ಶುಕ್ರವಾರ, ಮಾರ್ಚ್ 5, 2021
27 °C
ಸಿ.ಎಸ್. ದ್ವಾರಕಾನಾಥ್‌ ಅವರ ಕೃತಿ ಬಿಡುಗಡೆ

‘ಸಾಮಾಜಿಕ ನ್ಯಾಯ ವಿಶ್ಲೇಷಿಸುವ ‘ಗೋಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಾಮಾಜಿಕ ಜಾಲತಾಣಗಳಲ್ಲಿ ದ್ವಾರಕಾನಾಥ್‌ ಬರೆದಿರುವ ಬರಹಗಳ ಸಂಗ್ರಹವಾಗಿರುವ ‘ಗೋಡೆ’ ಕೃತಿಯು ಸಾಮಾಜಿಕ ನ್ಯಾಯದ ಕುರಿತು ಚರ್ಚಿಸುತ್ತಾ, ಜಾತಿ ಎಂಬ ಘಟಕದ ಬಗ್ಗೆ ವಿಶ್ಲೇಷಿಸುತ್ತದೆ’ ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದರು. 

ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾವ್ಯ–ಕಥೆಯ ಸ್ವರೂಪಕ್ಕಿಂತ ವಿಭಿನ್ನವಾದ, ಆಧುನಿಕತೆಯ ಲಕ್ಷಣವನ್ನು ಈ ಕೃತಿಯು ಹೊಂದಿದೆ. ಜಾತಿ ಇಲ್ಲದೆ ಯಾವುದೇ ಪ್ರಕ್ರಿಯೆ ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ದೇವರುಗಳಿಗಿಂತ ಜಾಸ್ತಿ ಜಾತಿಗಳಿವೆ’ ಎಂದರು. 

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ರಾಜು, ‘ಗೋಡೆ’ ಕೃತಿಯು ದಿನಚರಿಯ ರೂಪದಲ್ಲಿದೆ. ಡೈರಿ ಬರೆಯುವ ಅಭ್ಯಾಸವೇ ಸತ್ತು ಹೋಗಿರುವ ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ಎಲ್ಲರನ್ನೂ ದಿನಚರಿ ಬರಹಗಾರರನ್ನಾಗಿ ರೂಪಿಸಿವೆ’ ಎಂದರು. 

‘ಸಾಮಾಜಿಕ ಜಾಲತಾಣಗಳಿಂದ ಬರವಣಿಗೆ ಈಗ ಅಬ್ರಾಹ್ಮಣೀಕರಣವಾಗಿದೆ. ಮೊದಲು ಪತ್ರಿಕೆಗಳಲ್ಲಿ ಬರೆಯಲು ಕೆಲವರಿಗೆ ಮಾತ್ರ ಅವಕಾಶವಿತ್ತು. ಪತ್ರಿಕೆಗಳಲ್ಲಿ ಈಗಲೂ, ಕೆಲವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆದರೆ, ಫೇಸ್‌ಬುಕ್‌ನಲ್ಲಿ ಯಾರು, ಯಾವಾಗ, ಯಾವುದರ ಬಗ್ಗೆಯಾದರೂ ಬರೆಯಬಹುದು’ ಎಂದರು.  ‘ಗೋಡೆ’ಯಲ್ಲಿ ದ್ವಾರಕಾನಾಥ್‌ ಅವರ ಪ್ರತಿದಿನದ ನೋವು–ನಲಿವು, ತುಡಿತ–ತಕರಾರುಗಳು ದಾಖಲಾಗಿವೆ’ ಎಂದರು.

‘370ನೇ ವಿಧಿ ರದ್ದತಿಯ ಬಗ್ಗೆ ಬಾಯಿಬಿಡದ ಬುದ್ಧಿಜೀವಿಗಳು’

‘ಸದ್ಯ ವಿವಿಧ ಅಕಾಡೆಮಿಗಳ ಅಧ್ಯಕ್ಷ, ಸದಸ್ಯ ಹುದ್ದೆಗಳು ಖಾಲಿ ಇವೆ. ಈ ಪೈಕಿ, ತಮಗೆ ಯಾವುದಾದರೊಂದಿಗೆ ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಯಾವ ಬುದ್ಧಿಜೀವಿಗಳೂ ಕಾಶ್ಮೀರದ 370ನೇ ವಿಧಿ ರದ್ದತಿಯ ಕುರಿತು ಬಾಯಿ ಬಿಡಲಿಲ್ಲ’ ಎಂದು ಸುಗತ ಹೇಳಿದರು. 

‘ಮಾಧ್ಯಮಗಳು ಕೂಡ ಈ ಬಗ್ಗೆ ಸರಿಯಾಗಿ ಸುದ್ದಿ ಮಾಡಲಿಲ್ಲ. ಕೆಲವು ಚಾನೆಲ್‌ಗಳಂತೂ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷರಾಗಿದ್ದ ಶೇಖ್‌ ಅಬ್ದುಲ್ಲಾ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಆದರೆ, ಶೇಖ್‌ ಅಬ್ದುಲ್ಲಾ ಇರದಿದ್ದರೆ ಭಾರತಕ್ಕೆ ಕಾಶ್ಮೀರ ಸಿಗುತ್ತಲೇ ಇರಲಿಲ್ಲ’ ಎಂದರು. 

‘ಜವಾಹರ ಲಾಲ್‌ ನೆಹರೂ ಓಲೈಕೆ ನಂತರ, ಕಾಶ್ಮೀರವು ಭಾರತದಲ್ಲಿಯೇ ಇರುವಂತೆ ಶೇಖ್‌ ಅಬ್ದುಲ್ಲಾ ಕ್ರಮ ಕೈಗೊಂಡರು. ಮುಂದೆ, ನೆಹರೂ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಅಬ್ದುಲ್ಲಾ ಅವರು ಹತ್ತು ವರ್ಷ ಜೈಲಿನಲ್ಲಿ ಕಳೆದು ಪಾಕಿಸ್ತಾನಕ್ಕೆ ಹೋದಾಗ, ಕಾಶ್ಮೀರವನ್ನು ಬೇಕೆಂದು ಪಾಕಿಸ್ತಾನ ಅವರಿಗೆ ಕೋರಿತ್ತು. ನಾನು ಜಾತ್ಯತೀತವಾದಿ. ನಿಮ್ಮ ಇಸ್ಲಾಮಿಕ್‌ ಸಿದ್ಧಾಂತದ ಜೊತೆ ನಾನು ಬರುವುದಿಲ್ಲ. ನಾನು ಸತ್ತರೂ ಅದು ಭಾರತದಲ್ಲಿಯೇ ಎಂದಿದ್ದರು’ ಎಂದು ಸುಗತ ಹೇಳಿದರು. 

‘ಈ ಬಗ್ಗೆ ಅಂದಿನ ಪತ್ರಕರ್ತ, ಈಗಿನ ರಾಜಕಾರಣಿ ಎಂ.ಜೆ. ಅಕ್ಬರ್‌ ತಮ್ಮ ಪುಸ್ತಕದಲ್ಲಿ ಬರೆದಿದ್ದರು. ಆದರೆ, ಮೊನ್ನೆ ಸಂಸತ್ತಿನಲ್ಲಿ 370 ವಿಧಿ ರದ್ದತಿ ಕುರಿತು ಘೋಷಿಸುವಾಗ, ಅವರೇ ಮೇಜು ಕುಟ್ಟುತ್ತಾ ಕುಳಿತಿದ್ದರು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು