ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರಿಂದ ಬೆದರಿಕೆ: ವಿದ್ಯಾರ್ಥಿನಿಯರ ಪ್ರತಿಭಟನೆ

ಜ್ಯೋತಿ ನಿವಾಸ್ ಮಹಿಳಾ ಕಾಲೇಜಿನಲ್ಲಿ ಸಿಎಎ ಪರ ಸಹಿ ಸಂಗ್ರಹ, ಗೋಡೆಗೆ ಬ್ಯಾನರ್ ಅಂಟಿಸಿದಕ್ಕೆ ಆಕ್ರೋಶ
Last Updated 9 ಜನವರಿ 2020, 14:06 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಪರ ಸಹಿ ಸಂಗ್ರಹಿಸುವ ವೇಳೆ ಬಿಜೆಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಗುರುವಾರ ಮೌನ ಪ್ರತಿಭಟನೆ ನಡೆಸಿದರು.

ಬಿಜೆಪಿ ಕಾರ್ಯಕರ್ತರು ಬುಧವಾರ ಸಂಜೆ ಕಾಲೇಜಿನ ಗೋಡೆಗಳ ಮೇಲೆ ಸಿಎಎ ಪರ ಬ್ಯಾನರ್ ಅಂಟಿಸಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಿಸುತ್ತಿದ್ದರು. ಈ ವೇಳೆ, ಕೆಲವು ವಿದ್ಯಾರ್ಥಿನಿಯರು ಕಾಲೇಜಿನ ಗೋಡೆಗಳ ಮೇಲೆ ಬ್ಯಾನರ್ ಅಂಟಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿ ಕಾರ್ಯಕರ್ತರು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸಂಬಂಧ ಕಾಲೇಜಿನ ವಿದ್ಯಾರ್ಥಿನಿಯವರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಅವರಿಗೆ ದೂರು ನೀಡಿದ್ದಾರೆ. ಅಲ್ಲದೆ, ಬಿಜೆಪಿ ಕಾರ್ಯಕರ್ತರಿಂದ ಬೆದರಿಕೆಯಾಗಿದೆ ಎಂದು ಆಕ್ಷೇಪಿಸಿ ಜ್ಯೋತಿ ನಿವಾಸ್ ಕಾಲೇಜು ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಸಿಎಎ ಪರ ಜಾಗೃತಿ ಹೆಸರಿನಲ್ಲಿ ಬೀದಿಗೆ ಇಳಿದಿರುವ ಬಿಜೆಪಿ ಕಾರ್ಯಕರ್ತರು, ಬುಧವಾರ ಸಂಜೆ ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ ಕಾಲೇಜು ಬಳಿ ಬಂದಿದ್ದರು. ಕಾಲೇಜಿನ ಆವರಣದ ಗೋಡೆ ಮೇಲೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ನಾಯಕರ ಚಿತ್ರವಿರುವ ಇಂಡಿಯಾ ಸಪೋರ್ಟ್‌ ಸಿಎಎ' ಎಂಬ ಬ್ಯಾನರ್‌ ಹಾಕಿದ್ದರು.

ಬ್ಯಾನರ್‌ಗೆ ವಿದ್ಯಾರ್ಥಿಗಳು ಮತ್ತು ಪಾದಚಾರಿಗಳಿಗೆ ಸಹಿ ಹಾಕುವಂತೆ ಬಲವಂತ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ವಿದ್ಯಾರ್ಥಿನಿಯರು ಮತ್ತು ಪ್ರಾಧ್ಯಾಪಕರು ಆಕ್ಷೇಪ ವ್ಯಕ್ತಪಡಿಸಿದಾಗ ಈಜೀಪುರದ ಬಿಜೆಪಿ ಕಾರ್ಯಕರ್ತರು ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ‘ನಿಮಗೆ ಪೌರತ್ವದ ಬಗ್ಗೆ ಕಾಳಜಿಯಿಲ್ಲ, ನೀವು ನಿಮ್ಮ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ. ಭಾರತದ ಬಗ್ಗೆ ಮೊದಲ ಕಾಳಜಿ ವಹಿಸಿ. ನೀವು ಭಾರತೀಯರಲ್ಲ. ನಿಜವಾದ ಭಾರತೀಯರು ಇದರ ಬಗ್ಗೆ ಕಾಳಜಿ ವಹಿಸುತ್ತಾರೆ’ ಎಂದು ನಿಂದಿಸಿದ್ದರು.

ಅಲ್ಲದೆ, ವಿದ್ಯಾರ್ಥಿಗಳನ್ನು ಅಶಿಕ್ಷಿತರು ಎಂದು ಜರೆದಿದ್ದು, 'ಒಂದೊಮ್ಮೆ ಇದಕ್ಕೆ ಸಹಿ ಹಾಕದಿದ್ದಲ್ಲಿ ಜಮಿಯಾ ಮಿಲಿಯಾ ಮತ್ತು ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಆದ ಗತಿ ನಿಮಗೂ ಆಗುತ್ತದೆ' ಎಂದು ಬೆದರಿಸಿದ್ದಾರೆ ಎನ್ನಲಾಗಿದೆ. ‘ನೀವು ಕಾಲೇಜಿನ ಮಾಲೀಕರಲ್ಲ. ಗೋಡೆಗೆ ಬ್ಯಾನರ್ ಅಂಟಿಸುವುದನ್ನು ಮಾಲೀಕರು ಮಾತ್ರ ಆಕ್ಷೇಪಿಸಬಹುದು’ ಎಂದೂ ಬಿಜೆಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದರು. ಇಷ್ಟೆಲ್ಲಾ ನಡೆದರೂ ಜಗ್ಗದ ವಿದ್ಯಾರ್ಥಿನಿಯರು ಬಿಜೆಪಿ ಕಾರ್ಯಕರ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಬಿಜೆಪಿ ಕಾರ್ಯಕರ್ತರನ್ನು ಅಲ್ಲಿಂದ ಕಳುಹಿಸಿದ್ದರು.

ಇದೀಗ, ಈ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಕಾಲೇಜಿನ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನ ಒಳಕ್ಕೆ ಕರೆಸಿಕೊಂಡು ಗೇಟಿಗೆ ಬೀಗ ಹಾಕಿದೆ.

‘ಮಾಹಿತಿ ನೀಡುವುದಕ್ಕೆ ವಿರೋಧ ಏಕೆ’
ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನ ಬಳಿ ನಡೆದ ಘಟನೆ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ‘ದೇಶದ ಕಾನೂನಿನ ಬಗ್ಗೆ ಜನರಿಗೆ ಮಾಹಿತಿ ನೀಡಬಾರದೇ. ಯಾವುದೇ ಕಾನೂನಿನ ಬಗ್ಗೆ ಸ್ಪಷ್ಟನೆ ನೀಡಬಾರದೇ’ ಎಂದು ಪ್ರಶ್ನಿಸಿದರು.

‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಮುಸ್ಲಿಮರನ್ನು ದೇಶದಿಂದ ಹೊರ ಹಾಕಲಾಗುತ್ತದೆ ಎಂಬ ಅಪಪ್ರಚಾರ ವ್ಯಾಪಕವಾಗಿದೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ತಪ್ಪು ಅಭಿಪ್ರಾಯ ಹೋಗಲಾಡಿಸುವ ಕೆಲಸ ಮಾಡುತ್ತಿದ್ದೇವೆ. ಅದನ್ನೇ ತಪ್ಪು ಎಂದರೆ ಹೇಗೆ. ಜನರ ಮನಸ್ಸಿನಲ್ಲಿ ದ್ವೇಷ ಬಿತ್ತುವ ಕೆಲಸ ಆಗಬಾರದು. ಈ ವಿಚಾರದಲ್ಲಿ ರಾಜಕೀಯ ಬೇಡ. ದೇಶ ದ್ರೋಹದ ಕೆಲಸ ನಿಲ್ಲಿಸಿ, ಧರ್ಮ, ಜಾತಿ ಮೀರಿ ಭಾರತವನ್ನು ಪ್ರೀತಿಸಿ. ಸಿಎಎ ವಿರುದ್ಧ ನಡೆಯುತ್ತಿರುವ ಘಟನೆಗಳು ನಿಜಕ್ಕೂ ಶೋಚನೀಯ. ದೇಶದ ಸಂಸ್ಕೃತಿಗೆ, ದೇಶಕ್ಕೆ ಅಗೌರವ ತೋರುವುದು ಸರಿ ಅಲ್ಲ’ ಎಂದರು.

ಪರಿಶೀಲಿಸಿ ಕ್ರಮ: ಮುಖ್ಯಮಂತ್ರಿ
‘ಜ್ಯೋತಿ ನಿವಾಸ್‌ ಕಾಲೇಜಿನ ಘಟನೆ ಕುರಿತಂತೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಘಟನೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಅಗತ್ಯ ಬಿದ್ದರೆ ತನಿಖೆ ಮಾಡಿಸೋಣ’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಸಣ್ಣ ಘಟನೆಯನ್ನು ದೊಡ್ಡದು ಮಾಡುವುದು ಬೇಡ. ಈ ಬಗ್ಗೆ ಪರಿಶೀಲಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ’ ಎಂದರು.

ಕಾಂಗ್ರೆಸ್‌ ನಾಯಕ ರಾಮಲಿಂಗಾರೆಡ್ಡಿ ಕಾಲೇಜಿಗೆ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ‘ಅವರು ರಾಜಕಾರಣ ಮಾಡಲು ಹೊರಟಿದ್ದು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT