ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬೊಮ್ಮಾಯಿ ಎದುರೇ ಆತ್ಮಹತ್ಯೆಗೆ ಯತ್ನ

Last Updated 18 ಮಾರ್ಚ್ 2022, 16:21 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ವೃದ್ಧರೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಪೊಲೀಸರು ರಕ್ಷಿಸಿದ್ದಾರೆ.

ಸುಂಕದಕಟ್ಟೆ ನಿವಾಸಿ ಚಂದ್ರಶೇಖರ್ ಎಂಬುವರು ಮುಖ್ಯಮಂತ್ರಿಗೆ ದೂರು ನೀಡಲು ಆರ್‌.ಟಿ. ನಗರದ ಮನೆ ಎದುರು ನಡೆದ ‘ಜನತಾ ದರ್ಶನ’ಕ್ಕೆ ಶುಕ್ರವಾರ ಬಂದಿದ್ದರು.

ಮನವಿ ಸಲ್ಲಿಸಿದ್ದ ಚಂದ್ರಶೇಖರ್, ‘ನಿವೇಶನ ವಿಚಾರದಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್‌ಸ್ಪೆಕ್ಟರ್ ಅವರಿಂದ ನನಗೆ ಅನ್ಯಾಯ ಆಗಿದೆ. ಆರೋಪಿಗಳ ಜೊತೆ ಸೇರಿಕೊಂಡಿರುವ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದ್ದರು. ಮನವಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು.

ಅಷ್ಟಕ್ಕೆ ಸುಮ್ಮನಾಗದ ವೃದ್ಧರು, ‘ಈಗಾಗಲೇ ಹಲವರಿಗೆ ದೂರು ನೀಡಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ’ ಎಂದು ಕೂಗುತ್ತಲೇ ಜೇಬಿನಲ್ಲಿದ್ದ ವಿಷದ ಬಾಟಲಿ ಹೊರತೆಗೆದು ಕುಡಿಯುಲು ಮುಂದಾಗಿದ್ದರು. ಅದನ್ನು ನೋಡಿದ ಪೊಲೀಸರು, ವಿಷದ ಬಾಟಲಿ ಕಸಿದುಕೊಂಡು ಚಂದ್ರಶೇಖರ್‌ ಅವರನ್ನು ಬೇರೆಡೆ ಕರೆದೊಯ್ದು ಮಾಹಿತಿ ಪಡೆದುಕೊಂಡರು. ಮುಖ್ಯಮಂತ್ರಿ ಸಹ, ವೃದ್ಧನಿಗಾಗ ಅನ್ಯಾಯ ಸರಿಪಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ನಿವೇಶನ ವಿಚಾರವಾಗಿ 2021ರ ಆಗಸ್ಟ್ 3ರಂದು ಚಂದ್ರಶೇಖರ್ ದೂರು ನೀಡಿದ್ದರು. ಸಿಸಿಬಿ ಅಧಿಕಾರಿಗಳಿಗೂ ಅರ್ಜಿ ಸಲ್ಲಿಸಿದ್ದರು. ನಿವೇಶನ ಮಾರಾಟಗಾರರ ಜೊತೆ ಒಪ್ಪಂದದ ಮೂಲಕ ಚಂದ್ರಶೇಖರ್ ಸಮಸ್ಯೆ ಇತ್ಯರ್ಥಪಡಿಸಿಕೊಂಡಿರುವುದು ಗೊತ್ತಾಗಿದೆ. ಇದೀಗ ಅವರು ಸಿ.ಎಂಗೆ ದೂರು ನೀಡಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT