ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಸುಧಾರಣೆಗೆ ಅಧಿಕಾರಿಗಳು, ನಗರ ಯೋಜನಾ ತಜ್ಞರ ಹಲವು ಸಲಹೆಗಳು

Last Updated 26 ಡಿಸೆಂಬರ್ 2019, 6:45 IST
ಅಕ್ಷರ ಗಾತ್ರ

ಬೆಂಗಳೂರು: ಜನರ ಅಹವಾಲುಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸುವುದಕ್ಕೆ ಸರ್ಕಾರಿ ಸೇವೆಗಳನ್ನು ಪೂರೈಸುತ್ತಿರುವ ವಿವಿಧ ಸಂಸ್ಥೆಗಳು ಬೆಂಗಳೂರಿನಲ್ಲಿ ಕೈಗೊಂಡ ಕ್ರಮಗಳೇನು? ಸಂಚಾರ ವ್ಯವಸ್ಥೆ ಸುಧಾರಣೆಗೆ ಏನೇನು ಕಾರ್ಯಕ್ರಮ ರೂಪಿಸಲಾಗಿದೆ? ಸರ್ಕಾರಿ ಸೇವೆ ನೀಡುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಈ ಸಂಸ್ಥೆಗಳು ಬದ್ಧತೆ ಪ್ರದರ್ಶಿಸುತ್ತಿವೆಯೇ?

ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ‘ಸುಶಾಸನ’ ದಿನಾಚರಣೆಯು ಆಡಳಿತ ಸುಧಾರಣಾ ಕ್ರಮಗಳ ಕುರಿತ ಸಂವಾದಕ್ಕೆ ವೇದಿಕೆಯಾಯಿತು.

ಬಿಬಿಎಂಪಿ, ಪೊಲೀಸ್‌ ಇಲಾಖೆ, ಬೆಸ್ಕಾಂ, ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌), ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳ‌ (ಬಿಎಂಟಿಸಿ) ಅಧಿಕಾರಿಗಳು ಆಡಳಿತ ವ್ಯವಸ್ಥೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳನ್ನು ಪ್ರಸ್ತುತಪಡಿಸಿದರು.

ಬಳಿಕ ನಡೆದ ಸಂವಾದದಲ್ಲಿ ನಗರ ಯೋಜನಾ ತಜ್ಞರು ಸರ್ಕಾರಿ ಸಂಸ್ಥೆಗಳ ಕಾರ್ಯಕ್ರಮಗಳು ನಿಜಕ್ಕೂ ಜನರನ್ನು ತಲುಪುತ್ತಿವೆಯೇ? ಅವುಗಳ ಅನುಷ್ಠಾನದಲ್ಲಿ ಇರುವ ಲೋಪಗಳೇನು, ಜನರ ದೂರುಗಳೇನು ಎಂಬ ಬಗ್ಗೆ ವಿಶ್ಲೇಷಿಸಿದರು. ತಜ್ಞರ ಹಾಗೂ ಜನರ ಸಂದೇಹಗಳನ್ನು ನಿವಾರಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿದರು.

ಸಹಾಯ 2.0 ಆ್ಯಪ್‌: ‘ಜನರ ಅಹವಾಲು ಸ್ವೀಕರಿಸಲು ಬಿಬಿಎಂಪಿ ರೂಪಿಸಿರುವ ‘ಸಹಾಯ‘ ಆ್ಯಪ್‌ ಅನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಈಗ ಬಳಕೆಯಲ್ಲಿರುವ ಆ್ಯಪ್‌ನಲ್ಲಿ ಕೆಲವು ಲೋಪವಿದೆ. ನೈಜ ಸಮಯಕ್ಕೆ ಅನುಗುಣವಾಗಿ ಮಾಹಿತಿ ರವಾನೆಗೆ ಇದರಲ್ಲಿ ಅವಕಾಶವಿಲ್ಲ. ಸಾರ್ವಜನಿಕರು ಇದರಲ್ಲಿ ನೀಡುವ ದೂರು ಅದನ್ನು ಬಗೆಹರಿಸಬೇಕಾದ ಅಧಿಕಾರಿಯನ್ನು ನೇರವಾಗಿ ತಲುಪುತ್ತಿಲ್ಲ. ಈ ಲೋಪಗಳನ್ನು ಆ್ಯಪ್‌ನ ಸುಧಾರಿತ ಆವೃತ್ತಿಯಲ್ಲಿ (ಸಹಾಯ 2.0) ಸರಿಪಡಿಸಲಾಗಿದೆ. ಜ.1ರಂದು ಪರಿಷ್ಕೃತ ಆ್ಯಪ್‌ ಬಿಡುಗಡೆ ಮಾಡಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ತಿಳಿಸಿದರು.

ಪೊಲೀಸ್‌ ಇಲಾಖೆ ರೂಪಿಸಿದ ಸುರಕ್ಷಾ ಆ್ಯಪ್‌ನ ಮಹತ್ವ ವಿವರಿಸಿದ ನಗರ ಪೊಲೀಸ್‌ ಕಮಿಷನರ್ ಭಾಸ್ಕರ್ ರಾವ್‌, ‘ಈ ಆ್ಯಪ್‌ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಮತ್ತು ಮಕ್ಕಳಿಗೆ ನೆರವಾಗಲಿದೆ. ಈ ಆ್ಯಪ್‌ ಆನ್‌ ಮಾಡಿದ ವ್ಯಕ್ತಿ ಮಾತನಾಡದೇ ಇದ್ದರೆ ಕ್ಯಾಮೆರಾ ತನ್ನಿಂದ ತಾನೆ ಸುತ್ತಲಿನ ದೃಶ್ಯಗಳನ್ನು ಪೊಲೀಸ್‌ ಸಹಾಯ ಕೇಂದ್ರಕ್ಕೆ ರವಾನಿಸುತ್ತದೆ. ಜಿಪಿಎಸ್‌ ಆಧಾರದಲ್ಲಿ ಸ್ಥಳವನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಯಾವುದಾದರೂ ವ್ಯಕ್ತಿಯನ್ನು ವಾಹನದಲ್ಲಿ ಅಪಹರಿಸುತ್ತಿದ್ದರೆ, ಅದು ಸಾಗುವ ಪಥವನ್ನೂ ಇದು ತೋರಿಸುತ್ತದೆ. ಸಂಕಷ್ಟದಲ್ಲಿರುವ ಬಗ್ಗೆ ಸಂದೇಶ ಬಂದ ತಕ್ಷಣವೇ ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕಲುಹಿಸಲಾಗುತ್ತದೆ’ ಎಂದರು.

‘ದೂರು ಬಂದ 9 ನಿಮಿಷಗಳ ಒಳಗೆ ಹೊಯ್ಸಳ ವಾಹನ ಸ್ಥಳಕ್ಕೆ ತಲುಪುವ ವ್ಯವಸ್ಥೆ ಈಗ ಇದೆ. ಕೇವಲ 4 ನಿಮಿಷದ ಒಳಗೆ ವಾಹನವು ಸ್ಥಳಕ್ಕೆ ತಲುಪುವಂತೆ ಮಾಡುವ ಉದ್ದೇಶವಿದೆ’ ಎಂದು ತಿಳಿಸಿದರು.

ನಗರ ಯೋಜನಾ ತಜ್ಞರಾದ ವಿ. ರವಿಚಂದರ್, ಅಶ್ವಿನ್ ಮಹೇಶ್‌, ನರೇಶ್‌ ನರಸಿಂಹನ್‌ ಸಂವಾದ ನಡೆಸಿಕೊಟ್ಟರು.

ದೇಶದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರುತ್ತಿರುವ ನಗರ ಬೆಂಗಳೂರು. ಈ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಜಗತ್ತಿನಲ್ಲೇ ಗುರುತಿಸಿಕೊಳ್ಳುವ ಮಟ್ಟಕ್ಕೆ ಇದನ್ನು ಕೊಂಡೊಯ್ಯಬೇಕು
ಸಿ.ಎನ್‌.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ

‘ಅಹವಾಲು ಸ್ವೀಕರಿಸಲು ಏಕೀಕೃತ ವ್ಯವಸ್ಥೆ’

‘ನಗರಕ್ಕೆ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಒದಗಿಸುವುದಕ್ಕೆ ಏಕೀಕೃತ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದರು.

‘ಬೇರೆ ಬೇರೆ ಇಲಾಖೆಗಳು ಪ್ರತ್ಯೇಕವಾಗಿ ಕುಂದುಕೊರತೆಗಳ ಪರಿಹಾರ ಮಾಡುತ್ತಿವೆ. ದೂರುಗಳ ಪರಿಹಾರಕ್ಕೆ ಏಕೀಕೃತ ವ್ಯವಸ್ಥೆ ಇದ್ದರೆ ಇನ್ನಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯ’ ಎಂದರು.

‘ಬಿಬಿಎಂಪಿಯ ಸಹಾಯ ಆ್ಯಪ್‌, ಪೊಲೀಸ್‌ ಇಲಾಖೆಯ ಸುರಕ್ಷಾ ಆ್ಯಪ್‌, ಪಬ್ಲಿಕ್‌ ಐ ಆ್ಯಪ್‌ ಹಾಗೂ ಬೆಸ್ಕಾಂನ ಬೆಸ್ಕಾಂ ಮಿತ್ರ ಆ್ಯಪ್‌ ಬಳಕೆಯಲ್ಲಿವೆ. ಜಲಮಂಡಳಿಯಲ್ಲಿ ಸಹಾಯವಾಣಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಅಹವಾಲು ಸ್ವೀಕರಿಸಲಾಗುತ್ತದೆ. ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಆ್ಯಪ್ ಮೂಲಕ ನೀಡುವುದಕ್ಕೆ ವ್ಯವಸ್ಥೆ ಕಲ್ಪಿಸಿದರೆ ಒಳ್ಳೆಯದು’ ಎಂದು ಈ ಕುರಿತ ಸಂವಾದ ನಡೆಸಿಕೊಟ್ಟ ಬಿ–ಪ್ಯಾಕ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್‌ ಸಲಹೆ ನೀಡಿದ್ದರು.

‘ಸುಲಲಿತ ವ್ಯವಹಾರಕ್ಕೆ ಆದ್ಯತೆ’

‘ಸುಲಲಿತ ವ್ಯವಹಾರ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌) ಅನುಷ್ಠಾನಕ್ಕೆ ಆಯ್ಕೆಯಾಗಿರುವ ದೇಶದ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದರಿಂದ ಸಾಕಷ್ಟು ಬದಲಾವಣೆಗಳಾಗಲಿವೆ. ಈ ವಿಚಾರದಲ್ಲಿ ಜಗತ್ತಿನಲ್ಲಿ ನ್ಯೂಜಿಲೆಂಡ್ ಮುಂಚೂಣಿಯಲ್ಲಿದ್ದು, ಅಲ್ಲಿನ ಆಡಳಿತದ ಜೊತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

‘ರಸ್ತೆ ಇತಿಹಾಸದ ಜೊತೆ ಸಮಗ್ರ ಮಾಹಿತಿ’

‘ರಸ್ತೆ ಇತಿಹಾಸದ ಸುಧಾರಿತ ವ್ಯವಸ್ಥೆಯನ್ನು ಜನವರಿಯಿಂದ ಜಾರಿಗೊಳಿಸಲಾಗುತ್ತದೆ. ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (bbmp.gov.in) 33 ಸಾವಿರ ಕಿ.ಮೀ. ರಸ್ತೆಯ ಇತಿಹಾಸದ (ಅದನ್ನು ರಚಿಸಿದ್ದು, ದುರಸ್ತಿ ಪಡಿಸಿದ್ದು ಇತ್ಯಾದಿ ವಿವರ) ಜೊತೆಗೆ ಕಸ ಸಂಗ್ರಹ ಮತ್ತು ವಿಲೇವಾರಿ ಮಾಹಿತಿ, ರಸ್ತೆಯ ಅಕ್ಕಪಕ್ಕ ರಸ್ತೆ ಕತ್ತರಿಸಲು ನೀಡಿದ ಅನುಮತಿ, ಮರ ಕಡಿಯಲು ನೀಡಿದ ಅನುಮತಿ, ನಡೆಯುವ ಪ್ರತಿಯೊಂದು ಕಾಮಗಾರಿಗಳು, ನೀರು, ವಿದ್ಯುತ್ ಸಂಪರ್ಕ, ಒಳಚರಂಡಿ ಸಂಪರ್ಕ ಕುರಿತ ಮಾಹಿತಿ ಜೋಡಿಸಲಾಗುತ್ತದೆ. ಒಂದು ರಸ್ತೆಗೆ ಒಂದೇ ಕೋಡ್ ಇರುವುದರಿಂದ ಯಾವ ರಸ್ತೆಯಲ್ಲಿ ಏನೇನು ಕೆಲಸಗಳಾಗುತ್ತಿವೆ, ಎಲ್ಲಿ ಚರಂಡಿ ಕೆಲಸ ನಡೆಯುತ್ತಿದೆ ಎಂಬುದನ್ನೂ ತಿಳಿಯಬಹುದು. ನೀರಿನಹಾಗೂ ಒಳಚರಂಡಿಯ ಸಂಪರ್ಕವನ್ನು ಅಕ್ರಮವಾಗಿ ಪಡೆದರೆ ಗೊತ್ತಾಗುತ್ತದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

‘ಗುತ್ತಿಗೆದಾರರು ನಡೆಸುವ ಅಕ್ರಮಗಳಿಗೂ ಕಡಿವಾಣ ಬಿಳಲಿದ್ದು, ಆಡಳಿತ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಈ ವ್ಯವಸ್ಥೆಗೆ ಸಹಕರಿಸದೇ ಇದ್ದರೆ ಜನವರಿ ನಂತರದಲ್ಲಿ ಗುತ್ತಿದೆದಾರರಿಗೆ ಜಾಬ್ ಕೋಡ್ ಮತ್ತು ಹಣ ಪಾವತಿ ಆಗುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT