ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಅಪಹರಣ: ಸೆರೆ

ಕ್ರೈಂ ಧಾರವಾಹಿಯಿಂದ ಪ್ರೇರಿತಗೊಂಡ ಯುವಕನಿಂದ ಕೃತ್ಯ!
Last Updated 30 ಜನವರಿ 2020, 2:44 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೈಂ ಧಾರವಾಹಿಯಿಂದ ಪ್ರೇರಿತಗೊಂಡು ಶಾಲಾ ವಿದ್ಯಾರ್ಥಿಯನ್ನು ಅಪಹರಿಸಿ, ₹ 5 ಲಕ್ಷಕ್ಕೆ ಬೆದರಿಕೆ ಒಡ್ಡಿದ ಆರೋಪಿಯನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಸವನಗುಡಿ ನಿವಾಸಿ ಚಿರಾಗ್ ಮೆಹ್ತಾ (21) ಬಂಧಿತ ಆರೋಪಿ. ಅಪಹರಣ ನಡೆದ ಎರಡು ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಲಾಗಿದೆ. ಅಪಹರಣಕ್ಕೀಡಾಗಿದ್ದ ಖಾಸಗಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಬಿ. ರಮೇಶ್ ತಿಳಿಸಿದರು.

‘ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಅರೋಪಿಯ ಮುಖಚಹರೆ ಮತ್ತು ಮೊಬೈಲ್ ನಂಬರ್ ಲೊಕೇಷನ್ ನೀಡಿದ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.

ನಿರುದ್ಯೋಗಿಯಾಗಿದ್ದ ಚಿರಾಗ್ ಪಬ್, ಬಾರ್‌ಗೆ ಹೋಗುತ್ತಿದ್ದ. ಸಾಲ ಮಾಡಿಕೊಂಡಿದ್ದ ಆರೋಪಿಗೆ ಮೋಜಿಗೆ ಹಣ ಇರಲಿಲ್ಲ. ಹಿಂದಿ ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾದ ಧಾರವಾಹಿ ವೀಕ್ಷಿಸಿ, ಅದರಂತೆ ಅಪಹರಣ ಸಂಚು ರೂಪಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಕೆಲವು ವಿದ್ಯಾರ್ಥಿಗಳ ಕುಟುಂಬದ ಹಿನ್ನೆಲೆಯನ್ನು 15 ದಿನಗಳಿಂದ ತಿಳಿದುಕೊಂಡಿದ್ದ ಆರೋಪಿ, ಈ ಪೈಕಿ ಒಬ್ಬನನ್ನು ಅಪಹರಿಸಲು ಯೋಜನೆ ರೂಪಿಸಿದ್ದ. ಮಂಗಳವಾರ (ಜ. 28) ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಾಲೆಯಿಂದ ಹೊರಬಂದಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿಯನ್ನು ಭೇಟಿ ಮಾಡಿದ ಆರೋಪಿ, ‘ನಿಮ್ಮ ಶಾಲೆಯಲ್ಲಿ ಕಲಿಯುತ್ತಿರುವ ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಕಾಣೆಯಾಗಿದ್ದಾನೆ. ನನಗೆ ನಿನ್ನ ತಂದೆಯ ಪರಿಚಯವಿದೆ. ಬಾಲಕನನ್ನು ಹುಡುಕಲು ಸಹಾಯ ಮಾಡು’ ಎಂದು ಹೇಳಿ ಕರೆದುಕೊಂಡು ಹೋಗಿದ್ದ ಎಂದು ಡಿಸಿಪಿ ವಿವರಿಸಿದರು.

ಮೆಜೆಸ್ಟಿಕ್‌ವರೆಗೂ ಕಾಲ್ನಡಿಗೆಯಲ್ಲೇ ವಿದ್ಯಾರ್ಥಿಯನ್ನು ಆರೋಪಿ ಕರೆದುಕೊಂಡು ಹೋಗಿದ್ದ. ಅಲ್ಲಿಗೆ ಹೋಗುತ್ತಿದ್ದಂತೆ ಕಾಣೆಯಾಗಿರುವ ವಿದ್ಯಾರ್ಥಿಯ ಫೋಟೊ ತೋರಿಸುವಂತೆ ವಿದ್ಯಾರ್ಥಿ ಒತ್ತಾಯಿಸಿದ್ದಾನೆ. ಆಗ, ತನ್ನ ಮೊಬೈಲ್‌ನಲ್ಲಿದ್ದ ಹುಡುಗನೊಬ್ಬನ ಫೋಟೊವನ್ನು ಆರೋಪಿ ತೋರಿಸಿದ್ದಾನೆ. ಆಗ ‘ಚಿತ್ರದಲ್ಲಿರುವವನು ನಮ್ಮ ತರಗತಿಯವನಲ್ಲ. ಅವನ ಪರಿಚಯವಿಲ್ಲ. ನನ್ನನ್ನು ಮನೆಗೆ ಕಳುಹಿಸು’ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಮನೆಗೆ ಕರೆದುಕೊಂಡು ಹೋಗುವುದಾಗಿ ಬೌನ್ಸ್ ಸ್ಕೂಟರ್ ಹತ್ತಿಸಿಕೊಂಡು ಲ್ಯಾವೆಲ್ ರಸ್ತೆಯಲ್ಲಿರುವ ಹೋಟೆಲೊಂದಕ್ಕೆ ಕರೆದೊಯ್ದು ವಿದ್ಯಾರ್ಥಿಯ ತಂದೆಗೆ ಕರೆ ಮಾಡಿ ₹ 5 ಲಕ್ಷ ಕೊಡುವಂತೆ ಬೆದರಿಕೆ ಹಾಕಿದ್ದಾನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT