ಶನಿವಾರ, ಜೂನ್ 6, 2020
27 °C
ಶನಿವಾರ ಸಂಜೆಯಿಂದಲೇ ’ಕರ್ಫ್ಯೂ’ ಜಾರಿ

ಭಾನುವಾರ ಲಾಕ್‌ಡೌನ್‌ :ಆಟೋ, ಟ್ಯಾಕ್ಸಿ ಸಂಚಾರ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

fraser town

ಬೆಂಗಳೂರು: ‘ಇದೇ 24ರ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇರಲಿದೆ. ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಶನಿವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 7ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ’ ಎಂದು ರಾಜ್ಯ ಸರ್ಕಾರ ಹೇಳಿದೆ. 

ಲಾಕ್‌ಡೌನ್ ಸಡಿಲ ಮಾಡಲಾಗುತ್ತಿದ್ದರೂ  ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಭಾನುವಾರ ನಿರ್ಬಂಧ ಮುಂದುವರಿಯಲಿದೆ ಎಂದು ಸರ್ಕಾರ ಹೇಳಿತ್ತು.

‘ಪೂರ್ವ ನಿಗದಿತ ಮದುವೆ ಸಮಾರಂಭಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಅಂತರ ಕಾಯ್ದುಕೊಂಡು ಗರಿಷ್ಠ 50 ಅತಿಥಿಗಳ ಸಂಖ್ಯೆ ಮೀರದಂತೆ ಸರಳವಾಗಿ ಮದುವೆ ಮಾಡಲು ಅನುಮತಿ ನೀಡಲಾಗಿದೆ’ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮದುವೆ ಹೊರತುಪಡಿಸಿ ಯಾವುದೇ ಸಭೆ, ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಔಷಧ ಅಂಗಡಿಗಳು, ಆಸ್ಪತ್ರೆ ತೆರೆದಿರಲಿವೆ. ಹಾಲು, ತರಕಾರಿ ಮಾರಾಟದಂತಹ ಅಗತ್ಯ ಸೇವೆ ಒದಗಿಸುವ ಚಟುವಟಿಕೆ ನಡೆಯಲಿದೆ’ ಎಂದು ಅವರು ಹೇಳಿದರು. 

‘ಸಮೂಹ ಸಾರಿಗೆ ಸೇವೆ ಇರುವುದಿಲ್ಲ. ಬಸ್, ಆಟೊ, ಟ್ಯಾಕ್ಸಿ ಸಂಚಾರವನ್ನೂ ನಿರ್ಬಂಧಿಸಲಾಗಿದೆ’ ಎಂದು ಅವರು ಹೇಳಿದರು. 

‘ಸಡಿಲಿಕೆಗಿಂತಲೂ ಮೊದಲಿದ್ದ ಮಾದರಿಯಲ್ಲಿಯೇ ಸಂಪೂರ್ಣ ಲಾಕ್‌ಡೌನ್‌ ಇರುತ್ತದೆ. ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಕರ್ಫ್ಯೂ ಅವಧಿಯಲ್ಲಿ ರಾಜ್ಯದಾದ್ಯಂತ ಬಿಗಿ ಭದ್ರತೆ ಇರಲಿದೆ. ಈ ಅವಧಿಯಲ್ಲಿ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು