ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶುಚಿ’ ಯೋಜನೆಗೆ ಈಗ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸದಿರುವುದೇ ಅಡ್ಡಿ

ನಾಲ್ಕು ವರ್ಷಗಳಿಂದ ಯೋಜನೆ ಸ್ಥಗಿತ: ಹೆಣ್ಣು ಮಕ್ಕಳಿಗೆ ದೊರೆಯದ ಸ್ಯಾನಿಟರಿ ನ್ಯಾಪ್‌ಕಿನ್‌ಗಳು
Last Updated 6 ಜನವರಿ 2023, 21:41 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಆರೋಗ್ಯ ಇಲಾಖೆಯ ‘ಶುಚಿ’ ಯೋಜನೆಗೆ ಈಗ ಟೆಂಡರ್‌ ಪ್ರಕ್ರಿಯೆಯೇ ಅಂತಿಮಗೊಳಿಸದಿರುವುದೇ ಅಡ್ಡಿಯಾಗಿದೆ. ಹೀಗಾಗಿ, ಈ ಶೈಕ್ಷಣಿಕ ವರ್ಷವೂ ಈ ಯೋಜನೆಯ ಪ್ರಯೋಜನ ಹೆಣ್ಣುಮಕ್ಕಳಿಗೆ ದೊರೆಯುವ ಸಾಧ್ಯತೆ ಕ್ಷೀಣ.

2021ರ ಸೆಪ್ಟೆಂಬರ್‌ನಿಂದ 2022ರ ಜುಲೈವರೆಗೆ ಮೂರು ಬಾರಿ ಟೆಂಡರ್ ಕರೆಯಲಾಗಿದೆ. ವಿವಿಧ ಕಾರಣ ನೀಡಿ ಎರಡು ಟೆಂಡರ್‌ಗಳನ್ನು ರದ್ದು ಮಾಡಲಾಗಿದೆ. ಮೂರನೇ ಬಾರಿ ಟೆಂಡರ್ ಪ್ರಕ್ರಿಯೆ ಮುಗಿಸಿದ್ದು, ಅತಿ ಕಡಿಮೆ ದರ (ಪ್ರತಿಪ್ಯಾಡ್‌ಗೆ ₹2.55) ನಮೂದಿಸಿದ ಬಿಡ್ಡುದಾರರನ್ನು ಆಯ್ಕೆ ಮಾಡಲಾಗಿದೆ. ಆದರೆ, ಕಾರ್ಯಾದೇಶ ನೀಡಬೇಕಾದರೆ ಭೇಟಿಯಾಗುವಂತೆ ಸೂಚಿಸಿ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದೂ ಗುತ್ತಿಗೆದಾರರು ದೂರಿದ್ದಾರೆ.

ಸರ್ಕಾರಿ, ಅನುದಾನಿತ ಮತ್ತು ಸರ್ಕಾರಿ ವಸತಿ ಶಾಲಾ–ಕಾಲೇಜುಗಳ ಹದಿಹರೆಯದ ಎಲ್ಲ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸುವುದು ‘ಶುಚಿ’ ಯೋಜನೆಯ ಉದ್ದೇಶ. ರಾಜ್ಯದಲ್ಲಿ ಅಂದಾಜು 19 ಲಕ್ಷ
ಹೆಣ್ಣುಮಕ್ಕಳನ್ನು ಈ ಯೋಜನೆ ಅಡಿಯಲ್ಲಿ ಗುರುತಿಸಲಾಗಿದೆ.

ಸ್ಥಗಿತಗೊಳಿಸಲಾಗಿದ್ದ ಈ ಯೋಜನೆಗೆ ಮರುಚಾಲನೆ ನೀಡಲು 2021–22 ನೇ ಸಾಲಿನ
ಬಜೆಟ್‌ನಲ್ಲಿ ₹47 ಕೋಟಿ ಮೀಸಲಿರಿಸಿ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ (ಕೆಎಸ್‌ಎಂಎಸ್‌
ಸಿಎಲ್‌) ಅನುಷ್ಠಾನದ ಹೊಣೆ ವಹಿಸಲಾಗಿತ್ತು.

ಪ್ರತಿ ಯೂನಿಟ್‌ಗೆ ಅಂದಾಜು ದರ ₹21.50ರಂತೆ ಒಟ್ಟು 2.18 ಕೋಟಿ ಯೂನಿಟ್‌ (1ಯೂನಿಟ್‌ನಲ್ಲಿ 10 ಪ್ಯಾಡ್‌ಗಳು) ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಖರೀದಿಸಲು ಟೆಂಡರ್‌ ಕರೆಯಲಾಗಿತ್ತು. ಆದರೆ, ನಿಗಮವು ಇದುವರೆಗೆ ಕೇವಲ ಟೆಂಡರ್‌ ಪ್ರಕ್ರಿಯೆಯಲ್ಲಿ ಸಮಯ ವ್ಯರ್ಥ ಮಾಡಿದೆ.

ಮೂರು ಬಾರಿ ಟೆಂಡರ್‌: ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಖರೀದಿಗೆ ಇದುವರೆಗೆ ಮೂರು ಬಾರಿ ಟೆಂಡರ್‌ ಕರೆಯಲಾಗಿದೆ. ಮೊದಲ ಬಾರಿ 2021ರ ಸೆಪ್ಟೆಂಬರ್‌ 7ರಂದು ಟೆಂಡರ್ ಕರೆಯಲಾಗಿತ್ತು. ಬಿಡ್‌ ಮಾಡಿದ್ದ ಸ್ಯಾನಿಟರಿ ಪ್ಯಾಡ್‌ಗಳ ಮಾದರಿಗಳನ್ನು ಚೆನ್ನೈನ ‘ಟ್ರಸ್ಟ್ ಇನ್ ಅನಾಲಿಟಿಕಲ್‌ ಸೊಲ್ಯುಷನ್ಸ್‌’ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಮಾದರಿಗಳು ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿಲ್ಲ ಎಂದು ತಾಂತ್ರಿಕ ಸಮಿತಿ ತಿರಸ್ಕರಿಸಿತು. ಪ್ಯಾಡ್‌ಗಳು ಕೇವಲ 0.2 ಮಿಲಿ ಮೀಟರ್‌ ಕಡಿಮೆ ಉದ್ದ ಇದ್ದರೂ ತಿರಸ್ಕರಿಸಿ, ಇಡೀ ಟೆಂಡರ್‌ ಪ‍್ರಕ್ರಿಯೆಯನ್ನು ರದ್ದುಗೊಳಿಸಲಾಗಿತ್ತು.

ನಂತರ, 2022ರ ಫೆಬ್ರುವರಿಯಲ್ಲಿ ಮತ್ತೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಲ್‌ಎಲ್‌ ಲೈಫ್‌ ಕೇರ್‌ ಆಯ್ಕೆ ಮಾಡಲಾಗಿತ್ತು. ಆದರೆ, ಉಕ್ರೇನ್‌–ರಷ್ಯಾ ಯುದ್ಧದ ಕಾರಣದಿಂದ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿವೆ. ಇದರಿಂದ, ದರ ವ್ಯತ್ಯಾಸಗಳಾಗಿವೆ ಎನ್ನುವ ಕಾರಣವನ್ನು ನೀಡಿ ಈ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಪಡಿಸಲಾಯಿತು.

2022ರ ಜುಲೈ 28ರಂದು ಮೂರನೇ ಬಾರಿ ಕರೆಯಲಾಗಿದ್ದ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಈ ಟೆಂಡರ್‌ ಪ್ರಕ್ರಿಯೆಯ ಅವಧಿ 90 ದಿನ ಮುಗಿದಿರುವುದರಿಂದ ಮತ್ತೆ ಹೊಸದಾಗಿ ಟೆಂಡರ್‌ ಕರೆಯಲು ಇಲಾಖೆ ಸಿದ್ಧತೆ ನಡೆಸಿದೆ.

ವಿಭಾಗಗಳು; ಸ್ಯಾನಿಟರಿ ನ್ಯಾಪ್‌ಕಿನ್‌ ಹಂಚಿಕೆ ಮಾಡಬೇಕಿರುವ ಪ್ರಮಾಣ

ಮೈಸೂರು ವಿಭಾಗ; 38,72,112

ಕಲಬುರ್ಗಿ ವಿಭಾಗ; 52,87,931

ಬೆಂಗಳೂರು ವಿಭಾಗ;56,64,189

ಬೆಳಗಾವಿ ವಿಭಾಗ; 70,22,279

ಒಟ್ಟು; 2,18,46,511

‘ಮುಟ್ಟಿನ ನೈರ್ಮಲ್ಯದ ಅರಿವು ಮೂಡಿಸುವ ಯೋಜನೆ’

ಸ್ಯಾನಿಟರಿ ನ್ಯಾಪ್‌ಕಿನ್‌ ಪ್ಯಾಡ್‌ಗಳನ್ನು ಉಚಿತವಾಗಿ ನೀಡುವ ಮೂಲಕ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 2013–14ನೇ ಸಾಲಿನಲ್ಲಿ ‘ಶುಚಿ’ ಯೋಜನೆ ಆರಂಭಿಸಲಾಗಿತ್ತು.

‘ಗ್ರಾಮೀಣ ಪ್ರದೇಶಗಳಲ್ಲಿ ಮುಟ್ಟಿನ ಸ್ರಾವದ ನಿರ್ವಹಣೆಗೆ ಹಳೆಯ ಬಟ್ಟೆ ಬಳಸುವುದು ಮತ್ತು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಕೆಲವೊಮ್ಮೆ ಕುಟುಂಬ ಸದಸ್ಯರು ಬಳಸಿದ ಬಟ್ಟೆಯನ್ನು ಹಂಚಿಕೊಳ್ಳುವುದು ಮತ್ತು ಮರುಬಳಕೆ ಮಾಡುವುದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಇದರಿಂದ, ಸಂತಾನೋತ್ಪತ್ತಿ ಅಂಗಾಂಗಗಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದ್ದು, ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುರಕ್ಷಿತ ಸ್ಯಾನಿಟರಿ ನ್ಯಾಪ್‌ಕಿನ್‌ ಪ್ಯಾಡ್‌ಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳನ್ನು ಪರಿಹರಿಸಬಹುದು’ ಎಂದು ಆರೋಗ್ಯ ಇಲಾಖೆ ನಿರ್ದೇಶಕರು ವರದಿ ಸಲ್ಲಿಸಿದ್ದರು. ಹೀಗಾಗಿ, ‘ಶುಚಿ’ ಯೋಜನೆ ರೂಪಿಸಲಾಗಿತ್ತು.

ಹೈಕೋರ್ಟ್‌ನಿಂದಲೂ ನಿರ್ದೇಶನ

ಶುಚಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಹೈಕೋರ್ಟ್‌ 2021ರ ಮೇ 3ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆಡಳಿತಾತ್ಮಕ ಅನುಮೋದನೆ ಪಡೆದು 90 ದಿನಗಳಲ್ಲಿ ಸ್ಯಾನಿಟರಿನ್ಯಾಪ್‌ಕಿನ್‌ಗಳನ್ನು ಒದಗಿಸುವುದಾಗಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ನಂತರ, ಇದೇ ವಿಷಯಕ್ಕೆ ಸಂಬಂಧಿಸಿದಂತೆ 2021ರ ಜುಲೈನಲ್ಲಿ ಆರೋಗ್ಯ ಇಲಾಖೆ ಆಯುಕ್ತರಿಗೂ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿತ್ತು.

ಟೆಂಡರ್‌ಗಳನ್ನು ಸ್ವೀಕರಿಸಲಾಗಿದ್ದು, ಕಾರ್ಯಾದೇಶವನ್ನು ನೀಡುವಂತೆ ಕೆಎಸ್‌ಎಂಎಸ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಆದರೆ, ಅವರು ಇದುವರೆಗೆ ನೀಡಿಲ್ಲ.

- ಡಿ. ರಂದೀಪ್‌, ಆರೋಗ್ಯ ಇಲಾಖೆ ಆಯುಕ್ತ

ಶುಚಿ’ಯಂಥ ಮಹತ್ವದ ಯೋಜನೆಗಳನ್ನು ಸ್ಥಗಿತಗೊಳಿಸುವುದೇ ಅಪರಾಧ. ಹೆಣ್ಣು ಮಕ್ಕಳ ಗೌರವ ಕಾಪಾಡುವ ಯೋಜನೆಯನ್ನು ನಿಲ್ಲಿಸುವುದು ಅಮಾನವೀಯ.

- ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT