ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ: ಶಿಕ್ಷಕರಿಗೆ ನೋಟಿಸ್‌

ಶಾಲೆಗಳ ಮುಖ್ಯ ಶಿಕ್ಷಕರಿಂದ ವಿವರಣೆ ಕೇಳಿದ ಬಿಬಿಎಂಪಿ
Published 25 ಮೇ 2024, 1:27 IST
Last Updated 25 ಮೇ 2024, 1:27 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಬಿಬಿಎಂಪಿಯ ಏಳು ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ 30 ಶಿಕ್ಷಕರಿಗೆ ಬಿಬಿಎಂಪಿ ನೋಟಿಸ್‌ ಜಾರಿ ಮಾಡಲು ನಿರ್ಧರಿಸಿದೆ.

2023–24ನೇ ಸಾಲಿನಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣ ಏನು ಎಂಬ ಬಗ್ಗೆ ವಿವರಣೆ ನೀಡುವಂತೆ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ನೋಟಿಸ್‌ ಜಾರಿಯಾಗಲಿದೆ.

ಗಾಂಧಿನಗರ (ಶೇ 50), ಪಾದರಾಯನಪುರ (ಶೇ 48.53), ಮಲ್ಲೇಶ್ವರ (ಶೇ 48.39), ಮರ್ಫಿಟೌನ್‌ (ಶೇ 41.67), ಪಿಳ್ಳಣ್ಣ ಗಾರ್ಡನ್‌ (ಶೇ 24.50), ಆಸ್ಟಿನ್‌ ಟೌನ್‌ (ಶೇ 23.68), ಕೆ.ಜಿ. ನಗರ (ಶೇ 20) ಪ್ರೌಢಶಾಲೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ.

ಪಿಳ್ಳಣ್ಣ ಗಾರ್ಡನ್‌ ಪ್ರೌಢಶಾಲೆಯಲ್ಲಿ 249 ವಿದ್ಯಾರ್ಥಿಗಳಲ್ಲಿ 61 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ಪಾದರಾಯನಪುರ ಶಾಲೆಯಲ್ಲಿ 136ರಲ್ಲಿ 66 ಮಂದಿ, ಆಸ್ಟಿನ್‌ ಟೌನ್‌ನಲ್ಲಿ 38ರಲ್ಲಿ 9 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.

ಶಾಲೆಗಳಲ್ಲಿನ ಕಡಿಮೆ ಫಲಿತಾಂಶದ ಕುರಿತು ವಿವರಣೆ ನೀಡಲು ಮುಖ್ಯ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಇನ್ನು, ವಿಷಯಗಳಲ್ಲಿ ಹಲವಾರು ವಿದ್ಯಾರ್ಥಿಗಳು ಅತಿ ಕಡಿಮೆ ಅಂಕ ಪಡೆದಿರುವುದು ಬಿಬಿಎಂಪಿ ಶಿಕ್ಷಣ ವಿಭಾಗದ ಗಮನಕ್ಕೆ ಬಂದಿದೆ. ಅಂತಹ ಸುಮಾರು 30 ವಿಷಯ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ‘ನೀವು ಬೋಧಿಸುವ ವಿಷಯಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಲು ಕಾರಣವೇನು ಎಂಬುದರ ವಿವರಣೆ ಜೊತೆಗೆ ಸಲಹೆಗಳನ್ನೂ ನೀಡಬೇಕು’ ಎಂದು ನೋಟಿಸ್‌ನಲ್ಲಿ ಸೂಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹೊರಗುತ್ತಿಗೆ ಶಿಕ್ಷಕರ ಮುಂದುವರಿಕೆ: ಬಿಬಿಎಂಪಿ ಶಾಲೆಗಳಲ್ಲಿ 746 ಹೊರಗುತ್ತಿಗೆ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 2024–25ನೇ ಶೈಕ್ಷಣಿಕ ವರ್ಷದಲ್ಲಿ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸಮ್ಮತಿಸುವ ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ಒದಗಿಸಲು ಕ್ರಿಸ್ಟಲ್‌ ಸೇರಿದಂತೆ ಮೂರು ಏಜೆನ್ಸಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

ಬಿಬಿಎಂಪಿಯಿಂದ ಹೊರಗುತ್ತಿಗೆ ಮೂಲಕ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. ಶಿಕ್ಷಣ ಇಲಾಖೆಯ ಮೂಲಕ ಪ್ರಕ್ರಿಯೆ ಆರಂಭಿಸಲಾಗಿದೆ. ಹೀಗಾಗಿ, ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಪ್ರಥಮ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ಅವರಿಗೆ ಮೇ 21ರಿಂದ 23ರವರೆಗೆ ತರಬೇತಿ ನೀಡಲಾಗಿದೆ. ಎಸ್‌ಡಿಎಂಸಿ ಮೂಲಕ ಅವರು ಕಾರ್ಯನಿರ್ವಹಿಸಲಿದ್ದಾರೆ. ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳನ್ನಾಗಿ ವಿಭಾಗಿಸಿ ಏಜೆನ್ಸಿಗಳಿಂದ ಈ ಶಿಕ್ಷಕರು ನೇಮಕವಾಗಲಿದ್ದಾರೆ.

‘ಎಸ್‌ಡಿಎಂಸಿ ಪ್ರಕಾರ, ಶಿಕ್ಷಕರಿಗೆ ₹12,500 ವೇತನ ನೀಡಲಾಗುತ್ತಿದೆ. ಬಿಬಿಎಂಪಿ ಈ ಹಿಂದೆ ಹೆಚ್ಚಿನ ವೇತನ ನೀಡುತ್ತಿತ್ತು. ಆದ್ದರಿಂದ ಬಿಬಿಎಂಪಿ ವತಿಯಿಂದ ಸುಮಾರು ₹5 ಸಾವಿರವನ್ನು ನೀಡಲಾಗುತ್ತದೆ. ಹೀಗಾಗಿ, ಶಿಕ್ಷಕರು ₹17,500 ವೇತನ ಪಡೆಯಲಿದ್ದಾರೆ. ಇಷ್ಟಾದರೂ ಹಿಂದಿಗಿಂತ ₹1000ದಷ್ಟು ವೇತನ ಕಡಿಮೆಯಾಗಲಿದೆ’ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

ಶೂ ವಿತರಣೆ ಈ ವರ್ಷವೂ ವಿಳಂಬ ಬಿಬಿಎಂಪಿ ನರ್ಸರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸುಮಾರು 15500 ವಿದ್ಯಾರ್ಥಿಗಳಿಗೆ ಈ ವರ್ಷವೂ ಶೂ ವಿತರಣೆ ವಿಳಂಬವಾಗಲಿದೆ. ಕಪ್ಪು ಮತ್ತು ಕ್ಯಾನ್ವಾಸ್‌ ಶೂ ವಿತರಣೆಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಒಬ್ಬರೇ ಭಾಗವಹಿಸಿದ್ದರು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಗತ್ಯ ಅನುಮತಿ ಪಡೆದು ಎರಡನೇ ಬಾರಿಗೆ ಟೆಂಡರ್‌ ಕರೆಯಲಾಗಿದೆ. ಮೇ 31ರಂದು ಟೆಂಡರ್‌ ತೆರೆಯಲಾಗುತ್ತದೆ. ಈ ಟೆಂಡರ್‌ನಲ್ಲಿ ಹೆಚ್ಚಿನವರು ಭಾಗವಹಿಸಿದರೆ ಜೂನ್‌ 6ರ ನಂತರವಷ್ಟೇ ಗುತ್ತಿಗೆದಾರರನ್ನು ಅಂತಿಮಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಅವರಿಗೆ ಕಾರ್ಯಾದೇಶ ನೀಡಿ ಅವರು ವಿತರಣೆ ಆರಂಭಿಸಲು ಕನಿಷ್ಠ ಒಂದು ತಿಂಗಳಾಗುತ್ತದೆ. ಎಲ್ಲವೂ ಇದೇ ರೀತಿ ನಡೆದರೆ ಜುಲೈ ಮೊದಲ ವಾರದಲ್ಲಿ ಶೂಗಳನ್ನು ವಿತರಿಸಬಹುದು ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT