ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇ 27ರಿಂದ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು

Published 25 ಮೇ 2024, 14:25 IST
Last Updated 25 ಮೇ 2024, 14:25 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಗರ ನಡುವೆ ವಾರಕ್ಕೆ ಮೂರು ಬಾರಿಯಂತೆ (ಟ್ರೈ-ವೀಕ್ಲಿ) ಒಂದು ತಿಂಗಳು ಬೇಸಿಗೆ ವಿಶೇಷ ರೈಲು ಸಂಚರಿಸಲಿದೆ. ಮೇ 27ಕ್ಕೆ ಮೊದಲ ರೈಲು ಹೊರಡಲಿದೆ.

ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (ಎಸ್‌ಎಂವಿಟಿ) ಪ್ರತಿ ಸೋಮವಾರ, ಬುಧವಾರ ಮತ್ತು ಗುರುವಾರ ರಾತ್ರಿ 11.50ಕ್ಕೆ ವಿಶೇಷ ರೈಲು ಹೊರಡಲಿದ್ದು, ಸತ್ಯಸಾಯಿ ಪ್ರಶಾಂತಿ ನಿಲಯಂ ಮಾರ್ಗದ ಮೂಲಕ ಮರುದಿನ ಮಧ್ಯಾಹ್ನ 12.30ಕ್ಕೆ ಕಲಬುರಗಿ ನಿಲ್ದಾಣವನ್ನು ತಲುಪಲಿದೆ.

ಕಲಬುರಗಿ ನಿಲ್ದಾಣದಿಂದ ಪ್ರತಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಸಂಜೆ 4.50ಕ್ಕೆ ಹೊರಟು ನಾಗಸಮುದ್ರ ಮಾರ್ಗದ ಮೂಲಕ ಮರುದಿನ ಬೆಳಿಗ್ಗೆ 4.45ಕ್ಕೆ ಬೆಂಗಳೂರು ಎಸ್‌ಎಂವಿಟಿಗೆ ತಲುಪಲಿದೆ.

ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ಈ ರೈಲುಗಳು ನಿಲುಗಡೆ ಹೊಂದಿವೆ.

ಮುಂಗಡ ಕಾಯ್ದಿರಿಸಲು, ವೇಳಾಪಟ್ಟಿ ಇನ್ನಿತರ ಮಾಹಿತಿಗಾಗಿ ಪ್ರಯಾಣಿಕರು www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಥವಾ ಸಹಾಯವಾಣಿ  (139) ಸಂಪರ್ಕಿಸಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT