ಶನಿವಾರ, ಜನವರಿ 18, 2020
21 °C
8ರಂದು ಕಾರ್ಮಿಕ ಸಂಘಟನೆಗಳಿಂದ ‘ಅಖಿಲ ಭಾರತ ಸಾರ್ವತ್ರಿಕ ಮುಷ್ಕರ’ಕ್ಕೆ ಕರೆ

ನಾಳೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ಮೆರವಣಿಗೆಗೆ ಅನುಮತಿ ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ (ಜ. 8) ಹಮ್ಮಿಕೊಂಡಿರುವ ‘ಅಖಿಲ ಭಾರತ ಸಾರ್ವತ್ರಿಕ ಮುಷ್ಕರ’ (ಭಾರತ್‌ ಬಂದ್‌) ಸಂದರ್ಭದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡಲು ಪೊಲೀಸ್ ಕಮಿಷನರ್‌ ಭಾಸ್ಕರ್‌ ರಾವ್‌ ನಿರಾಕರಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ಅವರು, ‘ಕೆಲವು ಕಾರ್ಮಿಕ ಸಂಘಟನೆಗಳು ಮೆರವಣಿಗೆ ನಡೆಸಲು ಅನುಮತಿ ಕೇಳಿವೆ. ಆದರೆ, ನಾವು ಮೆರವಣಿಗೆಗೆ ಅನುಮತಿ ಕೊಡುವುದಿಲ್ಲ ಎಂದು ಹೇಳಿದ್ದೇವೆ. ಸಂಘಟನೆಗಳು ಏನೇ ಮಾಡುವುದಿದ್ದರೂ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಡಬೇಕು’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ಜನವಿರೋಧಿ ನೀತಿಗಳನ್ನು ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಈ ಮುಷ್ಕರಕ್ಕೆ ಕರೆ ನೀಡಿದೆ. ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್‌, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿಟಿಯು, ಎಚ್‌ಎಂಕೆಪಿ, ಬಿಎಸ್‌ಎನ್‌ಎಲ್‌, ಜೆಎಎಫ್‌, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ನೀಡಿವೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರೇಡ್‌ ಯೂನಿಯನ್‌ ಕೋ–ಆರ್ಡಿನೇಷನ್‌ ಸೆಂಟರ್‌ (ಟಿಯುಸಿಸಿ) ಸಂಘಟನೆ ಅಧ್ಯಕ್ಷ ಶಿವಶಂಕರ್, ‘ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಧ್ಯಾಹ್ನ 12.30ಕ್ಕೆ ಪ್ರತಿಭಟನಾ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಮಹಿಳೆಯರ ಘನತೆಯ ಬದುಕಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ನಮ್ಮ ಸಂಘಟನೆ ಕೂಡಾ ಕೇಂದ್ರ ಸರ್ಕಾರದ ಫ್ಯಾಸಿಸ್ಟ್‌ ಧೋರಣೆಯನ್ನು ಖಂಡಿಸಿ ನಡೆಯುವ ಮುಷ್ಕರದಲ್ಲಿ ಭಾಗವಹಿಸಲಿದೆ’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿಯ ಅಧ್ಯಕ್ಷರಾದ ದೇವಿ ಮತ್ತು ಪ್ರಧಾನ ಕಾರ್ಯದರ್ಶಿ ಗೌರಮ್ಮ ತಿಳಿಸಿದ್ದಾರೆ.

‘ಮೋದಿ ಸರ್ಕಾರದ ಆರ್ಥಿಕ ದಿವಾಳಿಕೋರ ನೀತಿ, ಸಂವಿಧಾನದ ಮೇಲೆ ಕೋಮುವಾದಿಗಳ ದಾಳಿ, ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ನಡೆಯುತ್ತಿರುವ ಮುಷ್ಕರವನ್ನು ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಸಂಪೂರ್ಣ ಬೆಂಬಲಿಸುತ್ತದೆ’ ಎಂದು ಸಮಿತಿಯ ರಾಜ್ಯ ಸಂಚಾಲಕ ಕಾಂ.ಗೋಪಾಲಕೃಷ್ಣ ಅರಳಹಳ್ಳಿ ತಿಳಿಸಿದ್ದಾರೆ.

‘ಅನಾಹುತ ಸಂಭವಿಸಿದರೆ ಆಯೋಜಕರೇ ಹೊಣೆ’

‘ಭಾರತ್ ಬಂದ್ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಬಂದ್ ಮಾಡಿದರೆ, ಅದಕ್ಕೆ ಆಯೋಜಕರು ಹೊಣೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಷರತ್ತುಗಳಿವೆ. ಏನೇ ಅನಾಹುತ ಸಂಭವಿಸಿದರೂ ಆಯೋಜಕರನ್ನು ಹೊಣೆ ಮಾಡಿ ಮೊಕದ್ದಮೆ ದಾಖಲಿಸುತ್ತೇವೆ’ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಎಚ್ಚರಿಸಿದರು.

‘ನಗರದಲ್ಲಿ ದಿನ ಬೆಳಗಾದರೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ. ಮೆರವಣಿಗೆಯಿಂದ ಲಕ್ಷಾಂತರ ಜನ ಸಮಸ್ಯೆಯಲ್ಲಿ ಸಿಲುಕುತ್ತಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

‘ವಾಹನ ಸಂಚಾರ ವ್ಯತ್ಯಯ ಆಗದಂತೆ ಕ್ರಮ’

‘ಮುಷ್ಕರದ ದಿನ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದರು.

‘ಮುಷ್ಕರದ ದಿನ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮುಂಜೂರು ಮಾಡಬಾರದು. ಅಂದು ಕೆಲಸಕ್ಕೆ ಗೈರಾಗುವ ನೌಕರರ ವಿರುದ್ಧ ಕೆಲಸ ಮಾಡದಿದ್ದಾಗ ವೇತನ ಇಲ್ಲ ಎಂಬ ತತ್ವದಡಿ ಕ್ರಮ ತೆಗೆದುಕೊಳ್ಳಲಾಗವುದು’ ಎಂದೂ ಎಚ್ಚರಿಕೆ ನೀಡಿದ್ದಾರೆ.

‘ಬಿಎಂಟಿಸಿ: ಸಂಚಾರ ವ್ಯತ್ಯಯ ಆಗದು’

‘ಬಿಎಂಟಿಸಿ ಬಸ್‌ಗಳ ಸಂಚಾರದಲ್ಲೂ ವ್ಯತ್ಯಯ ಆಗುವುದಿಲ್ಲ’ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಚಾಲಕ ಅಥವಾ ನಿರ್ವಾಹಕರು ಅನಧಿಕೃತ ರಜೆ ಪಡೆದರೆ ವೇತನ ಕಡಿತ ಮಾಡಲಾಗುವುದು ಎಂಬ ಸುತ್ತೋಲೆಯನ್ನು ಎಲ್ಲಾ ಡಿಪೊಗಳಿಗೆ ಕಳುಹಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೇಡಿಕೆಗಳು

* ಗುತ್ತಿಗೆ ಪದ್ಧತಿ ನಿಯಂತ್ರಣ

* ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆ

* ಡಾ.ಸ್ವಾಮಿನಾಥನ್ ವರದಿ ಜಾರಿ

* ಸ್ಕೀಂ ನೌಕರರನ್ನು ನೌಕರರೆಂದು ಪರಿಗಣನೆ

* ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು

* ಬ್ಯಾಂಕಿಂಗ್, ವಿಮೆ, ರಕ್ಷಣೆಯಲ್ಲಿ ನೇರ ಬಂಡವಾಳಕ್ಕೆ ವಿರೋಧ 

* ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ವಿರೋಧ

* ₹ 21 ಸಾವಿರ ಕನಿಷ್ಠ ವೇತನ ನಿಗದಿ ಮಾಡುವುದು

* ಆರ್ಥಿಕ ಹಿಂಜರಿತ ನೀತಿಗಳ ಕೈಬಿಡುವುದು

* ಅಸಂಘಟಿತ ಕಾರ್ಮಿಕರಿಗೆ ಪಿ.ಎಫ್, ಪಿಂಚಣಿ

* ಪಡಿತರ ಮೂಲಕ ಅಗತ್ಯ ವಸ್ತುಗಳ ವಿತರಣೆ

* ಉದ್ಯೋಗ ಖಾತ್ರಿ ಯೋಜನೆ ಬಲಪಡಿಸುವುದು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು