ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಕಥೆ ಬರವಣಿಗೆ ಭಾವುಕರನ್ನಾಗಿಸುತ್ತದೆ: ಟಿ.ಎನ್. ಸೀತಾರಾಮ್ ಅಭಿಮತ

ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಅಭಿಮತ *‘ನೆನಪಿನ ಪುಟಗಳು’ ಆತ್ಮಕಥೆ ಬಿಡುಗಡೆ
Published 10 ಡಿಸೆಂಬರ್ 2023, 20:22 IST
Last Updated 10 ಡಿಸೆಂಬರ್ 2023, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ಆತ್ಮಕಥೆ ಬರವಣಿಗೆ ವ್ಯಕ್ತಿಯನ್ನು ಭಾವುಕನನ್ನಾಗಿಸುತ್ತದೆ. ಎಚ್ಚರ ತಪ್ಪಿದರೆ ಸುಳ್ಳುಗಳನ್ನು ಹೇಳುವಂತೆಯೂ ಮಾಡುತ್ತದೆ’ ಎಂದು ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಹೇಳಿದರು. 

ಸಾವಣ್ಣ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರ ಆತ್ಮಕಥೆಯಾದ ‘ನೆನಪಿನ ಪುಟಗಳು’ ಪುಸ್ತಕ ಬಿಡುಗಡೆಯಾಯಿತು. ಈ ವೇಳೆ ಮಾತನಾಡಿದ ಅವರು, ‘ಆತ್ಮಕಥೆಯಲ್ಲಿ ಸತ್ಯದಿಂದ ದೂರ ಹೋಗಲು ಪ್ರಯತ್ನ ಮಾಡುತ್ತಾರೆ. ಬದುಕಿನ ನೆನಪುಗಳನ್ನು ಹಂಚಿಕೊಂಡಾಗ ಒಂದು ಬಗೆಯ ಒಳಗಿನ ಅಸ್ಪಷ್ಟ ಸರಳುಗಳಿಂದ ಮುಕ್ತಿ ಪಡೆಯುತ್ತಾ, ನಿರಾಳವಾಗುವ ಸುಖವನ್ನು ಅನೇಕ ಬಾರಿ ಕಂಡಿದ್ದೇನೆ. ನೆನಪುಗಳ ಬದುಕನ್ನು ಮತ್ತೊಮ್ಮೆ ಬದುಕುವ ಸುಂದರ ಅನುಭವವನ್ನು ಆತ್ಮಕಥೆ ಕೊಡುತ್ತದೆ. ಅನೇಕ ಬಗೆಯ ಧರ್ಮಸಂಕಟಗಳಿಂದಾಗಿ ಬದುಕಿನ ಎಲ್ಲ ನೆನಪುಗಳನ್ನು ಹೇಳಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು. 

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸೀತಾರಾಮ್ ಅವರು 40 ವರ್ಷಗಳಿಂದ ಪರಿಚಯ. ಬದುಕಿನ ಎಲ್ಲ ಸ್ತರದ ಅನುಭವವನ್ನು ಅವರು ಪಡೆದಿದ್ದಾರೆ. 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರಕ್ಕೆ ಜನತಾ ಪಕ್ಷದಿಂದ ಟಿ.ಎನ್. ಸೀತಾರಾಮ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರ ಬದಲು ‘ಮುಖ್ಯಮಂತ್ರಿ’ ಚಂದ್ರು ಅವರಿಗೆ ಟಿಕೆಟ್ ದೊರೆಯಿತು. ಒಂದು ವೇಳೆ ಸೀತಾರಾಮ್ ಅವರಿಗೆ ಟಿಕೆಟ್ ಸಿಕ್ಕಿದ್ದರೆ ಅವರು ಜಯಿಸಿ, ಮಂತ್ರಿಯಾಗುವ ಸಾಧ್ಯತೆಯಿತ್ತು. ಅವರು ರಾಮಕೃಷ್ಣ ಹೆಗಡೆ ಅವರಿಗೆ ಆಪ್ತರಾಗಿದ್ದರು. ಆಗ ನಾನು ಮಂತ್ರಿಯಾಗುತ್ತಿದ್ದೆನೋ ಇಲ್ಲವೋ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕಲಾವಿದ ‘ಮುಖ್ಯಮಂತ್ರಿ’ ಚಂದ್ರು, ‘1985ರ ವಿಧಾನಸಭೆ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರಕ್ಕೆ ಸೀತಾರಾಮ್ ಸೇರಿ ಐವರ ಮಧ್ಯೆ ಟಿಕೆಟ್‌ಗೆ ಪೈಪೋಟಿ ಉಂಟಾಗಿದ್ದರಿಂದ ಅಚ್ಚರಿ ರೀತಿಯಲ್ಲಿ ನನಗೆ ಟಿಕೆಟ್ ದೊರೆಯಿತು. ಆ ಚುನಾವಣೆಯಲ್ಲಿ ಜಯಿಸುವ ಮೂಲಕ ನಾನು ಅನಿರೀಕ್ಷಿತ ರಾಜಕಾರಣಿಯಾದೆ. ಸೀತಾರಾಮ್ ಸ್ನೇಹಜೀವಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಪುಸ್ತಕದ ಬಗ್ಗೆ ಮಾತನಾಡಿದ ಕನ್ನಡಪ್ರಭದ ಪುರವಣಿ ವಿಭಾಗದ ಮುಖ್ಯಸ್ಥ ಜೋಗಿ (ಗಿರೀಶ್ ರಾವ್ ಹತ್ವಾರ್), ‘ಈ ಪುಸ್ತಕ ನೆನಪುಗಳ ಮೆರವಣಿಗೆಯಾಗಿದೆ. ಸೀತಾರಾಮ್ ಅವರ ಕಥೆ ಕಾಲದ ಕಥೆಯಾಗಿದೆ’ ಎಂದು ಹೇಳಿದರು. 

ಪುಸ್ತಕ ಪರಿಚಯ ಪುಸ್ತಕ: ‘ನೆನಪಿನ ಪುಟಗಳು’  ಲೇಖಕ: ಟಿ.ಎನ್. ಸೀತಾರಾಮ್ ಪುಟಗಳು: 392 ಬೆಲೆ: ₹ 550 ಪ್ರಕಾಶನ: ಸಾವಣ್ಣ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT