ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ತರಬೇತಿ: ಸ್ಪರ್ಶ್ ಆಸ್ಪತ್ರೆಗೆ ನೋಟಿಸ್

Last Updated 26 ಅಕ್ಟೋಬರ್ 2021, 17:05 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ಅನುಮತಿ ಪಡೆಯದೆಯೇ ಭ್ರೂಣದ ಔಷಧ ಶಾಸ್ತ್ರ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ ಯಶವಂತಪುರದ ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ. ಶ್ರೀನಿವಾಸ್ ನೋಟಿಸ್ ನೀಡಿದ್ದಾರೆ.

ಗರ್ಭಧಾರಣ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ (ಪಿಸಿಪಿಎನ್ ಡಿಟಿ) 1994ರ ಅನ್ವಯ ಬೆಂಗಳೂರು ನಗರ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ತಪಾಸಣೆ ನಡೆಸಿದರು.

‘ಭ್ರೂಣದ ಔಷಧ ಶಾಸ್ತ್ರ ವಿಭಾಗದಲ್ಲಿ ತರಬೇತಿ ಒದಗಿಸಲು ಕರ್ನಾಟಕ ವೈದ್ಯಕೀಯ ಪರಿಷತ್ತಿನಡಿಯೂ (ಕೆ.ಎಂ.ಸಿ)ಆಸ್ಪತ್ರೆ ನೋಂದಣಿ ಆಗಿರಲಿಲ್ಲ’ ಎಂದು ಸಮಿತಿಯ ಸದಸ್ಯರು ತಿಳಿಸಿದ್ದಾರೆ.

‘ಆಸ್ಪತ್ರೆಯಲ್ಲಿ ಒಟ್ಟು 11 ಸ್ಕ್ಯಾನಿಂಗ್ ಯಂತ್ರಗಳಿಗೆ ಪರವಾನಗಿ ಪಡೆದು ಬಳಸಲಾಗುತ್ತಿದೆ. ಸ್ಕ್ಯಾನಿಂಗ್ ನಡೆಸುವ ಫಾರಂ ಎಫ್‌ ಅನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಸಲ್ಲಿಸಿ, ಬಳಿಕ ಸ್ಕ್ಯಾನಿಂಗ್ ಮಾಡಬೇಕು. ಆದರೆ, ಇಲ್ಲಿ ಸ್ಕ್ಯಾನಿಂಗ್ ಮಾಡಿದ ನಂತರ ಆನ್‌ಲೈನ್‌ಗೆ ಮಾಹಿತಿ ಅಪ್‌ಲೋಡ್ ಮಾಡುತ್ತಿರುವುದು ಕಂಡುಬಂದಿದೆ’ ಎಂದು ಡಾ.ಜಿ. ಶ್ರೀನಿವಾಸ್ ತಿಳಿಸಿದರು.

‘ಸ್ಕ್ಯಾನಿಂಗ್ ಕೊಠಡಿಯಲ್ಲಿ ಭ್ರೂಣದ ಚಿತ್ರವನ್ನು ದೊಡ್ಡ ಟಿ.ವಿಯಲ್ಲಿ ಬಿತ್ತರಿಸಿ, ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಇದು ಕಾನೂನು ಬಾಹಿರ. ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ, ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ’ ಎಂದು ಹೇಳಿದರು.

ಕೆ.ಆರ್. ಪುರ ಸಾರ್ವಜನಿಕ ಆಸ್ಪತ್ರೆಯ ಡಾ. ಲೀಲಾ, ಡಾ. ವಿಜಯ್ ಸಾರಥಿ, ಡಾ. ಶಿಲ್ಪಾ, ಬೆಂಗಳೂರು ಉತ್ತರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಮೇಶ್ ಮತ್ತಿತರರು ಇದ್ದರು.

‘ಶಿಕ್ಷಣಕ್ಕಾಗಿ ಪರದೆ ಅಳವಡಿಕೆ’
‘ಸ್ನಾತಕೋತ್ತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸ್ಥಳದಲ್ಲಿ ಪರದೆ (ಸ್ಕ್ರೀನ್) ಅಳವಡಿಸಲಾಗಿತ್ತು. ಅಲ್ಲಿ ರೋಗಿಗಳಿಗೆ ಪ್ರವೇಶ ಇರಲಿಲ್ಲ. ದೇಶದ ವಿವಿಧೆಡೆ ಶಿಕ್ಷಣಕ್ಕಾಗಿ ಇದೇ ರೀತಿ ಪರದೆ ಅಳವಡಿಕೆ ಮಾಡಲಾಗುತ್ತದೆ’ ಎಂದು ಆಸ್ಪತ್ರೆಯ ನಿರ್ದೇಶಕ (ಕಾರ್ಯತಂತ್ರ) ಬಿ.ಆರ್. ಗುರುಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT