ಸೋಮವಾರ, ಜೂನ್ 21, 2021
23 °C

‘ಸುಳ್ಳು ಸುದ್ಧಿಗೆ ತಂತ್ರಜ್ಞಾನ ನೆರವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ತಂತ್ರಜ್ಞಾನಗಳ ನೆರವಿನಿಂದ ಕ್ಷಣಾರ್ಧದಲ್ಲಿ ಸುಳ್ಳು ಸುದ್ಧಿಗಳು ಜಗತ್ತಿನಾದ್ಯಂತ ವ್ಯಾಪಿಸಿಕೊಳ್ಳುತ್ತಿವೆ’ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯುರೊದ (ಪಿಐಬಿ) ವಾಸ್ತವಾಂಶ ತಂಡದ ಮಹಾನಿರ್ದೇಶಕಿ ವಸುಧಾ ಗುಪ್ತ ಬೇಸರ ವ್ಯಕ್ತಪಡಿಸಿದರು. 

ಪಿಐಬಿಯ ಬೆಂಗಳೂರು ಕೇಂದ್ರವು ಮಂಗಳವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ‘ಸುಳ್ಳು ಸುದ್ಧಿ ಮತ್ತು ಅದರ ನಿಜಾಂಶ’ ಎಂಬ ಬಗ್ಗೆ ಅವರು ಮಾತನಾಡಿದರು.

‘ಅರ್ಥ ಮಾಡಿಕೊಳ್ಳುವಿಕೆ, ಗ್ರಹಿಸುವಿಕೆಯಲ್ಲಿನ ವೈಫಲ್ಯದಿಂದ ಕೂಡ ತಪ್ಪು ಮಾಹಿತಿಗಳನ್ನು ಮಾಧ್ಯಮಗಳು ಬಿತ್ತರಿಸುವ ಅಥವಾ ಪ್ರಕಟಿಸುವ ಸಾಧ್ಯತೆ ಇರುತ್ತದೆ. ಅತಿಯಾದ ಕೆಲಸದ ಒತ್ತಡ, ಸ್ಪರ್ಧೆಯಿಂದ ಕೂಡ ಸತ್ಯಾಸತ್ಯತೆಯ ಪರಿಶೀಲನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿಗಳನ್ನು ಸತ್ಯವೆಂದು ನಂಬಿ, ಆ ವಿಷಯವನ್ನು ಪ್ರಚಾರ ಮಾಡುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಅತ್ಯಂತ ವೇಗವಾಗಿ ಬೆಳವಣಿಗೆ ಆಗುತ್ತಿರುವ ಈ ಅವಧಿಯಲ್ಲಿ ಸುಳ್ಳು ಸುದ್ದಿಗಳು ಎಲ್ಲೆ ಮೀರಿ ವ್ಯಾಪಿಸಿಕೊಳ್ಳುತ್ತಿವೆ. ಹಾಗಾಗಿ ಯಾವುದೇ ಸುದ್ಧಿಯನ್ನು ಪ್ರಕಟಿಸುವ ಮೊದಲು ಸೂಕ್ತವಾಗಿ ಪರಾಮರ್ಶಿಸಿ, ಸತ್ಯಾಸತ್ಯತೆ ತಿಳಿದುಕೊಳ್ಳಬೇಕು’ ಎಂದರು. 

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಕೆ. ರವಿ, ‘ಈ ಹಿಂದೆ ಮಾಧ್ಯಮ ಕ್ಷೇತ್ರದಲ್ಲಿ ಲಾಭ–ನಷ್ಟದ ಲೆಕ್ಕಾಚಾರ ಇರಲಿಲ್ಲ. ಸಾಮಾಜಿಕ ಸೇವೆ ಎಂದೇ ಪರಿಗಣಿಸಲಾಗಿತ್ತು. ಆದರೆ, ಖಾಸಗೀಕರಣ, ವಾಣಿಜ್ಯೀಕರಣ ಹಾಗೂ ರಾಜಕೀಯ ಪ್ರೇರಿತ ಮಾಲೀಕತ್ವದಿಂದ ಮಾಧ್ಯಮದ ಸ್ವರೂಪ ಸಂಪೂರ್ಣ ಬದಲಾಗಿದೆ. ಒಮ್ಮೆ ವಿಶ್ವಾಸಾರ್ಹತೆ ಕಳೆದುಕೊಂಡರೆ ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು’ ಎಂದರು.

ಹಿರಿಯ ಪತ್ರಕರ್ತ ರವಿ ಹೆಗಡೆ, ‘ಮುದ್ರಣ ಮಾಧ್ಯಮದಲ್ಲಿ ಸುದ್ದಿಗಳನ್ನು ಪರಿಶೀಲಿಸಿ, ಪ್ರಕಟಿಸಲಾಗುತ್ತದೆ. ಹೀಗಾಗಿ, ಅಲ್ಲಿ ಸುಳ್ಳು ಸುದ್ದಿಗೆ ಕಡಿವಾಣವಿದೆ. ಆದರೆ, ಡಿಜಿಟಲ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚುತ್ತಿದ್ದು, ಅಲ್ಲಿ ಪ್ರಕಟಿಸಿದ ಸುದ್ದಿಯನ್ನು ಹಲವರು ಸುಲಭವಾಗಿ ಕಾಪಿ ಮಾಡಿಕೊಂಡು ವಿವಿಧೆಡೆ ಹರಿಬಿಡುತ್ತಿದ್ದಾರೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು