ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲೂರು: ಅಭಿವೃದ್ಧಿಯ ಆಲಿಂಗಿಸಿದ ‘ನವ್ಯ ಲೋಕ’

Published : 3 ಸೆಪ್ಟೆಂಬರ್ 2024, 3:25 IST
Last Updated : 3 ಸೆಪ್ಟೆಂಬರ್ 2024, 3:25 IST
ಫಾಲೋ ಮಾಡಿ
Comments

ಬೆಂಗಳೂರು: ಅಭಿವೃದ್ಧಿ ಪಥವನ್ನು ಆಲಿಂಗಿಸಿಕೊಂಡರೆ ನಗರದ ಅಂಚಿನಲ್ಲೂ ‘ಹೊಸ ಲೋಕ’ವನ್ನೇ ಸೃಷ್ಟಿಸಿಕೊಳ್ಳಬಹುದು ಎಂಬುದಕ್ಕೆ ಬಾಗಲೂರು ಸ್ಪಷ್ಟ ಉದಾಹರಣೆಯಾಗಿ ಗೋಚರಿಸುತ್ತಿದೆ. ತನ್ನದೇ ಬ್ರ್ಯಾಂಡ್‌ ಸೃಷ್ಟಿಯಲ್ಲೂ ದಾಪುಗಾಲು ಹಾಕಿದೆ. ಬಾಗಲೂರಿನ ಅಭಿವೃದ್ಧಿಯ ವೇಗ ರಾಷ್ಟ್ರಮಟ್ಟದಲ್ಲಿ ಈಗ ಸದ್ದು ಮಾಡುತ್ತಿದೆ.

‘ಐದಾರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹಗಲು ವೇಳೆ ಕೂಡ ಓಡಾಡಲು ಒಂದು ರೀತಿಯಲ್ಲಿ ಭಯವೇ ಆಗುತ್ತಿತ್ತು. ಈಗ 24 ಗಂಟೆಗಳೂ ವಾಹನಗಳದ್ದೇ ಸಂಚಾರ. ಜನರ ಓಟಾಡದ ಜೊತೆಗೆ ವಾಹನ ದಟ್ಟಣೆಯೂ ಉಂಟಾಗುತ್ತಿದೆ. ಇಲ್ಲಿಯ ಅಭಿವೃದ್ಧಿ ಯನ್ನು ನೋಡಿದರೆ, ಹುಟ್ಟಿದಾಗಿನಿಂದ ನಾವಿದ್ದ ಸ್ಥಳವೇ ಇದು ಎಂದು ಪ್ರಶ್ನಿಸಿಕೊಳ್ಳು ವಷ್ಟು ಹೆಮ್ಮೆ, ಸಂತೋಷ ಎರಡೂ ಆಗುತ್ತದೆ’ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬೆಂಗಳೂರು ನಗರ ಜಿಲ್ಲೆಯ ಗಡಿ ಭಾಗದಲ್ಲಿರುವ ಬಾಗಲೂರು ಪ್ರದೇಶ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿಪಡಿಸಿರುವ ಹಾರ್ಡ್‌ವೇರ್‌– ಸಾಫ್ಟ್‌ವೇರ್‌ ಪಾರ್ಕ್‌ಗೆ ಹೊಂದಿಕೊಂಡಂತಿದೆ. ಹೆಣ್ಣೂರು ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರ್ಮಿಸಲಾಗುತ್ತಿರುವ ‘ಹೊಸ ವಿಮಾನ ನಿಲ್ದಾಣ’ ರಸ್ತೆಯೂ ಬಾಗಲೂರು ಮೂಲಕವೇ ಹಾದುಹೋಗುತ್ತದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹೊರ ಭಾಗದಲ್ಲಿರುವ ಬಾಗಲೂರು ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಇಲ್ಲ ಎಂಬುದೇ ಇಲ್ಲ. ಅಭಿವೃದ್ಧಿ ಚಟುವಟಿಕೆಗಳು ಬಾಗಲೂರು ಮೂಲ ಗ್ರಾಮದ ಗಡಿಯನ್ನು ದಾಟಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಗರಿಗೆದರಿವೆ.

ಬಾಗಲೂರು ಗ್ರಾಮದಲ್ಲಿ ‘ಹೊಸ ವಿಮಾನ ನಿಲ್ದಾಣ ರಸ್ತೆ’ಯ ಅಭಿವೃದ್ಧಿ ಕಾಮಗಾರಿ ಮತ್ತೆ ಆರಂಭವಾಗಿರುವುದು ಇಡೀ ಪ್ರದೇಶದ ಚಿತ್ರಣವನ್ನೇ ಬದಲಿಸಿದೆ. ಹತ್ತು ವರ್ಷಗಳಿಂದ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು 50–60 ಅಡಿ ಅಗಲದ ರಸ್ತೆಯಿದ್ದ ಜಾಗದಲ್ಲಿ ಇದೀಗ 150 ಅಡಿಯ ವಿಶಾಲ ರಸ್ತೆ ನಿರ್ಮಾಣ ವಾಗುತ್ತಿದೆ. ಈ ರಸ್ತೆಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಅಭಿವೃದ್ಧಿ ಹಾಗೂ ನಿರ್ಮಾಣ ಚಟುವಟಿಕೆಗಳು ಚುರುಕುಗೊಂಡಿವೆ. ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಖಾಸಗಿ ವಿಶ್ವವಿದ್ಯಾಲಯಗಳು ತಮ್ಮ ಪ್ರಮುಖ ಕಟ್ಟಡ ಹಾಗೂ ಕಚೇರಿಗಳನ್ನೂ ಈ ಭಾಗದಲ್ಲಿ ನಿರ್ಮಿಸಿವೆ.

ನಗರದ ಕೇಂದ್ರ ಭಾಗದಲ್ಲಿರುವ ಪ್ರತಿಷ್ಠಿತ ಖಾಸಗಿ ನಿರ್ಮಾಣ ಸಂಸ್ಥೆಗಳಲ್ಲದೆ ಅಂತರ ರಾಷ್ಟ್ರೀಯ ಖ್ಯಾತಿಯ ರಿಯಲ್‌ ಎಸ್ಟೇಟ್‌ ಕಂಪನಿಗಳೂ ಈ ಭಾಗದಲ್ಲಿ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳನ್ನು ಸಾವಿರಾರು ಸಂಖ್ಯೆಯಲ್ಲಿ ನಿರ್ಮಿಸುತ್ತಿವೆ. 2ಬಿಎಚ್‌ಕೆ ಫ್ಲ್ಯಾಟ್‌ಗೆ ಕನಿಷ್ಠ ₹1 ಕೋಟಿ ದರವಿದೆ. ಕೆಲವು ವರ್ಷಗಳ ಹಿಂದೆ ಫ್ಲ್ಯಾಟ್‌ಗಳನ್ನು ವೀಕ್ಷಿಸಲು ಜನರಿಗಾಗಿ ಸಂಸ್ಥೆಗಳು ಕಾಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಬೃಹತ್‌ ಅಪಾರ್ಟ್‌ಮೆಂಟ್‌ಗಳ ವೀಕ್ಷಣೆಗಾಗಿ ನಾಗರಿಕರು ಕಾಯಬೇಕಾದ ಸ್ಥಿತಿ ಇದೆ. ಅಷ್ಟೊಂದು ಸಂಖ್ಯೆಯಲ್ಲಿ ಜನರು ಖರೀದಿಯ ಹುಮ್ಮಸ್ಸು ಹೊಂದಿದ್ದಾರೆ. ವಾರಾಂತ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜನರಿರುತ್ತಾರೆ ಎಂದು ಬಾಗಲೂರು ನಿವಾಸಿ ರಾಮಚಂದ್ರ ಮಾಹಿತಿ ನೀಡಿದರು.

ಬಾಡಿಗೆಯ ಫಲಕ: ಬಾಗಲೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಂಪೌಂಡ್‌ ಹಾಕಿರುವ ಸಾಕಷ್ಟು ಸ್ಥಳಗಳು ಕಾಣಸಿಗುತ್ತವೆ. ಇಂತಹ ಬಹುತೇಕ ಸ್ಥಳಗಳಲ್ಲಿ ‘ಈ ಪ್ರದೇಶ ಬಾಡಿಗೆಗೆ ಲಭ್ಯವಿದೆ’ ಎಂಬ ಫಲಕವನ್ನೂ ಕಾಣಬಹುದಾಗಿದೆ. ಮೂಲ ಮಾಲೀಕರು ಅಥವಾ ಒಂದಷ್ಟು ವರ್ಷಗಳ ಹಿಂದೆ ಖರೀದಿ ಮಾಡಿರುವವರು ಈಗ ಮಾರಾಟ ಮಾಡಲು ಬಯಸುತ್ತಿಲ್ಲ. ಬದಲಿಗೆ ಅದರಿಂದ ಒಂದಷ್ಟು ಹಣ ಗಳಿಸಿಕೊಂಡು, ಮುಂದೆ ಹಲವು ಪಟ್ಟು ಲಾಭ ಮಾಡಿಕೊಳ್ಳಲು ಇಚ್ಛಿಸಿದ್ದಾರೆ ಎಂಬ ವಿಷಯ ಅಲ್ಲಿನ ಕೆಲವರೊಂದಿಗೆ ಮಾತುಕತೆಯಿಂದ ತಿಳಿದುಬಂದಿತು.

‘ವಿಮಾನ ನಿಲ್ದಾಣ ರಸ್ತೆಯಿಂದ ಅಭಿವೃದ್ಧಿ ಚುರುಕು’

‘2010ರಲ್ಲಿ ಕೆಐಎಡಿಬಿಯವರು ಕೈಗಾರಿಕಾ ಪ್ರದೇಶಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಬಾಗಲೂರು– ಬಂಡಿಕೊಡಿಗೇಹಳ್ಳಿ ಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಆರಂಭವಾದವು. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಗಲೂರು ಮಾರ್ಗವಾಗಿ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾದ ಸಮಯದಿಂದ ಈ ಭಾಗದಲ್ಲಿ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಹೆಚ್ಚಾದವು. ಕಳೆದ ನಾಲ್ಕೈದು ವರ್ಷದಿಂದ ಈ ಪ್ರದೇಶದಲ್ಲಿ ಬೃಹತ್‌ ಕಟ್ಟಡಗಳು ಬಂದವು. ಬೃಹತ್‌ ವಸತಿ ಸಮುಚ್ಛಯಗಳೂ ನಿರ್ಮಾಣವಾಗಿವೆ, ಇನ್ನೂ ಹಲವು ನಿರ್ಮಾಣ ಹಂತದಲ್ಲಿವೆ. ಹಳ್ಳಿಯಂತಿದ್ದ ಬಾಗಲೂರು, ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಯಾವ ಪ್ರದೇಶಕ್ಕೂ ಕಡಿಮೆ ಇಲ್ಲದಂತೆ ಅಭಿವೃದ್ಧಿ ಕಾಣುತ್ತಿದೆ’ ಎಂದು ಸ್ಥಳೀಯ ನಿವಾಸಿ ಬಿ.ಎನ್‌. ಚಂದ್ರಶೇಖರ್‌ ಅವರು ಅಭಿಪ್ರಾಯಪಟ್ಟರು.

ವಾಣಿಜ್ಯ -, ವಸತಿ ಬಾಡಿಗೆ ಹೆಚ್ಚಳ

‘ಬಾಗಲೂರು ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ಮನೆಗಳ ಬಾಡಿಗೆ ಹೆಚ್ಚಾಗುತ್ತಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಗಳು ಹೆಚ್ಚಾಗುತ್ತಿರುವುದರಿಂದ ಜನವಸತಿಯೂ ವೃದ್ಧಿಯಾಗುತ್ತಿದೆ. ಹಲವು ರೀತಿಯ ಅಭಿವೃದ್ಧಿಗಳನ್ನು ಕಾಣುತ್ತಿದ್ದರೂ, ಕೆಲವು ಮೂಲಸೌಕರ್ಯದ ಕೊರತೆ ಇದ್ದೇ ಇದೆ. ಗ್ರಾಮ ಪಂಚಾಯಿತಿಯವರು ಮೂಲಸೌಕರ್ಯ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿ ಇಲ್ಲ’ ಎಂದು ಮೌಸಿನಾ ಹೇಳಿದರು.

ಬಾಗಲೂರು ಪ್ರದೇಶಾಭಿವೃದ್ಧಿ ಉತ್ತೇಜನಕ್ಕೆ ಅಂಶಗಳು

  • ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳಿಂದಲೂ ಬಾಗಲೂರಿಗೆ ಹಾದಿ

  • ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 12 ಕಿ.ಮೀ. ದೂರ

  • ಕೆಐಎಡಿಬಿಯ ಕೈಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶ

  • ಮೂಲಗ್ರಾಮದ ಅಭಿವೃದ್ಧಿ ಜೊತೆಗೆ ಪ್ರಮುಖ ರಸ್ತೆಗಳ ಅಭಿವೃದ್ಧಿ

  • ಹೊಸ ವಿಮಾನ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆ

  • ವಸತಿಗಾಗಿ ಕೈಗಾರಿಕೋದ್ಯಮಿಗಳು, ಉದ್ಯೋಗಿಗಳಿಂದ ಹೆಚ್ಚಾದ ಬೇಡಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT