ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ವಿಚಾರಕ್ಕೆ ತಿಲಾಂಜಲಿ; ಪ್ರತಿಮೆಗೆ ಮನ್ನಣೆ: ಹನುಮಂತಯ್ಯ ಹೇಳಿಕೆ

ಪಠ್ಯಪುಸ್ತಕ ಪರಿಷ್ಕರಣೆ ಕುರಿತ ಚರ್ಚೆಯಲ್ಲಿ ರಾಜ್ಯಸಭಾ ಸದಸ್ಯ ಹನುಮಂತಯ್ಯ ಹೇಳಿಕೆ
Last Updated 16 ಜುಲೈ 2022, 19:35 IST
ಅಕ್ಷರ ಗಾತ್ರ

ಬೆಂಗಳೂರು: ಅಂಬೇಡ್ಕರ್‌ ಅವರ ವಿಚಾರಗಳನ್ನು ಕೈಬಿಟ್ಟು, ಅವರ ಪ್ರತಿಮೆಗಳಿಗಷ್ಟೆ ಆದ್ಯತೆ ನೀಡುವ ಮೂಲಕ ಬಿಜೆಪಿ ದಲಿತ ವೋಟ್‌ ಬ್ಯಾಂಕ್‌ನ ಹೊಸ ರಾಜಕಾರಣ ಆರಂಭಿಸಿದೆ ಎಂದುರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ದೂರಿದರು.

ವಿಶ್ವ ಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ, ವಿಚಾರ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ಪಠ್ಯಪುಸ್ತಕ ಪರಿಷ್ಕರಣೆ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳಿಂದ ದಲಿತ, ತಳ ಸಮುದಾಯಗಳನ್ನು ತುಳಿಯುತ್ತಲೇ ಬಂದಿರುವ ಪುರೋಹಿತಶಾಹಿ ವರ್ಗ ಈಗ ದಲಿತರ ಸಮಾನತೆಯ ಕುರಿತು ಹುಸಿ ಭರವಸೆಗಳನ್ನು ನೀಡುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಸನಾತನ ಧರ್ಮವನ್ನು ಪುನರ್‌ ಪ್ರತಿಷ್ಠಾಪಿಸುವ ಯೋಜನೆ ರೂಪಿಸಿದೆ. ಪುರಾಣಗಳನ್ನೇ ಚರಿತ್ರೆಗಳೆಂದು ಬಿಂಬಿಸಿ, ಗೊಂದಲ ಸೃಷ್ಟಿಸುತ್ತಾ ಕೋಮುವಾದಿ ರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಠ್ಯ ಪರಿಷ್ಕರಣೆ, ಪಠ್ಯ ಕ್ರಮದ ವಿರುದ್ಧ ಈಗ ನಡೆಯುತ್ತಿರುವ ಹೋರಾಟ ಪ್ರಜಾ ಹೋರಾಟವಾಗಿ ರೂಪುಗೊಳ್ಳದಿದ್ದರೆ ಭವಿಷ್ಯದ ಬದಲಾವಣೆ ಅಸಾಧ್ಯ. ಆರ್‌ಎಸ್‌ಎಸ್‌ ಹಿಡಿತದಲ್ಲಿರುವ ಬಿಜೆಪಿ ಮತ್ತಷ್ಟು
ಬಲಿಷ್ಠವಾಗಲಿದೆ ಎಂದು ಎಚ್ಚರಿಸಿದರು.

ಪತ್ರಕರ್ತ ಶಿವಸುಂದರ್‌, ರಾಜ್ಯ ಸರ್ಕಾರದ ಆಡಳಿತ ವಿಧಾನಸೌಧದಿಂದ ಕೇಶವಕೃಪಾಕ್ಕೆ ಸ್ಥಳಾಂತರವಾಗಿದೆ. ಮನುಷ್ಯರಲ್ಲಿನ ಮೃಗತ್ವವನ್ನು ಹೊಸ ಪಠ್ಯ ನೀತಿಯ ಮೂಲಕ ಉದ್ದೀಪನಗೊಳಿಸಿ, ಮೃಗೀಯ ಸಮಾಜ ಕಟ್ಟಲು ಹವಣಿಸಲಾಗುತ್ತಿದೆ ಎಂದು ಆರೋಪಿಸಿದರು.

ಬ್ರಾಹ್ಮಣೀಯ ಭಾರತ ಕಟ್ಟುವ ನೆಪದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನೇ ನಿರಾಕರಣೆ ಮಾಡಲಾಗುತ್ತಿದೆ. ಜಾತಿ ವ್ಯವಸ್ಥೆಯನ್ನೇ ಅದ್ಭುತ ಚಿಂತನೆ ಎಂದು ಪ್ರತಿಪಾದಿಸಲಾಗುತ್ತಿದ್ದು, ವೇದಗಳ ಕಾಲದ ಭಾರತವನ್ನು ಅಪ್ಪಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಹುಸಿ ಶ್ರೇಷ್ಠತೆಯ ವ್ಯಸನಗಳನ್ನು ಮಕ್ಕಳ ತಲೆಗೆ ತುಂಬುವ ಪ್ರಯತ್ನ ನಡೆದಿದೆ ಎಂದು ದೂರಿದರು.

ಸಾಮಾಜಿಕ ಚಿಂತಕಿ ಅಖಿಲಾ ವಿದ್ಯಾಸಂದ್ರ, ಬಿಎಸ್ಸಿ ಓದಿದ ಪಂಡಿತರಿಗೆ ಪಠ್ಯಪುಸ್ತಕ ಪರಿಷ್ಕರಣೆ ಹೊಣೆ ನೀಡುವ ಮೂಲಕ ಬಿಜೆಪಿಯಲ್ಲಿ ಬೌದ್ಧಿಕ ದಿವಾಳಿತನ ಇರುವುದನ್ನು ಸರ್ಕಾರ ದೃಢಪಡಿಸಿದೆ. ಸುಳ್ಳು ಹೇಳುವ ವ್ಯಕ್ತಿ ರೂಪಿಸಿದ ಪಠ್ಯಗಳ ಮೂಲಕ ಸತ್ಯವನ್ನೇ ನಂಬದ ವಿದ್ಯಾರ್ಥಿ ಸಮೂಹ ಸೃಷ್ಟಿಸುವ ಪ್ರಯತ್ನಗಳು ನಡೆದಿದೆ. ಕುಟುಂಬ ಬೇಸಾಯ, ಬೀದಿಬದಿ ವ್ಯಾಪಾರಗಳನ್ನೂ ಸರ್ವನಾಶ ಮಾಡುವ ಕುತಂತ್ರ ನಡೆದಿದೆ ಎಂದು ಆತಂಕ
ವ್ಯಕ್ತಪಡಿಸಿದರು.

ಕವಿ ಎಲ್‌.ಎನ್‌.ಮುಕುಂದರಾಜ್‌, ಆಶೀರ್ವಾದ ಸಂಸ್ಥೆಯ ನಿರ್ದೇಶಕ ರೆ.ಫಾ.ಅರುಣ್‌ ಲೂಯಿಸ್‌
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT