ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿದ್ವಾಯಿ: ನಿರ್ಮಾಣವಾಗದ ತಪೋವನ, ಚಿಟ್ಟೆ ಉದ್ಯಾನ ವಿಸ್ತರಣೆ ಯೋಜನೆ ನನೆಗುದಿಗೆ

Last Updated 8 ಫೆಬ್ರುವರಿ 2023, 21:31 IST
ಅಕ್ಷರ ಗಾತ್ರ

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗಬೇಕಿದ್ದ ತಪೋವನ ಹಾಗೂ ಚಿಟ್ಟೆ ಉದ್ಯಾನ ವಿಸ್ತರಣೆ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಯ ಆವರಣದಲ್ಲಿ ಆಹ್ಲಾದಕರ ವಾತಾವರಣ ನಿರ್ಮಿಸುವ ಸದುದ್ದೇಶ ಈ ಯೋಜನೆಯ ಹಿಂದಿತ್ತು. ಸಂಸ್ಥೆಯು ಇಂಡಸ್‌ ಹರ್ಬ್ಸ್‌ ಸಹಯೋಗದಲ್ಲಿ ಶಾಂತಿಧಾಮದ ಬಳಿ, ಒಂದು ಎಕರೆ ಪ್ರದೇಶದಲ್ಲಿ ತಪೋವನ ನಿರ್ಮಿಸಲು ಕಳೆದ ವರ್ಷ ಕಾರ್ಯಯೋಜನೆ ರೂಪಿಸಿತ್ತು. ವರ್ಷ ಕಳೆದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಈಗ ಇಂಡಸ್‌ ಹರ್ಬ್ಸ್‌ ಸಂಸ್ಥೆಯು ಹಿಂದೆ ಸರಿದಿದ್ದರಿಂದ ನಿರ್ಮಾಣ ಕಾಮಗಾರಿ ನಡೆದಿಲ್ಲ.

23 ಎಕರೆ ಪ್ರದೇಶದಲ್ಲಿರುವ ಕಿದ್ವಾಯಿ ಆಸ್ಪತ್ರೆಗೆ ರಾಜ್ಯದ ವಿವಿಧೆಡೆಯಿಂದ ಪ್ರತಿನಿತ್ಯ ಸರಾಸರಿ 1,200 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅದೇ ರೀತಿ, 1,300 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಸ್ಥೆ ಆವರಣದಲ್ಲಿರುವ ಶಾಂತಿಧಾಮದ ಬಳಿಯ ಐದು ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಅದಕ್ಕೆ ಹೊಂದಿಕೊಂಡಿರುವ ಚಿಟ್ಟೆ ಉದ್ಯಾನವನ್ನು ವಿಸ್ತರಿಸಿ, ಚಿಟ್ಟೆಗಳನ್ನು ಆಕರ್ಷಿಸುವ ಗಿಡಗಳನ್ನು ಈ ಪ್ರದೇಶದಲ್ಲಿ ಬೆಳೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಗಿಡಗಳ ನೆಡುವಿಕೆ ಸಾಕಾರಗೊಂಡಿಲ್ಲ.

‘ಸಂಸ್ಥೆಯಲ್ಲಿ ನಿರ್ಮಿಸಿರುವ ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದೆಯೇ ಸೊರಗಿದೆ. ರೋಗಿಗಳು ಹಾಗೂ ಅವರ ಸಂಬಂಧಿಗಳು ಉದ್ಯಾನದಲ್ಲಿ ಹೆಜ್ಜೆ ಹಾಕಲು ಅನುಕೂಲವಾಗುವಂತೆ ಪಾದಚಾರಿ ಪಥವನ್ನು ಈವರೆಗೂ ನಿರ್ಮಿಸಿಲ್ಲ’ ಎಂದು ಸಂಸ್ಥೆಯ ವೈದ್ಯಕೀಯ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಅವಧಿ ಮುಕ್ತಾಯ:‘ನನ್ನ ಅವಧಿಯಲ್ಲಿ ತಪೋವನ ನಿರ್ಮಾಣ ಹಾಗೂ ಚಿಟ್ಟೆ ಉದ್ಯಾನ ವಿಸ್ತರಣೆ ಸಂಬಂಧ ಇಂಡಸ್‌ ಹರ್ಬ್ಸ್‌ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಾರಂಜಿ, ಪಾದಚಾರಿ ಮಾರ್ಗ ನಿರ್ಮಾಣ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು. ಈ ಕಾರ್ಯಕ್ಕೆ ನೆರವು ನೀಡುವುದಾಗಿ ದಾನಿಗಳು ಭರವಸೆ ನೀಡಿದ್ದರು. ಇದನ್ನು ಕಾರ್ಯಗತ ಮಾಡಬೇಕು ಎನ್ನುವ ವೇಳೆ ಅಧಿಕಾರವಧಿ ಪೂರ್ಣಗೊಂಡಿತು’ ಎಂದು ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.

‘ಸಂಸ್ಥೆಯ ಆವರಣದ ಎಲ್ಲೆಡೆ ಹೂವು ಹಾಗೂ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಇದರಿಂದ ವಾತಾವರಣದಲ್ಲಿನ ತಾಪಮಾನ ಕೂಡ ಇಳಿಕೆಯಾಗಿ, ಶುದ್ಧಗಾಳಿ ದೊರೆಯುತ್ತಿದೆ. ಅಲ್ಲಿನ ಗಿಡ–ಮರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದು ಹೇಳಿದರು.

ಉತ್ತಮ ವಾತಾವರಣ ನಿರ್ಮಾಣ’

‘ಕ್ಯಾನ್ಸರ್ ರೋಗಿಗಳು ಮಾನಸಿಕವಾಗಿ ಕುಗ್ಗಿ, ಆತ್ಮಸ್ಥೈರ್ಯ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ, ಆಸ್ಪತ್ರೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಉದ್ಯಾನ ನಿರ್ಮಿಸಲಾಗಿದೆ. ಲಕ್ಷ್ಮಣಫಲ, ರಾಮಫಲ, ಸೀತಾಫಲ, ಬಕುಳ, ಪುನ್ನಾಗ, ರುದ್ರಾಕ್ಷಿ ಸೇರಿ ವಿವಿಧ ತಳಿಯ ಗಿಡಗಳು ಹಾಗೂ ಔಷಧ ಸಸ್ಯಗಳನ್ನು ಬೆಳೆಸಲಾಗಿದೆ. ಅದೇ ರೀತಿ, ಕ್ಯಾನ್ಸರ್ ಪೀಡಿತ ಮಕ್ಕಳು ನೋವು ಮರೆತು, ಎಲ್ಲರೊಂದಿಗೆ ಆಟವಾಡಬೇಕು ಎಂಬ ಉದ್ದೇಶದಿಂದ ಚಿಟ್ಟೆ ಉದ್ಯಾನವನ್ನು ಶಾಂತಿಧಾಮದ ಬಳಿಯೇ ನಿರ್ಮಿಸಲಾಗಿದೆ. ಅದನ್ನು ವಿಸ್ತರಿಸಬೇಕು’ ಎಂದು ಡಾ.ಸಿ. ರಾಮಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT