ಸೋಮವಾರ, ನವೆಂಬರ್ 18, 2019
25 °C

ಪಿ.ಸಿ. ಮೋಹನ್‌ ವಿರುದ್ಧದ ಆರೋಪ: ತನಿಖೆಗೆ ಆದೇಶ

Published:
Updated:

ಬೆಂಗಳೂರು: ‘ತಮ್ಮ ಹೆಸರಿನಲ್ಲಿರುವ 42 ಎಕರೆ 14 ಗುಂಟೆ ಜಮೀನಿನ ಸ್ಥಿರಾಸ್ತಿ ವಿವರವನ್ನು ಚುನಾವಣೆಗೆ ಸ್ಪರ್ಧಿಸುವ ವೇಳೆ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಳ್ಳದೆ ಮುಚ್ಚಿಟ್ಟಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಪಿ.ಸಿ.ಮೋಹನ್‌ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿ’ ಎಂದು ಜನಪ್ರತಿನಿಧಿಗಳ ಕೋರ್ಟ್‌ ಪೊಲೀಸರಿಗೆ ಆದೇಶಿಸಿದೆ.

ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಆನಂದ ಸಲ್ಲಿಸಿರುವ ಖಾಸಗಿ ದೂರನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಶುಕ್ರವಾರ ವಿಚಾರಣೆ ನಡೆಸಿದರು.

‘ಆರೋಪಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಕಲಂ 156 (3)ರ ಅನುಸಾರ ತನಿಖೆ ನಡೆಸಿ’ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು. ಅರ್ಜಿದಾರರ ಪರ ವಕೀಲ ಪ್ರವೀಣ ಕಾಮತ್‌ ವಾದ ಮಂಡಿಸಿದರು.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 42 ಎಕರೆ 14 ಗುಂಟೆ ಜಮೀನನ್ನು ಮೋಹನ್‌ ಅವರು 2012 ಮತ್ತು 2013ರಲ್ಲಿ ಖರೀದಿಸಿದ್ದಾರೆ. ಈ ಸ್ಥಿರಾಸ್ತಿಯ ಮೊತ್ತ ₹ 33 ಕೋಟಿಗೂ ಹೆಚ್ಚಿದೆ. ಈ ಆಸ್ತಿ ವಿವರವನ್ನು 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿಲ್ಲ’ ಎಂಬುದು ಫಿರ್ಯಾದುದಾರರ ಆರೋಪ.

ಪ್ರತಿಕ್ರಿಯಿಸಿ (+)