ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಮಾತರಂ ಘೋಷಣೆ ಜಾಗದಲ್ಲಿ ಜೈ ಶ್ರೀರಾಮ್: ಹಿರಿಯ ಪತ್ರಕರ್ತ ತರುಣ್ ವಿಜಯ್

Last Updated 28 ಜುಲೈ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಬದಲಾದ ಸನ್ನಿವೇಶದಲ್ಲಿ ಜೈ ಶ್ರೀರಾಮ್ ಘೋಷಣೆ ನಕಲಿ ರಾಷ್ಟ್ರೀಯವಾದಿಗಳಿಗೆ ನಡುಕ ಹುಟ್ಟಿಸುತ್ತಿದೆ’ ಎಂದು ಹಿರಿಯ ಪತ್ರಕರ್ತ ತರುಣ್ ವಿಜಯ್ ತಿಳಿಸಿದರು.

ಸ್ವದೇಶಿ ಸಂಘ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯತಾವಾದಿ ಶಕ್ತಿಗಳ ಹೋರಾಟ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಮೊಳಗಿದ ವಂದೇ ಮಾತರಂ ಘೋಷಣೆ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಿತು. ಈ ದೇಶದಿಂದ ಅವರು ಕಾಲು ಕೀಳುವಂತೆ ಮಾಡಿತು. ಇದೀಗ ವಂದೇ ಮಾತರಂ ಘೋಷಣೆಯ ಸ್ಥಾನವನ್ನು ಜೈ ಶ್ರೀರಾಮ್ ಅಲಂಕರಿಸಿದ್ದು, ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುತ್ತಿದೆ’ ಎಂದು ತಿಳಿಸಿದರು.

‘ನೆಹರೂ ಸಂಪುಟದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಮಂತ್ರಿಯಾಗಿದ್ದರು. ನೆಹರೂ ಅವರು ತೆಗೆದುಕೊಂಡ ನಿರ್ಧಾರ ರಾಷ್ಟ್ರೀಯತೆ ನೆಲೆಗಟ್ಟಿನಲ್ಲಿ ಇಲ್ಲ ಎಂಬ ಕಾರಣಕ್ಕೆ ಸಂಪುಟದಿಂದ ಹೊರಬಂದು, ಭಾರತೀಯ ಜನಸಂಘ ಸ್ಥಾಪಿಸಿದರು’ ಎಂದರು.

‘ನಿಷ್ಕಲ್ಮಶ ಚಾರಿತ್ರ್ಯ ಹೊಂದಿದ್ದ ಮುಖರ್ಜಿ ಅವರಿಗೆ ಭಾರತವನ್ನು ಹೇಗೆ ಕಟ್ಟಬೇಕು ಎಂಬುದರ ಸ್ಪಷ್ಟ ಕಲ್ಪನೆ ಇತ್ತು. ಇದರಿಂದಾಗಿಯೇ ಅವರು ಬಿಟ್ಟುಹೋದ ವಿಚಾರಧಾರೆ ಹಾಗೂ ರಾಜಕೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದೆ’ ಎಂದು ತಿಳಿಸಿದರು.

ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ‘ನಿಸರ್ಗ, ಆಧ್ಯಾತ್ಮಿಕತೆ ಹಾಗೂ ರಾಷ್ಟ್ರೀಯತೆಗೆ ಪ್ರಥಮ ಆದ್ಯತೆ ನೀಡಬೇಕು. ನಾವು ವಿಶ್ವವೇ ಒಂದು ಕುಟುಂಬ ಎಂಬ ಪರಿಕಲ್ಪನೆಯಡಿ ಜೀವಿಸುತ್ತಿದ್ದೇವೆ. ಯಾರಿಗೂ ಕೆಡುಕನ್ನು ಬಯಸಬಾರದು. ಶ್ಯಾಮ ಪ್ರಸಾದ್ ಮುಖರ್ಜಿ ಅವರು ರಾಷ್ಟ್ರೀಯತೆ ವಿಚಾರವಾಗಿಯೇ ರಾಜೀನಾಮೆ ನೀಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT