ನ್ಯಾಷನಲ್‌ ಕಾಲೇಜು ಮೆಟ್ರೊ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆಗೆ ಯತ್ನ

7

ನ್ಯಾಷನಲ್‌ ಕಾಲೇಜು ಮೆಟ್ರೊ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆಗೆ ಯತ್ನ

Published:
Updated:

ಬೆಂಗಳೂರು: ಇಲ್ಲಿನ ನ್ಯಾಷನಲ್‌ ಮೆಟ್ರೊ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಕೆಲವು ಗಂಟೆಗಳ ಕಾಲ ಹಸಿರು ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಬೋರ್ಡಿಂಗ್‌ ಪ್ರದೇಶದಿಂದ ದೂರವಿದ್ದ ಯುವಕ ರೈಲು ಬರುತ್ತಿದ್ದಂತೆ ಹಳಿಗಳ ಮೇಲೆ ಹಾರಿ ಆತ್ಮಹತ್ಯಗೆ ಯತ್ನಿಸಿದ್ದಾನೆ. ಸದ್ಯ ಆ ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.

ಯುವಕ ವೇಣುಗೋಪಾಲ್ ಎಂದು ಗುರುತಿಸಲಾಗಿದ್ದು, ಆತನ ತಾಯಿ ನೆಟ್ಟಕಲ್ಲಪ್ಪ ವೃತ್ತದ ಬಳಿ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದಾರೆ. ‘ಮಗ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣನಾದ ಬಳಿಕ ಖಿನ್ನತೆಗೆ ಒಳಗಾಗಿದ್ದ. ತಡರಾತ್ರಿವರೆಗೂ ಮೊಬೈಲ್ ಬಳಸುತ್ತಿದ್ದ ಕಾರಣ ಗುರುವಾರ ರಾತ್ರಿ ಬೈದಿದ್ದೆ‌. ಅದೇ ಬೇಸರದಲ್ಲಿ ಅತ್ಮಹತ್ಯೆಗೆ ಯತ್ನಿಸಿರಬಹುದು’ ಎಂದು ಆತನ ತಾಯಿ ಹೇಳಿದರು.

‘ರೈಲು ಹಳಿಗೆ ಹಾರಿದ್ದ ಯುವಕನ್ನು ನಮ್ಮ ಸಿಬ್ಬಂದಿ ತಕ್ಷಣ ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಯುವಕನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ಮೆಟ್ರೊ ನಿಗಮದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದರು.

ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ‘ಆತ ಯಾರೋ ಗೊತ್ತಿಲ್ಲ, ಧಿಡೀರನೆ ಹಳಿ ಮೇಲೆ ಹಾರಿದ್ದಾನೆ. ತಕ್ಷಣ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಅದೃಷ್ಟವಶಾತ್ ಪ್ರಾಣಕ್ಕೆ ಅಪಾಯವಾಗಿಲ್ಲ. ತಲೆಗೆ ಹೆಚ್ಚು ಪೆಟ್ಟು ಬಿದ್ದಿರುವುದರಿಂದ ನಿಮ್ಹಾನ್ಸ್‌ಗೆ ವರ್ಗಾಯಿಸಲಾಗುವುದು. ಘಟನೆಯಿಂದ ಸುಮಾರು 45 ನಿಮಿಷಗಳ ಕಾಲ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿತ್ತು’ ಎಂದರು.

ಸುಮಾರು 11.30ರ ವೇಳೆಗೆ ಘಟನೆ ನಡೆದಿದೆ. ಮಂತ್ರಿ ಮಾಲ್‌, ನ್ಯಾಷನಲ್‌ ಕಾಲೇಜು ಮತ್ತು ಜಯನಗರ ನಿಲ್ದಾಣಗಳಲ್ಲಿ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಹಸಿರು ಮಾರ್ಗದಲ್ಲಿ ಒಂದು ಗಂಟೆ ಮೆಟ್ರೊ ಸಂಚರಿಸಲಿಲ್ಲ.

‘ಅರ್ಧ ಗಂಟೆ ಕಾಲ ತಾಂತ್ರಿಕ‌ ಕಾರಣ ಎಂದು ಹೇಳಿ ರೈಲನ್ನು ಸ್ಥಗಿತಗೊಳಿಸಿದ್ದರು. ಸಂಚಾರ ಪುನರ್‌ಆರಂಭ ಯಾವಾಗ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ, ಕೆಲ ಸಮಯ ಗೊಂದಲ ಉಂಟಾಗಿತ್ತು. ಟಿಕೆಟ್‌ ಹಣವನ್ನು ಮರಳಿಸುವ ವ್ಯವಸ್ಥೆ ಇದೆಯೇ ಎಂದು ವಿಚಾರಿಸುವ ವೇಳೆಗೆ ರೈಲು ಸಂಚಾರ ಆರಂಭವಾಯಿತು’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

‘ಶ್ರೀರಾಂಪುರ ಮೆಟ್ರೊ ನಿಲ್ದಾಣಕ್ಕೆ ನಾನು ಬಂದಾಗ ಮೆಟ್ರೊ ಬರುಲು 3 ನಿಮಿಷ ಇದೆ ಎಂದು ತೋರಿಸುತ್ತಿತ್ತು. ಆದರೆ, ಅರ್ಧ ತಾಸು ಯಾವುದೇ ರೈಲು ಬರಲಿಲ್ಲ. ಜೊತೆಗೆ ಯಾವ ಕಾರಣಕ್ಕೆ ರೈಲು ನಿಲ್ಲಿಸಲಾಗಿದೆ ಎಂಬ ಬಗ್ಗೆಯೂ ಅಲ್ಲಿ ಮಾಹಿತಿ ನೀಡುತ್ತಿರಲಿಲ್ಲ’ ಎಂದು ವಿಜಯಾ ಎಂಬುವರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 10

  Sad
 • 0

  Frustrated
 • 5

  Angry

Comments:

0 comments

Write the first review for this !