರ ಸರ್ಕಾರ ದರ ನಿಗದಿ ಮಾಡಬೇಕು. ಇಲ್ಲದಿದ್ದರೆ, ಸೌರವಿದ್ಯುತ್‌ ಉತ್ಪಾದನೆ ಉದ್ಯಮವೇ ನೆಲಕಚ್ಚಲಿದೆ’ ಎಂದು ಅವರು ಹೇಳಿದರು.

‘ಸೌರವಿದ್ಯುತ್ ಉತ್ಪಾದನೆಯ ಪ್ರಮಾಣದ ಬಗ್ಗೆ ಸರ್ಕಾರಕ್ಕೆ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಈ ಕಾರಣದಿಂದಲೂ ನೆಟ್‌ ಮೀಟರಿಂಗ್ ಬದಲು, ಗ್ರಾಸ್‌ ಮೀಟರಿಂಗ್ ವ್ಯವಸ್ಥೆಗೆ ಅವರು ಮುಂದಾಗಿರಬಹುದು’ ಎಂದು ಅವರು ಹೇಳಿದರು.

‘ಸೌರವಿದ್ಯುತ್ ಉತ್ಪಾದಕರಿಗೆ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಸೌಲಭ್ಯಗಳು ಇವೆ. ಆದರೆ, ಸರ್ಕಾರದ ಇಂತಹ ಕ್ರಮಗಳಿಂದ ಈ ಉದ್ಯಮಕ್ಕೆ ಕಾಲಿಡಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಬರಬಹುದು’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು