ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ಸೂಪರ್ ಲೈಕ್’ ವಂಚನೆ; ₹ 5.54 ಕೋಟಿ ಜಪ್ತಿ

ದಕ್ಷಿಣ ವಿಭಾಗ ಪೊಲೀಸರ ಕಾರ್ಯಾಚರಣೆ; 14 ಆರೋಪಿಗಳ ಬಂಧನ
Last Updated 11 ಅಕ್ಟೋಬರ್ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಕೀಪ್ ಶೇರರ್’ ಹಾಗೂ‌ ‘ಸೂಪರ್ ಲೈಕ್’ ಆ್ಯಪ್‌ ಮೂಲಕ ಸಂಪಾದನೆ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟಿಗಟ್ಟಲೇ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಜಾಲ ಪತ್ತೆಯಾಗಿದ್ದು, ಈ ಸಂಬಂಧ 19 ಆರೋಪಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ನಗರದ ನಿವಾಸಿ ಸೈಯದ್ ಹಾಗೂ ತಿಪ್ಪೇಸ್ವಾಮಿ ಎಂಬುವರು ನೀಡಿದ್ದ ಪ್ರತ್ಯೇಕ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಅದರನ್ವಯ 19 ಮಂದಿಯನ್ನು ಸೆರೆ ಹಿಡಿಯಲಾಗಿದೆ. ₹ 14 ಲಕ್ಷ ನಗದು ಹಾಗೂ ಆರೋಪಿಗಳ ಖಾತೆಯಲ್ಲಿದ್ದ ₹ 16.40 ಕೋಟಿ ಜಪ್ತಿ ಮಾಡಲಾಗಿದೆ. ಎರಡು ಕಾರು ಹಾಗೂ ಮೊಬೈಲ್‌ಗಳನ್ನೂ ಸುಪರ್ದಿಗೆ ಪಡೆಯಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿದರು.

‘ಬಂಧಿತ ಆರೋಪಿಗಳ ಪೈಕಿ ಹಲವರು, ಹೊರ ರಾಜ್ಯದ ನಿವಾಸಿಗಳು. ಅವರೆಲ್ಲರೂ ಸಂಘಟಿತರಾಗಿ ‘ಸೂಪರ್ ಲೈಕ್’ ಹಾಗೂ ‘ಕೀಪ್‌ ಶೇರರ್’ ಆ್ಯಪ್ ಸೃಷ್ಟಿಸಿದ್ದರು. ಅದರ ಮೂಲಕ ಜನರನ್ನು ಸಂಪರ್ಕಿಸಿ ಸದಸ್ಯತ್ವಕ್ಕೆಂದು ಹಣ ಪಡೆದು ವಂಚಿಸುತ್ತಿದ್ದರು. ದೆಹಲಿ, ಮುಂಬೈ, ಅಹಮದಾಬಾದ್, ಕೋಲ್ಕತ್ತಾ, ಹೈದರಾಬಾದ್, ಮೈಸೂರು ಸೇರಿ ಹಲವೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ವಿವರಿಸಿದರು.

ಲೈಕ್, ಶೇರ್‌ ಮಾಡಿದರೆ ಹಣ: ‘ಆ್ಯಪ್‌ ಡೌನ್‌ನೋಡ್ ಮಾಡಿಕೊಂಡು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ, ಆ್ಯಪ್‌ನಲ್ಲಿ ಬರುವ ವಿಡಿಯೊಗಳನ್ನು ಲೈಕ್ ಮಾಡಿ ಶೇರ್ ಮಾಡಬೇಕು. ಈ ರೀತಿ ಒಂದು ಬಾರಿ ಮಾಡಿದರೆ ₹ 20 ಸಂಪಾದಿಸಬಹುದೆಂದು ಕಂಪನಿ ಹೇಳುತ್ತಿತ್ತು. ಹಣವನ್ನು ಆ್ಯಪ್‌ನಲ್ಲಿರುವ ಖಾತೆಗೆ ಜಮೆ ಮಾಡುವುದಾಗಿಯೂ ತಿಳಿಸುತ್ತಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗಳಿಸಿದ ಹಣ ಪಡೆಯಬೇಕಾದರೆ ಸದಸ್ಯತ್ವ ಪಡೆಯುವುದು ಕಡ್ಡಾಯವಾಗಿತ್ತು. ಸದಸ್ಯತ್ವಕ್ಕೆಂದು ಆರೋಪಿಗಳು ₹ 30 ಸಾವಿರ, ₹ 50 ಸಾವಿರ ಹಾಗೂ ₹ 80 ಸಾವಿರ ಮೊತ್ತದ ಮೂರು ಯೋಜನೆಗಳನ್ನು ರೂಪಿಸಿದ್ದರು. ಆರೋಪಿಗಳ ಮಾತು ನಂಬಿದ್ದ ನೂರಾರು ಗ್ರಾಹಕರು, ಸದಸ್ಯತ್ವದ ಹಣ ಪಾವತಿಸಿ ಆ್ಯಪ್ ಬಳಸಲಾರಂಭಿಸಿದ್ದರು.’

‘ಮನೆಯಿಂದಲೇ ಕೆಲಸ ಮಾಡಿ’ ಎಂಬ ಘೋಷಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ಜಾಹೀರಾತು ನೀಡುತ್ತಿದ್ದರು. ಇದನ್ನು ನಂಬಿ ಹಲವರು ಆರೋಪಿಗಳನ್ನು ಸಂಪರ್ಕಿಸಿದ್ದರು. ಅವರೆಲ್ಲರಿಗೂ ಇದೀಗ ವಂಚನೆಯಾಗಿದೆ. ಕೆಲ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

‘ತನ್ನ ಹೆಸರು ಯಡಿಯೂರಪ್ಪನೆಂದು ಹೇಳುತ್ತಿದ್ದ’

‘ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ಹಲವು ದಿನಗಳಿಂದ ತನಿಖೆ ನಡೆಸುತ್ತಿತ್ತು. ಗ್ರಾಹಕರ ಸೋಗಿನಲ್ಲೂ ಕೆಲ ಆರೋಪಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣದಲ್ಲಿ ಬಂಧಿಸಲಾಗಿರುವ ಅಬ್ದುಲ್ ಎಂಬಾತ, ತನ್ನ ಹೆಸರು ಯಡಿಯೂರಪ್ಪ ಎಂಬುದಾಗಿ ಹೇಳಿಕೊಳ್ಳುತ್ತಿದ್ದ. ಪೊಲೀಸರ ವಿಚಾರಣೆ ವೇಳೆಯೂ ಅದೇ ಹೆಸರಿನಿಂದ ಕರೆಯುವಂತೆ ಒತ್ತಾಯಿಸುತ್ತಿದ್ದ. ಬಹುತೇಕ ಆರೋಪಿಗಳು, ತಮ್ಮ ನೈಜ ಹೆಸರು ಬಚ್ಚಿಟ್ಟಿದ್ದರು. ಗಣ್ಯ ವ್ಯಕ್ತಿಗಳ ಹೆಸರೇ ತಮ್ಮ ಹೆಸರೆಂದು ವಾದಿಸುತ್ತಿದ್ದರು’ ಎಂದೂ ತಿಳಿಸಿದರು.

‘ಚೀನಾ ಪ್ರಜೆಗಳಿಂದ ಅಭಿವೃದ್ಧಿ’

‘ಚೀನಾ ವ್ಯಕ್ತಿಗಳ ಮೂಲಕ ‘ಕೀಪ್ ಶೇರರ್’ ಆ್ಯಪ್‌ ಅಭಿವೃದ್ಧಿಪಡಿಸಿದ್ದ ಆರೋಪಿಗಳು, ತಾವೇ ಅದರ ನಿರ್ವಹಣೆ ಮಾಡುತ್ತಿದ್ದರು. ಇದುವರೆಗೂ ಅವರು 1000ಕ್ಕೂ ಹೆಚ್ಚು ಜನರಿಂದ ₹ 25 ಕೋಟಿ ಸಂಗ್ರಹಿಸಿ ವಂಚಿಸಿರುವ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿದರು.

‘ಜನರಿಂದ ಸಂಗ್ರಹಿಸಿದ್ದ ಹಣವನ್ನು ಆರೋಪಿಗಳು, ಕ್ರಿಪ್ಟೊ ಕರೆನ್ಸಿ ಆಗಿ ಪರಿವರ್ತಿಸುತ್ತಿದ್ದರು. ಈ ಮೂಲಕ ಭಾರತದ ಆರ್ಥಿಕ ವ್ಯವಸ್ಥೆಗೂ ಧಕ್ಕೆ ತರುತ್ತಿದ್ದರು. ಕೃತ್ಯದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ವಿಶೇಷ ತಂಡ ರಚಿಸಲಾಗಿತ್ತು. ದೆಹಲಿ, ಹಿಮಾಚಲ ಪ್ರದೇಶ, ಮೈಸೂರು ಹಾಗೂ ಹಲವೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT