ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಇಟಿಯಲ್ಲಿ ಗೊಂದಲ ಪ್ರಶ್ನೆಗಳು: ಆಕ್ಷೇಪಣೆಗೆ ಸೂಕ್ತ ಉತ್ತರವಿಲ್ಲ

ಕೃಪಾಂಕಕ್ಕೆ ಅಭ್ಯರ್ಥಿಗಳ ಆಗ್ರಹ
Last Updated 14 ಮಾರ್ಚ್ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆ ಪತ್ರಿಕೆಗಳಲ್ಲಿದ್ದ ಗೊಂದಲದ ಬಗ್ಗೆ ಆಕ್ಷೇಪಣೆ ಸಲ್ಲಿಸಿದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಕೆಲವು ಅಭ್ಯರ್ಥಿಗಳು ದೂರಿದ್ದಾರೆ.

ಅಭ್ಯರ್ಥಿಗಳ ಪ್ರಕಾರ ಪ್ರಶ್ನೆಗಳಲ್ಲೇ ತಪ್ಪಿದ್ದರೂ ಕೃಪಾಂಕ ನೀಡುವ ಬಗ್ಗೆ ಇಲಾಖೆ ಯಾವುದೇ ವಿವರಣೆ ನೀಡಲು ಸಿದ್ಧವಿಲ್ಲ. ಇದರಿಂದ ಪರೀಕ್ಷೆ ಬರೆದವರಿಗೆ ತೊಂದರೆ ಆಗಿದೆ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ಈ ಪರೀಕ್ಷೆ ಫೆಬ್ರುವರಿಯಲ್ಲಿ ನಡೆದಿತ್ತು. ಫಲಿತಾಂಶವೂ ಬಂದಿದ್ದು, ಆದರೆ, ಪ್ರಶ್ನೆಗಳಲ್ಲಿನ ಗೊಂದಲಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿದ್ದರೂ, ಶಿಕ್ಷಣ ಇಲಾಖೆ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆ 1 ರಲ್ಲಿ ಪ್ರಶ್ನೆ ಸಂಖ್ಯೆ 34 (ಇಂಗ್ಲಿಷ್‌) ಪ್ರಶ್ನೆಯೇ ಸರಿ ಇರಲಿಲ್ಲ. ಪ್ರಶ್ನೆ ಹೀಗಿತ್ತು; In the third paragraph, an antonym forvictorian is ಎಂಬ ಪ್ರಶ್ನೆಗೆ victor, vanquished, belief, persecution ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಇದಕ್ಕೆ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಉತ್ತರದಲ್ಲಿ vanquished ಎಂದು ಹೇಳಿದ್ದಾರೆ. ಆದರೆ, ಈ ಪ್ರಶ್ನೆಗೆ ಉತ್ತರ ಇರುವುದು ಎರಡನೇ ಪ್ಯಾರದಲ್ಲಿಯೇ ಹೊರತು, ಮೂರನೇ ಪ್ಯಾರದಲ್ಲಿ ಅಲ್ಲ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದೇವೆ. ಇದಕ್ಕೆ ಉತ್ತರ ನೀಡಿಲ್ಲ ಎಂದು ಅಭ್ಯರ್ಥಿಗಳು ಹೇಳಿದ್ದಾರೆ.

ಪ್ರಶ್ನೆ ಸಂಖ್ಯೆ 96 ರ ಪ್ರಶ್ನೆಯೂ ತಪ್ಪಾಗಿದೆ. ಈ ಬಗ್ಗೆ ಆಕ್ಷೇಪಣೆಯನ್ನು ಇಲಾಖೆ ಒಪ್ಪಿಕೊಂಡಿದೆ. ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವುದಕ್ಕೆ ಬದಲು ಪ್ರಶ್ನೆಯನ್ನೇ ತೆಗೆದು ಹಾಕಿದ್ದಾರೆ. ಅಂಕವನ್ನು 150 ರಿಂದ 149 ಕ್ಕೆ ಇಳಿಸಿ ಅನ್ಯಾಯ ಮಾಡಲಾಗಿದೆ ಎಂದು ದೂರಿದ್ದಾರೆ.

150 ಕ್ಕೆ ತೇರ್ಗಡೆಗೆ 90 ಅಂಕ ನಿಗದಿ ಮಾಡಲಾಗಿತ್ತು. ಬಳಿಕ 149 ಕ್ಕೆ 89 ತೇರ್ಗಡೆ ಅಂಕ ನಿಗದಿ ಮಾಡಲಾಯಿತು. ಎರಡು ಗೊಂದಲಕಾರಿ ಪ್ರಶ್ನೆಗಳಿಗೆ ಕೃಪಾಂಕ ನೀಡಿದ್ದರೆ ಸಾಕಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದರು ಎಂದಿದ್ದಾರೆ.

ಕೇಂದ್ರ ನಡೆಸುವ ಟಿಇಟಿಯಲ್ಲಿ ಒಬಿಸಿ ಯವರಿಗೆ ಉತ್ತೀರ್ಣ ಅಂಕ 83 ಇದೆ. ಆದರೆ ರಾಜ್ಯದ ಟಿಇಟಿಯಲ್ಲಿ 90 ನಿಗದಿ ಮಾಡಲಾಗಿದೆ. ಈ ಬಾರಿ 6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಯಲ್ಲಿ ಸಿಟಿಇಟಿ ಮಾಡಿದವರಿಗೂ ಅವಕಾಶ ನೀಡಲಾಗಿದೆ. ಇದರಿಂದ ರಾಜ್ಯದ ಒಬಿಸಿ ಅಭ್ಯರ್ಥಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT