ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ತಿ ವಿರುದ್ಧ ಕ್ರಮಕ್ಕೆ ಶಿಫಾರಸು : ಎಸಿಬಿ

₹ 5.58 ಮೌಲ್ಯದ ಅಕ್ರಮ ಆಸ್ತಿ: ಗಳಿಸಿದ ಆರೋಪ
Last Updated 18 ಅಕ್ಟೋಬರ್ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಂಡಿರುವ ಎಸ್‌. ಮೂರ್ತಿ ಅವರು ಆದಾಯ ಮೀರಿ ₹5.58 ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಿಫಾರಸು ಮಾಡಿದೆ.

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರಿಗೆ ಎಸಿಬಿ ಐಜಿ ಚಂದ್ರಶೇಖರ್‌ ಬರೆದಿರುವ ಪತ್ರದಲ್ಲಿ, ಮೂರ್ತಿ ಇದುವರೆಗೆ ಗಳಿಸಿರುವ ಒಟ್ಟು ಆದಾಯ ₹3.50 ಕೋಟಿ. ಆದರೆ, ಅವರು ಒಟ್ಟು ಆಸ್ತಿ ಮೌಲ್ಯ ₹9.08 ಕೋಟಿ. ಖರ್ಚು ₹50 ಲಕ್ಷ. ಅಂದರೆ, ಆದಾಯ ಮೀರಿ ಶೇ 160ರಷ್ಟು ಆಸ್ತಿ ಸಂಪಾದಿಸಿದ್ದಾರೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನಗಳಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪದ ಮೇಲೆ ಅಮಾನತುಗೊಂಡಿರುವ ಮೂರ್ತಿ ಅವರ ಬೆಂಗಳೂರು ಮನೆಗಳು ಮತ್ತು ಕೊಡಗಿನ ಕೆ. ನಿಡಗುಣಿ ತೋಟದ ಮೇಲೆ ಈ ತಿಂಗಳ 3ರಂದು ಎಸಿಬಿ ದಾಳಿ ನಡೆದಿತ್ತು. ಆ ಸಮಯದಲ್ಲಿ ಪತ್ನಿ, ಪುತ್ರ ಮತ್ತು ನೆಂಟರ ಹೆಸರಲ್ಲಿ ಅಕ್ರಮ ಆಸ್ತಿ ಸಂಪಾದಿಸಿರುವುದು ಪತ್ತೆ ಆಗಿತ್ತು.

ಮೂರ್ತಿ ಅವರು ವಿವಿಧ ಬಾಬ್ತುಗಳಲ್ಲಿ ಮಾಡಿರುವ ವೆಚ್ಚಗಳು, ರಹಸ್ಯ ಹೂಡಿಕೆಗಳು ಹಾಗೂ ಆಸ್ತಿಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯಬೇಕಿದೆ. ಈ ಅಧಿಕಾರಿ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಹಾಗೂ ಸಾಕ್ಷಿಗಳಿಗೆ ಬೆದರಿಸುವ ಸಾಧ್ಯತೆ ಇರುವುದರಿಂದ ನಿಯಮದನ್ವಯ ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದೆ. ಎಸಿಬಿ ಶಿಫಾರಸಿನ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯ ಮೂರ್ತಿ ಅವರ ವಿರುದ್ಧ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಆಸ್ತಿ ವಿವರ
ಕೊಡಗಿನ ನಿಡಗುಣಿಯಲ್ಲಿ 12 ಎಕರೆ ಕಾಫಿ ತೋಟ ₹ 1.50 ಕೋಟಿ, ದೇವನಹಳ್ಳಿ ಏರೋಸ್ಪೇಸ್‌ ಡಿಫೆನ್ಸ್‌ ಪಾರ್ಕ್‌ನಲ್ಲಿ 2 ಎಕರೆ ಜಮೀನು ₹ 1.35 ಕೋಟಿ, ಜೆ.ಸಿ ನಗರ ಕೆಂಪಯ್ಯ ಬ್ಲಾಕ್‌ನಲ್ಲಿ 1,736 ಚದರಡಿ ನಿವೇಶನ ₹ 60 ಲಕ್ಷ, ಅಗ್ರಹಾರ ಗ್ರಾಮದಲ್ಲಿ 1,500 ಚದರಡಿ ನಿವೇಶನ ₹ 80 ಲಕ್ಷ, ಇದೇ ಗ್ರಾಮದಲ್ಲಿ 1,200 ಚದರಡಿ ನಿವೇಶನ ₹ 70 ಲಕ್ಷ ಸದಾಶಿನ ನಗರದ ಮನೆ ₹ 3.50 ಕೋಟಿ, ಎಚ್‌ಎಂಟಿ ಲೇಔಟ್‌ ಓಂ ಶಕ್ತಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ₹ 50 ಲಕ್ಷ, ಫೋರ್ಡ್‌ ಫಿಯಸ್ಟಾ ಕಾರು ₹ 9 ಲಕ್ಷ, ಮಾರುತಿ ಓಮ್ನಿ ವ್ಯಾನ್‌ ₹ 4.50 ಲಕ್ಷ, ಅಶೋಕ್‌ ಲೇಲಾಂಡ್‌ ಟ್ರಕ್‌ ₹ 60 ಲಕ್ಷ, ಚಿನ್ನಾಭರಣ ₹ 18 ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT