ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಹಾದಿಯಲ್ಲಿ ಹುತಾತ್ಮನ ‘ಯಾತ್ರೆ’

* ಉಗ್ರರಿಗೆ ಬಲಿಯಾದ ಯೋಧನ ಮೇಲೆ ಪ್ರೀತಿಯ ಮಳೆ ಸುರಿದ ನಗರ * ಮೆರವಣಿಗೆಯುದ್ದಕ್ಕೂ ಜನಸಾಗರ * ಗೌರವ ವಂದನೆ ಸಲ್ಲಿಸಿದ ಮಕ್ಕಳು
Last Updated 16 ಫೆಬ್ರುವರಿ 2019, 19:12 IST
ಅಕ್ಷರ ಗಾತ್ರ

ಬೆಂಗಳೂರು: ಉಗ್ರರು ಪುಲ್ವಾಮಾದಲ್ಲಿ ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧ ಎಚ್. ಗುರು ಅವರ ಪಾರ್ಥಿವ ಶರೀರವನ್ನು ಶನಿವಾರ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಕರೆತಂದಾಗ ಇಡೀ ನಗರವೇ ಅವರಿಗಾಗಿ ಕಂಬನಿ ಮಿಡಿಯಿತು. ದಾರಿಯುದ್ದಕ್ಕೂ ಪುಷ್ಪವೃಷ್ಟಿ ಮಾಡಿದ ಜನ, ಹೂವಿನ ಹಾದಿಯನ್ನು ನಿರ್ಮಿಸಿ ಅಗಲಿದ ಯೋಧನ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸಿದರು.

ದೆಹಲಿಯಿಂದ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಎಚ್‌ಎಎಲ್‌ ನಿಲ್ದಾಣಕ್ಕೆ ಕರೆತರಲಾಗುತ್ತದೆ ಎಂಬ ಮಾಹಿತಿ ತಿಳಿದಿದ್ದ ಸಾವಿರಾರು ಜನ ನಿಲ್ದಾಣದ ಬಳಿ ಜಮಾಯಿಸಿದ್ದರು. ವಿಶೇಷ ವಿಮಾನ ಮಧ್ಯಾಹ್ನ ಬಂದು ಇಳಿಯುತ್ತಿದ್ದಂತೆಯೇ ‘ಭಾರತ್ ಮಾತಾಕೀ ಜೈ’ ಹಾಗೂ ‘ವಂದೇ ಮಾತರಂ’ ಘೋಷಣೆಗಳು ಮುಗಿಲು ಮುಟ್ಟಿದವು.

ನಿಲ್ದಾಣದಲ್ಲಿ ಗುರು ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿ, ಶರೀರಕ್ಕೆ ಹೂಗುಚ್ಛ ಅರ್ಪಿಸಿ ಗೌರವ ಅರ್ಪಿಸಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಗೃಹ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

ಪ್ರಮುಖ ರಸ್ತೆಯಲ್ಲಿ ಸಾಗಿದ ವಾಹನ: ಅಂತಿನ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಹೂವಿನಿಂದ ಅಲಂಕರಿಸಿದ್ದ ಸೇನಾ ವಾಹನದಲ್ಲೇ ಮಂದ್ಯಡ ಗುಡಿಗೆರೆ ಗ್ರಾಮಕ್ಕೆ ಕೊಂಡೊಯ್ಯಲಾಯಿತು.

ವಿಮಾನ ನಿಲ್ದಾಣದಿಂದ ವಾಹನ ಹೊರಬರುತ್ತಿದ್ದಂತೆ ಜನ, ವಾಹನದ ಮೇಲೆ ಪುಷ್ಪ ಎರಚಿ ಯೋಧನಿಗೆ ನಮನ ಅರ್ಪಿಸಿದರು.ಹಳೇ ವಿಮಾನ ರಸ್ತೆ, ದೊಮ್ಮಲೂರು, ಟ್ರೀನಿಟಿ ವೃತ್ತ, ಕಬ್ಬನ್ ರಸ್ತೆ, ಕಸ್ತೂರಬಾ ರಸ್ತೆ, ಕಾರ್ಪೋರೇಷನ್ ವೃತ್ತ, ಪುರಭವನ, ಚಾಮರಾಜಪೇಟೆ, ರಾಜರಾಜೇಶ್ವರಿನಗರ, ಕೆಂಗೇರಿ ಮಾರ್ಗವಾಗಿ ಮೈಸೂರು ರಸ್ತೆ ಮೂಲಕ ಸಾಗಿತು. ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಶಾಲಾ ವಿದ್ಯಾರ್ಥಿಗಳು, ರಾಷ್ಟ್ರಧ್ವಜವನ್ನು ಬೀಸುತ್ತಾ ಹುತಾತ್ಮ ಯೋಧನಿಗೆ ವಂದನೆ ಸಲ್ಲಿಸುವ ಮೂಲಕ ಅಭಿಮಾನ ಮೆರೆದರು.ರಸ್ತೆ ಅಕ್ಕ–ಪಕ್ಕದ ಫುಟ್‌ಪಾತ್, ಕಟ್ಟಡಗಳ, ಸ್ಕೈವಾಕ್‌ಗಳ ಮೇಲೆ ನಿಂತುಕೊಂಡಿದ್ದ ಜನ ಪುಷ್ಪನಮನ ಸಲ್ಲಿಸಿದರು.

ಸೇವಾ ವಾಹನದ ವೇಗ ನಿಧಾನವಾಗುತ್ತಿದ್ದಂತೆ ಕೆಲ ಸಾರ್ವಜನಿಕರು, ವಾಹನ ಏರಿ ಯೋಧನ ಪಾರ್ಥಿವ ಶರೀರ ನೋಡಲು ಯತ್ನಿಸಿದರು. ಕೆಲವರು, ರಸ್ತೆಯಲ್ಲಿ ಓಡುತ್ತಲೇ ಹೂವಿನ ಹಾರವನ್ನು ವಾಹನದೊಳಗೆ ಹಾಕಿದರು. ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ, ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಸುಸ್ತಾದರು.

ಸೇವಾ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದ ಪೊಲೀಸರು ಸಹ ಪಾರ್ಥಿವ ಶರೀರ ಹೊತ್ತಿದ್ದ ವಾಹನಕ್ಕೆ ಸೆಲ್ಯೂಟ್‌ ಮಾಡಿದರು.

ಎಚ್‌ಎಎಲ್‌ನಿಂದ ಗುಡಿಗೆರೆಗೆ ಶವವನ್ನು ಕೊಂಡೊಯ್ಯಲು ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಕೆಲವು ಕಾರಣಗಳಿಂದ ಹೆಲಿಕಾಪ್ಟರ್‌ ಲಭ್ಯವಾಗಲಿಲ್ಲ. ನಂತರ ರಸ್ತೆ ಮಾರ್ಗವಾಗಿಯೇ ಶರೀರವನ್ನು ಕೊಂಡೊಯ್ಯಲಾಯಿತು.

ವಹಿವಾಟು ಬಂದ್ಮಾಡಿ ಪ್ರತಿಭಟನೆ

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಗರದ ಚಿಕ್ಕಪೇಟೆ, ಸಿಟಿ ಮಾರುಕಟ್ಟೆ, ಅವೆನ್ಯೂ ರಸ್ತೆ ಹಾಗೂ ಸುತ್ತಮುತ್ತ ಮಾರುಕಟ್ಟೆ ಪ್ರದೇಶಗಳ ವ್ಯಾಪಾರಿಗಳು ಶನಿವಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಮಾರುಕಟ್ಟೆ ಪ್ರದೇಶದ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಮಾಲೀಕರು, ಕೆಲಸಗಾರರು ಹಾಗೂ ಕಾರ್ಮಿಕರು, ಹುತಾತ್ಮ ಯೋಧ ಗುರು ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ನಂತರ, ಚಿಕ್ಕಪೇಟೆ, ಮೈಸೂರು ಬ್ಯಾಂಕ್ ವೃತ್ತದ ಮೂಲಕ ಕಾಟನ್ ಪೇಟೆ ಮುಖ್ಯರಸ್ತೆವರೆಗೆ ಮೆರವಣಿಗೆ ನಡೆಸಿದರು.

ಪಾಕಿಸ್ತಾನ್ ವಿರುದ್ಧ ಘೋಷಣೆ ಕೂಗಿದ ವ್ಯಾಪಾರಿಗಳು, ‘ಉಗ್ರರನ್ನು ಪ್ರಚೋದಿಸಿ ಭಯೋತ್ಪಾದನಾ ಕೃತ್ಯಗಳಿಗೆ ಸಹಕರಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಬಂದ್‌ನಿಂದಾಗಿ ಮಾರುಕಟ್ಟೆ ಪ್ರದೇಶ ಬೀಕೋ ಎನ್ನುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಭದ್ರತೆ ಕೈಗೊಂಡಿದ್ದರು.

19ರಂದು ಕರ್ನಾಟಕ ಬಂದ್‌

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಗುರುವಾರ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಇದೇ 19ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ವಾಟಾಳ್‌ ನಾಗ
ರಾಜ್‌,‘ಭಯೋತ್ಪಾದನೆ ಭಾರತಕ್ಕೆ ಮಾತ್ರವಲ್ಲ, ಇಡೀಮನುಕುಲಕ್ಕೆ ಮಾರಕ. ಇದನ್ನು ಬೇರಿನಿಂದಲೇ ಕಿತ್ತೊಗೆಯಬೇಕು. ಉಗ್ರರ ದಾಳಿ ಪೈಶಾಚಿಕವಾದದ್ದಾಗಿದೆ. ಅದಕ್ಕೆಪ್ರತಿಕಾರ ತೀರಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಿದ್ದೇವೆ’ ಎಂದು ತಿಳಿಸಿದರು.

‘ಅಂದು ಬೆಳಿಗ್ಗೆ ಟೌನ್‌ ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪ್ರತಿಭಟನಾಮೆರವಣಿಗೆ ನಡೆಸಲಾಗುತ್ತದೆ.ಆಸ್ಪತ್ರೆ, ಔಷಧಿ, ಹಾಲು ಮಾರಾಟಕ್ಕೆ ವಿನಾಯಿತಿ ಇರಲಿದ್ದು,ಬಸ್‌, ಸಿನಿಮಾ, ಖಾಸಗಿ ವಾಹನಗಳು ಬಂದ್ ಆಗಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT