ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಥಲಸ್ಸಿಮಿಯಾ ಕೇಂದ್ರ ಉದ್ಘಾಟಿಸಿದ ಜಾಕಿ ಶ್ರಾಫ್

Last Updated 17 ಡಿಸೆಂಬರ್ 2022, 15:02 IST
ಅಕ್ಷರ ಗಾತ್ರ

ಬೆಂಗಳೂರು: ‘ಥಲಸ್ಸಿಮಿಯಾ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯ ಚಲನಚಿತ್ರೋದ್ಯಮದ ಕಲಾವಿದರೂ ಮುಂದಾಗಬೇಕು’ ಎಂದು ನಟ ಜಾಕಿ ಶ್ರಾಫ್ ಕರೆ ನೀಡಿದರು.

ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ಸಂಕಲ್ಪ ಇಂಡಿಯಾ ಫೌಂಡೇಷನ್‌ನ ರಕ್ತ ಕೇಂದ್ರ, ಮಕ್ಕಳ ಆರೈಕೆ ಕೇಂದ್ರ, ಥಲಸ್ಸಿಮಿಯಾ ಡೇ ಕೇರ್‌ ಕೇಂದ್ರದ ನೂತನ ಕಟ್ಟಡವನ್ನು ವರ್ಚ್ಯುವಲ್‌ ಆಗಿ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು. ‘ಥಲಸ್ಸಿಮಿಯಾ ಬಗ್ಗೆ ದೇಶದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿಯ ಅವಶ್ಯಕತೆಯಿದೆ. ಇದು ಆನುವಂಶಿಕ ಕಾಯಿಲೆಯಾಗಿರುವುದರಿಂದ ಮದುವೆಗೂ ಮುನ್ನ ಇದರ ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಈ ರೋಗದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ನೂತನ ಕಟ್ಟಡವು ವಸಂತನಗರದಲ್ಲಿದೆ.

‘ನಮ್ಮ ಮನೆಯ ಕೆಲಸಗಾರರು, ಡ್ರೈವರ್‌ಗಳೊಂದಿಗೆ ಈ ರೋಗದ ಬಗ್ಗೆ ಚರ್ಚಿಸಿ, ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸರ್ಕಾರವೂ ಸಹ ಥಲಸ್ಸಿಮಿಯಾ ರೋಗದ ಚಿಕಿತ್ಸೆಗೆ ಅಗತ್ಯ ನೆರವು ನೀಡಬೇಕು. ಸಂಕಲ್ಪ ಇಂಡಿಯಾ ಫೌಂಡೇಷನ್‌ ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ’ ಎಂದು ಶ್ಲಾಘೀಸಿದರು.

‘2003ರಲ್ಲಿ ಪ್ರಾರಂಭವಾದ ಸಂಕಲ್ಪ ಇಂಡಿಯಾ ಫೌಂಡೇಷನ್‌ ಸ್ವಯಂ ಪ್ರೇರಿತ ರಕ್ತದಾನ, ಮಕ್ಕಳಲ್ಲಿ ಕಂಡು ಬರುವ ಥಲಸ್ಸಿಮಿಯಾ ರೋಗವನ್ನು ತಡೆಗಟ್ಟುವಲ್ಲಿ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. ಈಗ ನಿತ್ಯ 25ಕ್ಕೂ ಹೆಚ್ಚು ಮಂದಿಗೆ ರಕ್ತವನ್ನು ಪೂರೈಕೆ ಮಾಡುತ್ತಿದ್ದು, ವರ್ಷಕ್ಕೆ 150 ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ದೇಶದಾದ್ಯಂತ 15 ಥಲಸ್ಸಿಮಿಯಾ ಡೇ ಕೇರ್ ಕೇಂದ್ರಗಳಿದ್ದು, ಇದರಲ್ಲಿ 1,764 ಥಲಸ್ಸಿಮಿಯಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಫೌಂಡೇಷನ್‌ ಅಧ್ಯಕ್ಷ ಲಲಿತ್‌ ಪಾರ್ಮರ್‌ ಮಾಹಿತಿ ನೀಡಿದರು.

ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿರುವ ಬಿಎಂಟಿ ಕೇಂದ್ರಗಳ ಮೂಲಕ 350ಕ್ಕೂ ಹೆಚ್ಚು ಮಕ್ಕಳನ್ನು ಅಸ್ಥಿ ಮಜ್ಜೆ ಕಸಿ ಮಾಡಿ ಥಲಸ್ಸಿಮಿಯಾ ರೋಗದಿಂದ ಮುಕ್ತಿಗೊಳಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT