ಮಂಗಳವಾರ, ಜನವರಿ 21, 2020
28 °C
ಬೆನ್ನಿಗಾನಹಳ್ಳಿ ಅಕ್ರಮ ಡಿನೋಟಿಫೈ ಪ್ರಕರಣ

ಹೇಳಿಕೆ ಸಲ್ಲಿಸಲು ಅರ್ಜಿದಾರರಿಗೆ ‘ಸುಪ್ರೀಂ’ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದಾರೆ ಎನ್ನಲಾದ ಬೆನ್ನಿಗಾನಹಳ್ಳಿ ಜಮೀನು ಅಕ್ರಮ ಡಿನೋಟಿಫೈ ಪ್ರಕರಣ ಕುರಿತಂತೆ ತನ್ನ ಪಾತ್ರವೇನು ಎಂಬ ಬಗ್ಗೆ ಹೇಳಿಕೆ ಸಲ್ಲಿಸುವಂತೆ ಸಮಾಜ ಪರಿವರ್ತನ ಸಮುದಾಯಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಸೂಚಿಸಿದೆ.

ಬೇರೆಯವರು ಸಲ್ಲಿಸಿರುವ ದೂರುಗಳನ್ನು ಆಧರಿಸಿ ಪ್ರಕರಣದ ಮರು ವಿಚಾರಣೆ ಕೋರಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿತು.

‘ಸದರಿ ಪ್ರಕರಣದಲ್ಲಿ ನಿಮ್ಮ ಪಾತ್ರವೇನು ಎಂಬುದು ನಮಗೆ ಮನವರಿಕೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀವು ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದಲ್ಲಿ ಅದರ ಪ್ರತಿಯನ್ನೂ ಎರಡು ವಾರಗಳಲ್ಲಿ ಹೇಳಿಕೆಯ ಜೊತೆ ಲಗತ್ತಿಸಿ’ ಎಂದು ಅರ್ಜಿದಾರ ಎಸ್.ಆರ್. ಹಿರೇಮಠ ಪರ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಪೀಠ ಸೂಚಿಸಿತು.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣದಲ್ಲಿ ಇಬ್ಬರು ಮುಖಂಡರು ಭಾಗಿಯಾಗಿದ್ದರಿಂದ ಅವರ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಆಧರಿಸಿ ವಿಚಾರಣೆ ನಡೆಸುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಪ್ರಶಾಂತ್‌ ಭೂಷಣ್‌ ಕೋರಿದರು.

ಅಪರಾಧ ಪ್ರಕರಣದ ವಿಚಾರಣೆಯ ವೇಳೆ ಅರ್ಜಿದಾರರು ಭಾಗಿಯಾಗಿರಲಿಲ್ಲ ಎಂದು ಆರೋಪಿಗಳ ಪರ ವಕೀಲರಾದ ಮುಕುಲ್‌ ರೋಹಟ್ಗಿ ಹಾಗೂ ಪಿ.ಎಸ್‌. ನರಸಿಂಹ ಅವರು ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಹಾಗೂ ಸೂರ್ಯಕಾಂತ್‌ ಅವರನ್ನು ಒಳಗೊಂಡಿರುವ ನ್ಯಾಯಪೀಠಕ್ಕೆ ವಿವರಿಸಿದರು.

ಬೆಂಗಳೂರಿನ ಕೆ.ಆರ್.ಪುರ ಹೋಬಳಿಯ ಬೆನ್ನಿಗಾನಹಳ್ಳಿ ಬಳಿ 4.20 ಎಕರೆ ಜಮೀನನ್ನು 2010ರಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂಬ ಈ ಪ್ರಕರಣದಲ್ಲಿ ಇಬ್ಬರೂ ಮುಖಂಡರು ಸೇರಿದಂತೆ ಉಪ ನೋಂದಣಾಧಿಕಾರಿ ಆಗಿದ್ದ ಹಮೀದ್‌ ಅಲಿ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಅನ್ನು ರಾಜ್ಯ ಹೈಕೋರ್ಟ್ 2015ರಲ್ಲಿ ರದ್ದುಪಡಿಸಿತ್ತು.

ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ರಾಮನಗರದ ಸಾಮಾಜಿಕ ಕಾರ್ಯಕರ್ತ ಕಬ್ಬಾಳೆಗೌಡ ಅವರು ಹಿಂದೆ ಪಡೆದಿದ್ದರಿಂದ ಕಳೆದ ಫೆಬ್ರುವರಿ 21ರಂದು ಸುಪ್ರೀಂ ಕೋರ್ಟ್‌ ಪ್ರಕರಣವನ್ನು ವಜಾಗೊಳಿಸಿತ್ತು. ಇದಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರೂ ತಮ್ಮ ಅರ್ಜಿ ಹಿಂದೆ ಪಡೆದಿದ್ದರು.

‘ಗಂಭೀರವಾದ ಈ ಅಪರಾಧ ಪ್ರಕರಣದ ವಿಚಾರಣೆ ಪುನರಾರಂಭಿಸಬೇಕು’ ಎಂದು ಕೋರಿ ಎಸ್‌.ಆರ್‌. ಹಿರೇಮಠ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯ ಪ್ರವೇಶ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠದ ಸೂಚನೆಯ ಮೇರೆಗೆ ಹೊಸದಾಗಿ ಮೇಲ್ಮನವಿ ಸಲ್ಲಿಸಿದ್ದರಿಂದ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು