ಗುರುವಾರ , ನವೆಂಬರ್ 21, 2019
22 °C

‘ನೀವೇಕೋ ನಮ್ಮ ಕಿವಿ ಮಾತ್ರ ಹಿಂಡುತ್ತೀರಿ’ ದೊರೆಸ್ವಾಮಿಗೆ ಸೋಮಣ್ಣ ಹೇಳಿದ ಮಾತಿದು

Published:
Updated:

ಬೆಂಗಳೂರು: ನಗರ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ನೆರೆ–ಬರ ಸಂತ್ರಸ್ತರ ಅಧಿವೇಶನಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಬಂದ ಸಚಿವ ವಿ. ಸೋಮಣ್ಣ, ‘ನೆರೆ–ಬರದಿಂದ ಹಾನಿಗೀಡಾದ ಸಂತ್ರಸ್ತರಿಗೆ, ಯಾವ ಪ್ರಮಾಣದ ಹಾನಿಗೆ, ಎಷ್ಟು ಪರಿಹಾರ ನೀಡಬೇಕು ಎಂಬ ಬಗ್ಗೆ ಇನ್ನೂ ಎಂಟು–ಹತ್ತು ದಿನದಲ್ಲಿ ನಿರ್ಧರಿಸಲಾಗುವುದು. ಎಲ್ಲರಿಗೂ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಪರಿಹಾರ ನೀಡಲು ದುಡ್ಡು ಎಲ್ಲಿದೆ?’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವೇದಿಕೆಯಲ್ಲಿಯೇ ಸೋಮಣ್ಣನವರನ್ನು ಪ್ರಶ್ನಿಸಿದರು.

ಇದರಿಂದ ಮುಜುಗರಕ್ಕೀಡಾದ ಸೋಮಣ್ಣ, ‘ಕೊಡಗಿನಲ್ಲಿ ಭೂಕುಸಿತದಿಂದ ಸಂತ್ರಸ್ತರಾದವರಿಗೂ ಇನ್ನೂ ಪರಿಹಾರ ಸಿಕ್ಕಿಲ್ಲ. ಆದರೆ, ನೀವು ನಮಗೆ ಮಾತ್ರ ಕಿವಿ ಹಿಂಡುತ್ತೀರಿ. ಇನ್ನೊಬ್ಬರಿಗೆ (ವಿರೋಧ ಪಕ್ಷಗಳಿಗೆ) ಏನೂ ಹೇಳುವುದಿಲ್ಲ. ಅದೇಕೋ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು. 

‘ಯಡಿಯೂರಪ್ಪನವರು ನೆರೆ ಸಂತ್ರಸ್ತರಿಗಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಇಲ್ಲ ಎಂದು ಹೇಳುವುದಿಲ್ಲ. ಆದರೆ, ಅವರ ಕೈಯನ್ನು ಕಟ್ಟಿ ಹಾಕಲಾಗಿದೆ. ಅವರ ಬಳಿ ದುಡ್ಡಿಲ್ಲ. ಅವರನ್ನು ನಾನು ಬೈಯುತ್ತಿಲ್ಲ. ಅವರ ಅಸಹಾಯಕ ಸ್ಥಿತಿಯನ್ನು ಹೇಳುತ್ತಿದ್ದೇನೆ. ರಾಜ್ಯದಲ್ಲಿನ ಕೇಂದ್ರ ಸಚಿವರು ಹೊಣೆಗೇಡಿಗಳಂತೆ ವರ್ತಿಸುತ್ತಿದ್ದಾರೆ. ವಿರೋಧ ಪಕ್ಷಗಳು ಕೂಡ ಅವರ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಕೇಂದ್ರದ ವಿರುದ್ಧ ದೆಹಲಿಯಲ್ಲಿ ವಿರೋಧಪಕ್ಷಗಳು ತೀವ್ರ ಪ್ರತಿಭಟನೆ ನಡೆಸಬೇಕಿತ್ತು’ ಎಂದು ದೊರೆಸ್ವಾಮಿ ಹೇಳಿದರು.

ಇದನ್ನೂ ಓದಿ: ನೆರೆ ಪರಿಹಾರಕ್ಕೆ ವೈಜ್ಞಾನಿಕ ಮಾನದಂಡ ರೂಪಿಸಲು ಸಂತ್ರಸ್ತರ ಆಗ್ರಹ

ಪ್ರತಿಕ್ರಿಯಿಸಿ (+)