ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ವಿಲಾಸಿ ಜೀವನಕ್ಕಾಗಿ ದುಬಾರಿ ಬೆಲೆ ಸೈಕಲ್‌ ಕಳ್ಳತನ

Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ವಿಲಾಸಿ ಜೀವನಕ್ಕಾಗಿ ನಗರದ ವಿವಿಧೆಡೆ ದುಬಾರಿ ಬೆಲೆಯ ಸೈಕಲ್‌ಗಳನ್ನು ಕಳವು ಮಾಡುತ್ತಿದ್ದ ಕಳ್ಳನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಿಗಣಿ ಭರಮಸಾಗರ ನಿವಾಸಿ ನಾರಾಯಣಸ್ವಾಮಿ(43) ಬಂಧಿತ.

ಆರೋಪಿಯಿಂದ ₹12 ಲಕ್ಷದ 60 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಜೆ.ಪಿ.ನಗರ 8ನೇ ಹಂತದ ಸಾರಥಿ ನಗರದ ನಿವಾಸಿಯೊಬ್ಬರು ಸೈಕಲ್‌ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಆರೋಪಿ ಅವಿವಾಹಿತನಾಗಿದ್ದು, ವೃತ್ತಿಪರ ಸೈಕಲ್‌ ಕಳ್ಳ. ವಿಲಾಸಿ ಜೀವನಕ್ಕೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಸೈಕಲ್‌ಗಳನ್ನು ಕಳ್ಳತನ ಮಾಡುತ್ತಿದ್ದ. ನಗರದ ಹಲವು ಕಡೆ ಸುತ್ತಾಡಿ ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದುಬಾರಿ ಸೈಕಲ್‌ಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ. ಅವುಗಳನ್ನು ಆನೇಕಲ್‌, ಜಿಗಣಿ ಸೇರಿ ಹಲವು ಕಡೆ ಮಾರಾಟ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿಯು ಈ ಹಿಂದೆಯೂ ಸೈಕಲ್‌ ಕಳವು ಪ್ರಕರಣದಲ್ಲಿ ಹಲವು ಬಾರಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಆರೋಪಿಯ ಬಂಧನದಿಂದ ಕೋಣನಕುಂಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮೂರು ಸೈಕಲ್‌ ಕಳವು ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಬುಕ್ಕಸಾಗರ ಹಳ್ಳಿಯಿಂದ 25 ಸೈಕಲ್‌ಗಳು, ಬೇಗೂರು ಕೊಪ್ಪ ರಸ್ತೆಯಲ್ಲಿ 24 ಸೈಕಲ್‌ಗಳು, ಕೊತ್ತನೂರು ಮತ್ತು ಕೋಣನಕುಂಟೆಯಲ್ಲಿ 10 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT